ಜಿಲ್ಲೆ

21 ಲಕ್ಷ ರೂ. ಕಳೆದುಕೊಂಡ ಕೈಗಾರಿಕೋದ್ಯಮಿ

ಮೈಸೂರು: ಕ್ರೆಡಿಟ್ ಕಾರ್ಡ್ ಲಿಮಿಟ್ ಹೆಚ್ಚಿಸುವುದಾಗಿ ಬಂದ ಮೆಸೇಜ್ ನಂಬಿದ ಕೈಗಾರಿಕೋದ್ಯಮಿ ತಮ್ಮ ವಿವರ ನೀಡಿದ್ದರಿಂದ 21 ಲಕ್ಷ ರೂ. ಕಳೆದುಕೊಂಡಿದ್ದಾರೆ.

ನಗರದ ಯಾದವಗಿರಿ ವಿವೇಕಾನಂದ ರಸ್ತೆಯ ಎಚ್.ಎಂ.ಗೌಸ್(76) ಹಣ ಕಳೆದುಕೊಂಡವರು. ಎರಡು ದಿನಗಳ ಹಿಂದೆ ಕ್ರೆಡಿಟ್‌ನ ಸಾಲ ನೀಡುವ ಲಿಮಿಟ್ ಹೆಚ್ಚಿಸುವುದಾಗಿ ಗೌಸ್ ಅವರ ಮೊಬೈಲ್ಗೆ ಎಸ್‌ಎಂಎಸ್ ಬಂದಿದೆ. ಇದನ್ನು ನಂಬಿದ ಅವರು ಎಸ್‌ಎಂಎಸ್ ಕ್ಲಿಕ್ ಮಾಡಿ ಅದರಲ್ಲಿ ತಮ್ಮ ಇಮೇಲ್, ಕ್ರೆಡಿಟ್ ಕಾರ್ಡ್ ಸಂಖ್ಯೆ, ಜನ್ಮ ದಿನಾಂಕ ಸೇರಿದಂತೆ ಇನ್ನಿತರ ವಿವರವನ್ನು ನೀಡಿದ್ದಾರೆ.

ವಿವರ ಪಡೆದವರು ಗೌಸ್ ಅವರ ಎಚ್‌ಡಿಎಫ್‌ಸಿ ಕ್ರೆಡಿಟ್ ಕಾರ್ಡ್‌ನಿಂದ 1,00,485 ರೂ. ಡ್ರಾ ಮಾಡಿದ್ದಾರೆ. ಈ ಸಂದೇಶ ಬರುತ್ತಿರುವಂತೆಯೇ ಎಚ್ಚೆತ್ತ ಕಾರ್ಡ್ ಬ್ಲಾಕ್ ಮಾಡಿಸಿದ್ದಾರೆ. ಆದರೆ ಇದೇ ಸಮಯದಕ್ಕೆ ಐಡಿಎಫ್‌ಸಿ ಬ್ಯಾಂಕ್ ಖಾತೆಯಲ್ಲಿದ್ದ 20 ಲಕ್ಷ ರೂ.ಗಳನ್ನು ಸಹ ಡ್ರಾ ಮಾಡಿದ್ದಾರೆ. ವಂಚನೆಗೆ ಒಳಗಾದ ಗೌಸ್ ಅವರು ಸೆನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.