ಜಿಲ್ಲೆ

ಮೈಸೂರಿನ ಶ್ರೀ ಸಪ್ತಮಾತೃಕಾ ದೇವಸ್ಥಾನದಲ್ಲಿ 20ನೇ ಪ್ರತಿಷ್ಠಾ ವರ್ಧಂತಿ ರುದ್ರ ಹೋಮ

ಮೈಸೂರು: ವಿಜಯನಗರ ಮೂರನೇ ಹಂತದ 6ನೇ ಮುಖ್ಯರಸ್ತೆಯ ಶ್ರೀ ಸಪ್ತಮಾತೃಕಾ ಚೌಡೇಶ್ವರಿ ದೇವಸ್ಥಾನದ 20ನೇ ಪ್ರತಿಷ್ಠಾ ವರ್ಧಂತಿ ಉತ್ಸವದ ನಿಮಿತ್ತ ಗುರುವಾರ ರುದ್ರ ಪಾರಾಯಣ ಮತ್ತು ಶ್ರೀರುದ್ರ ಹೋಮ, ಸಕಲ ವಿಧಿವಿಧಾನ ನಡೆಯಿತು.

ಶೃಂಗೇರಿ ಶ್ರೀ ಶಾರದಾ ಪೀಠದ ಪದ್ಧತಿಯಂತೆ ಹಲವಾರು ಋತ್ವಿಜರು ಹೋಮ ನೆರವೇರಿಸಿ ಪೂರ್ಣಾಹುತಿ ಸಮರ್ಪಣೆ ಮಾಡಿದ್ದು ವಿಶೇಷವಾಗಿತ್ತು. ಗಣಪತಿಪೂಜೆ, ವೇದಘೋಷ, ಅಮ್ಮನವರಿಗೆ ಅಭಿಷೇಕ, ಅಲಂಕಾರ ಮತ್ತು ಮಹಾ ಮಂಗಳಾರತಿ ಸಮರ್ಪಿಸಲಾ ಯಿತು. ನೂರಾರು ಭಕ್ತರು ಇದಕ್ಕೆ ಸಾಕ್ಷಿಯಾದರು.

ಈ ಸಂದರ್ಭ ಮಾತನಾಡಿದ ದೇವಾಲಯದ ಟ್ರಸ್ಟಿ ಎಸ್.ಕೆ. ಭಾಸ್ಕರ್, ಮಾತೆಯ ಕೃಪೆಯಿಂದ ಸಕಲ ಸತ್ಕಾರ್ಯಗಳು ಸಾಂಗವಾಗಿ ನೆರವೇರಿದೆ. ಶೃಂಗೇರಿ ಶಾರದಾ ಪೀಠದ ಜಗದ್ಗುರುಗಳ ಕಾರುಣ್ಯ ಮತ್ತು ಕೃಪೆಯಿಂದ ಹತ್ತಾರು ಸಾಮಾಜಿಕ ಸೇವಾ ಕಾರ್ಯಕ್ಕೆ ದೇವಾಲಯ ಮಹತ್ತರ ಹೆಜ್ಜೆ ಇರಿಸಿದೆ ಎಂದರು.

ಮೇ 31ರಂದು ಬೆಳಗ್ಗೆ 9.30ಕ್ಕೆ ದೇಗುಲದ ಸಭಾಂಗಣದಲ್ಲಿ ಮಕ್ಕಳಿಗೆ ಸಾಮೂಹಿಕ ಅಕ್ಷರಾಭ್ಯಾಸ ಹಮ್ಮಿಕೊಳ್ಳಲಾಗಿದ್ದು, ಒಂದು ಸಾವಿರ ವಿದ್ಯಾರ್ಥಿಗಳಿಗೆ ಲೇಖನ ಸಾಮಗ್ರಿ ದಾನ ಮಾಡಲಾಗುವುದು ಎಂದರು.

ದೇವಾಲಯದ ಪ್ರಧಾನ ಅರ್ಚಕರಾದ ದತ್ತಾತ್ರೇಯ ಗಾವಕರ್ ಮತ್ತು ಮಂಜುನಾಥ ಭಟ್ಟ ಹಾಗೂ ಭಕ್ತಾದಿಗಳು ಇದ್ದರು.