ಜಿಲ್ಲೆ

20ರಿಂದ ದೀಪಾವಳಿ ದೀವಟಿಗೆ ಉತ್ಸವ

ಬೆಟ್ಟದಪುರ: ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರದಲ್ಲಿ ಅ.20ರಿಂದ 22 ರವರೆಗೆ ನಡೆಯಲಿರುವ ಶ್ರೀಸಿಡಿಲು ಮಲ್ಲಿಕಾರ್ಜುನಸ್ವಾಮಿ ದೇವರ ದೀಪಾವಳಿ ದೀವಟಿಗೆ ಉತ್ಸವದ ಪೂರ್ವಭಾವಿ ಸಭೆಯನ್ನು ದೇವಸ್ಥಾನದ ಆವರಣದಲ್ಲಿ ಸೋಮವಾರ ತಹಸೀಲ್ದಾರ್ ಜೆ.ನಿಸರ್ಗ ಪ್ರಿಯಾ ನೇತೃತ್ವದಲ್ಲಿ ಏರ್ಪಡಿಸಲಾಗಿತ್ತು.

ದೇವರ ಉತ್ಸವವನ್ನು ಸಂಪ್ರದಾಯ ಹಾಗೂ ವೈಭವಯುತವಾಗಿ ನಡೆಸಬೇಕಾದ ಪೂರ್ವ ಮುಂಜಾಗ್ರತೆ ಕ್ರಮ, ಉತ್ಸವಕ್ಕೆ ಸಂಬಂಧಪಟ್ಟ ಎಲ್ಲ ವಿಚಾರಗಳ ಬಗ್ಗೆ ಗ್ರಾಮಸ್ಥರೊಂದಿಗೆ ಚರ್ಚಿಸಲಾಯಿತು.

ಉತ್ಸವ ಮೂರ್ತಿಗಳನ್ನು ರಾತ್ರಿ ಸಮಯದಲ್ಲಿ ಹೊರುವಾಗ ನಮಗೆ ವಿದ್ಯುತ್ ಸೌಲಭ್ಯ ಹಾಗೂ ಪೊಲೀಸ್ ರಕ್ಷಣಾ ವ್ಯವಸ್ಥೆ ಮಾಡಿಸಿಕೊಡಬೇಕು ಎಂದು ಸಮುದಾಯದ ಮುಖಂಡರು ಬೇಡಿಕೆ ಇಟ್ಟರು, ಇದಕ್ಕೆ ಪ್ರತಿಕ್ರಿಯೆ ನೀಡಿದ ತಹಸೀಲ್ದಾರ್,ಲ್ಯಾಂಪ್ ವ್ಯವಸ್ಥೆ ಮತ್ತು ವಿದ್ಯುತ್ ಸೌಕರ್ಯ ಹಾಗೂ ಪೊಲೀಸರನ್ನು ಉತ್ಸವದ ಜತೆ ನಿಯೋಜಿಸಲಾಗುವುದು. ಉತ್ಸವ ಮುಗಿದ ಬಳಿಕ ದೇವಾಲಯದ ಸುತ್ತ ಹಾಗೂ ಬೆಟ್ಟದಲ್ಲಿ ಕಂದಾಯ ಹಾಗೂ ಪಂಚಾಯಿತಿ ಒಳಗೊಂಡಂತೆ ಸ್ವಯಂಸೇವಕರು ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರಾರ್ಥಿಗಳನ್ನು ಬಳಸಿಕೊಂಡು ಸ್ವಚ್ಛತೆ ಕಾರ್ಯಕ್ಕೆ ಮುಂದಾಗಬೇಕು ಎಂದರು.

ತಹಸೀಲ್ದಾರ್ ಜೆ.ನಿಸರ್ಗ ಪ್ರಿಯಾ ಮಾತನಾಡಿ, ಹಬ್ಬದ ಹಿನ್ನೆಲೆಯಲ್ಲಿ ಬೆಟ್ಟದ ಮೇಲೆ ವ್ಯಾಪಾರ ಮಾಡುವ ವ್ಯಾಪಾರಸ್ಥರು ಕಂದಾಯ ಇಲಾಖೆ ಹಾಗೂ ಗ್ರಾಮ ಪಂಚಾಯಿತಿಯ ಬಳಿ ಅನುಮತಿ ಪಡೆದು ವ್ಯಾಪಾರ ನಡೆಸಬೇಕು. ಭಕ್ತರು ಬೆಟ್ಟ ಹತ್ತುವ ಸಂದರ್ಭದಲ್ಲಿ ಪ್ಲಾಸ್ಟಿಕ್ ಬಾಟಲ್ ಹಾಗೂ ಇನ್ನಿತರ ವಸ್ತುಗಳನ್ನು ಕೊಂಡೊಯ್ಯುತ್ತಾರೆ. ಅಲ್ಲಿ ವ್ಯಾಪಾರ ಮಾಡುವ ವ್ಯಾಪಾರಸ್ಥರು ಅಲ್ಲಲ್ಲಿ ಕಸದ ಬುಟ್ಟಿಯನ್ನು ಇಟ್ಟು ಕಸದ ನಿರ್ವಹಣೆ ಮಾಡುವುದು ಅವರದೇ ಜವಾಬ್ದಾರಿಯಾಗಿದೆ. ಪ್ರತಿಯೊಬ್ಬರೂ ಇದನ್ನು ಪಾಲಿಸಬೇಕು, ಬೆಟ್ಟದ ತಪ್ಪಲಿನಲ್ಲಿ ಭಕ್ತರಿಗೆ ಶೌಚಗೃಹ, ಕುಡಿಯುವ ನೀರು ಹಾಗೂ ವಾಹನ ನಿಲುಗಡೆಯ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು. ಬೆಟ್ಟದ ಸುತ್ತ ಮೂರು ಕಡೆ ತಾತ್ಕಾಲಿಕ ಆರೋಗ್ಯ ಚಿಕಿತ್ಸಾಲಯವನ್ನು ತೆರೆಯಬೇಕು ಹಾಗೂ ಅಲ್ಲಲ್ಲಿ ಕುಡಿಯುವ ನೀರಿನ ಟ್ಯಾಂಕ್ ವ್ಯವಸ್ಥೆ ಮಾಡಬೇಕು. ಬೆಟ್ಟದ ಮೆಟ್ಟಿಲುಗಳನ್ನು ಅರಣ್ಯ ಇಲಾಖೆ ವತಿಯಿಂದ ಸ್ವಚ್ಛಗೊಳಿಸಬೇಕು ಎಂದು ಸೂಚಿಸಿದರು.]

ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜಶೇಖರ್, ಉಪ ತಹಸೀಲ್ದಾರ್ ಶಶಿಧರ್, ಪಿಡಿಒ ಮಂಜುನಾಥ್, ಕಂದಾಯ ನಿರೀಕ್ಷಕ ಪಾಂಡುರಂಗ, ಗ್ರಾಮ ಲೆಕ್ಕಾಧಿಕಾರಿಗಳಾದ ನಿರಂಜನ್, ಅಯ್ಯಪ್ಪ, ಕುಮುದಾ, ಚೈತ್ರಾ, ಗುರುನಾಯಕ್, ಪ್ರಧಾನ ಅರ್ಚಕ ಸತೀಶ್ ಕಶ್ಯಪ ಹಾಗೂ ಕೃಷ್ಣಮೂರ್ತಿ, ಮುಖಂಡರಾದ ಪ್ರಕಾಶ್ ರಾಜೇ ಅರಸ್, ರಾಮೇಗೌಡ, ಶಿವಣ್ಣ, ಆಂಜನೇಯ, ಜಗ್ಗಪ್ಪ, ಮಲ್ಲಯ್ಯ,ರಾಮು, ಮಂಜು, ದೇವರಾಜ್, ಉದಯಕುಮಾರ್,ಮಲ್ಲಿಕಾರ್ಜುನ,ಹರೀಶ್ ರಾಜೇ ಅರಸ್, ವಿಜಯ್‌ರಾಜೇ ಅರಸ್, ಕೃಷ್ಣೇಗೌಡ, ಚೇತನ್, ಹರೀಶ್, ಗ್ರಾಪಂ ಕಾರ್ಯದರ್ಶಿ ಪಾಂಡು, ಹಿರಿಯ ಆರೋಗ್ಯ ನಿರೀಕ್ಷಕ ಕುಮಾರ್, ಗ್ರಾಮದ ಮುಖಂಡರು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.