ಪಾಂಡವಪುರ: ಚುನಾವಣೆ ಸಂದರ್ಭದಲ್ಲಿ ವಿರೋಧ ಪಕ್ಷಗಳ ನಾಯಕರು ಟೀಕೆ ಮಾಡುತ್ತಿದ್ದು, ಶಾಸಕನಾದ ಬಳಿಕ ಕ್ಷೇತ್ರದಲ್ಲಿ ಯಾವ್ಯಾವ ಅಭಿವೃದ್ಧಿ ಕೆಲಸ ಮಾಡಿದ್ದೇನೆ ಎಂಬುದನ್ನು ದಾಖಲೆ ನೀಡುತ್ತೇನೆ ಎಂದು ಶಾಸಕ ಸಿ.ಎಸ್.ಪುಟ್ಟರಾಜು ಹೇಳಿದರು.
ಪಟ್ಟಣದ ಟಿಎಪಿಸಿಎಂಎಸ್ ರೈತ ಸಭಾಂಗಣದಲ್ಲಿ ಗುರವಾರ ಆಯೋಜಿಸಿದ್ದ ಪಂಚರತ್ನ ರಥಯಾತ್ರೆ ಪೂರ್ವಭಾವಿ ಸಭೆ ಹಾಗೂ ಪುನೀತೋತ್ಸವ ಕಾರ್ಯಕ್ರಮಕ್ಕೆ ಶ್ರಮಿಸಿದ್ದ ಪಕ್ಷದ ಕಾರ್ಯಕರ್ತರು ಮತ್ತು ಪುನೀತ್ ಅಭಿಮಾನಿಗಳಿಗೆ ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದರೂ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ಮಂಜೂರು ಮಾಡಿಸುವಲ್ಲಿ ಹಿಂದೆ ಬಿದ್ದಿಲ್ಲ. ನಾನು ಮಾಡಿರುವ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಪಕ್ಷದ ಕಾರ್ಯಕರ್ತರೇ ವಿವರ ಕೊಡುತ್ತಾರೆ ಎಂದರು.
ಜಿಲ್ಲೆಗೆ ಮಂಜೂರಾದ 4 ಪದವಿ ಕಾಲೇಜುಗಳ ಪೈಕಿ 3 ಕಾಲೇಜು ತಾಲೂಕಿಗೆ ಮಂಜೂರಾಗಿವೆೆ. ಮೂರು ಕಿ.ಮೀಗೆ ಒಂದರಂತೆ ವಸತಿ ಶಾಲೆ ಸೇರಿದಂತೆ 12 ಪ್ರೌಢಶಾಲೆಗಳನ್ನು ಕ್ಷೇತ್ರಕ್ಕೆ ತರಲಾಗಿದೆ. ಶಾಸಕನಾಗುವ ವೇಳೆ ಒಂದು ವಿದ್ಯುತ್ ಉಪಕೇಂದ್ರವಿತ್ತು. ಬಿಜೆಪಿ ಸರ್ಕಾರದಲ್ಲಿ ಮಂಜೂರಾಗಿರುವ 5 ಕೇಂದ್ರಗಳು ಸೇರಿದಂತೆ ಕ್ಷೇತ್ರದಲ್ಲಿ 13 ವಿದ್ಯುತ್ ಉಪಕೇಂದ್ರಗಳಿದೆ. ಬಸ್ ಸ್ಟ್ಯಾಂಡ್, 100 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ, ಮಿನಿ ವಿಧಾನಸೌಧ ನಿರ್ಮಿಸಲಾಗಿದೆ ಎಂದು ವಿವರಿಸಿದರು.
ಜಿಲ್ಲೆಯಲ್ಲಿ 20 ರಿಂದ 26ರವರೆಗೆ ರಥಯಾತ್ರೆ: ಡಿ.20ರಿಂದ 26ರವರೆಗೆ ಪಂಚರತ್ನ ರಥಯಾತ್ರೆ ಜಿಲ್ಲೆಯಲ್ಲಿ ಸಂಚರಿಸಲಿದೆ. 20 ರಂದು ಮಳವಳ್ಳಿ, 21 ಮದ್ದೂರು, 22 ಮಂಡ್ಯ, 23 ಶ್ರೀರಂಗಪಟ್ಟಣ, 24 ಪಾಂಡವಪುರ, 25 ಕೆ.ಆರ್.ಪೇಟೆ ಹಾಗೂ 26 ರಂದು ನಾಗಮಂಗಲ ಕ್ಷೇತ್ರದಲ್ಲಿ ಯಾತ್ರೆ ಸಂಚರಿಸಲಿದೆ. ಶ್ರೀರಂಗಪಟ್ಟಣದ ಕೆಆರ್‌ಎಸ್ ಮಾರ್ಗವಾಗಿ ತಾಲೂಕಿಗೆ ಆಗಮಿಸುವ ಯಾತ್ರೆಯನ್ನು ನಾರ್ಥ್‌ಬ್ಯಾಂಕ್ ಬಳಿ ಸ್ವಾಗತಿಸಲಾಗುವುದು. ಬಳಿಕ ಕಟ್ಟೇರಿ, ಅರಳಕುಪ್ಪೆ, ಹರವು ಕ್ಯಾತನಹಳ್ಳಿ, ಕೆನ್ನಾಳು ಮೂಲಕ ಪಟ್ಟಣ ಪ್ರವೇಶಿಸುತ್ತದೆ. ಪಟ್ಟಣದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಎಚ್.ಡಿ.ಕುಮಾರಸ್ವಾಮಿ ಮಾತನಾಡಲಿದ್ದು, ಆನಂತರ ಚಿಕ್ಕಾಡೆ, ದೊಡ್ಡಬ್ಯಾಡರಹಳ್ಳಿ ಮೂಲಕ ದುದ್ದ ಹೋಬಳಿಗೆ ತಲುಪಲಿದೆ. ಅಲ್ಲಿ ಎಚ್‌ಡಿಕೆ ವಾಸ್ತವ್ಯ ಹೂಡಲಿದ್ದಾರೆ. ಅಲ್ಲಿಂದ ಮೇಲುಕೋಟೆ ಮರ್ಗವಾಗಿ ಚಿನಕುರಳಿ ಮೂಲಕ ಕೆ.ಆರ್.ಪೇಟೆ ತಲುಪಲಿದೆ ಎಂದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕಾರ್ಯಕರ್ತರಿಗೆ ಬಾಡೂಟ ಏರ್ಪಡಿಸಲಾಗಿತ್ತು. ಮನ್‌ಮುಲ್ ಅಧ್ಯಕ್ಷ ಬಿ.ಆರ್.ರಾಮ ಚಂದ್ರು, ಮಾಜಿ ಶಾಸಕ ಶಿವಕುಮಾರ್, ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಗುರುಸ್ವಾಮಿ, ಚೆಲುವರಾಜು, ಟಿಎಪಿಸಿಎಂಎಸ್ ಅಧ್ಯಕ್ಷ ಡಿ.ಶ್ರೀನಿವಾಸ್, ಪುರಸಭೆ ಅಧ್ಯಕ್ಷೆ ವಿ.ಕೆ.ಅರ್ಚನಾ ಚಂದ್ರು, ಲಿಂಗರಾಜು(ಗುಣ), ನಂಜೇಗೌಡ ಇತರರು ಇದ್ದರು.