ಜಿಲ್ಲೆ

ನೇಹಾ ಹತ್ಯೆ ಖಂಡಿಸಿ ಬೈಕ್‌ ರ್ಯಾಲಿ

Chitradurga - Desk - Pranav Kumar

ಚಿತ್ರದುರ್ಗ: ರಾಜ್ಯವನ್ನೇ ಬೆಚ್ಚಿ ಬೀಳಿಸಿರುವ ನೇಹಾ ಹಿರೇಮಠ ಹತ್ಯೆ ಖಂಡಿಸಿ ಸಾಮಾಜಿಕ ಕಾರ್ಯಕರ್ತರಾದ ರಾಘವೇಂದ್ರ, ಚಿಂತನ್‌ ಬೆಂಗಳೂರಿನಿಂದ ಹುಬ್ಬಳ್ಳಿವರೆಗೂ ಕೈಗೊಂಡಿರುವ ಬೈಕ್‌ ರ್ಯಾಲಿ ಭಾನುವಾರ ಕೋಟೆನಗರಿ ಪ್ರವೇಶಿಸಿತು. ವೀರವನಿತೆ ಒನಕೆ ಓಬವ್ವ ವೃತ್ತದಲ್ಲಿ ಕೆಲ ಕಾಲ ಜಾಗೃತಿ ಮೂಡಿಸಲು ಮುಂದಾದರು.

ಇದೇ ವೇಳೆ ರಾಘವೇಂದ್ರ ಮಾತನಾಡಿ, ವಿದೇಶಗಳಲ್ಲಿ ನಡೆಯುತ್ತಿದ್ದ ದುಷ್ಕೃತ್ಯ ದೇಶವಷ್ಟೇ ಅಲ್ಲದೆ, ನಾಡನ್ನು ಪ್ರವೇಶಿಸಿರುವುದು ನಿಜಕ್ಕೂ ದುರಂತ. ಇಡೀ ನಾಗರಿಕ ಸಮಾಜವೇ ತಲೆತಗ್ಗಿಸುವಂತ ಪ್ರಕರಣಗಳನ್ನು ಸಾರ್ವಜನಿಕರು ಖಂಡಿಸಬೇಕು. ಹಿಂದು ಯುವತಿಯರಲ್ಲಿ ಅರಿವು ಮೂಡಿಸಬೇಕು ಎಂದರು.

ಇದನ್ನು ರಾಜ್ಯದಲ್ಲಿ ನಡೆದ ಘಟನೆ ಎಂದು ಸುಮ್ಮನೆ ಕುಳಿತರೆ, ನಾಳೆ ಯಾರ ಮನೆಗೆ ಬೇಕಾದರೂ ಪ್ರವೇಶಿಸಬಹುದು. ನಮ್ಮ ಹೆಣ್ಣು ಮಕ್ಕಳಿಗೂ ತೊಂದರೆ ಉಂಟಾಗಬಹುದು. ಆದ್ದರಿಂದ ಎಚ್ಚರಿಕೆ ವಹಿಸಬೇಕಾದ ಅಗತ್ಯವಿದೆ ಎಂದು ಸಲಹೆ ನೀಡಿದರು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಎಸ್.ಸಂಪತ್‌ಕುಮಾರ್ ಮಾತನಾಡಿ, ಕರ್ನಾಟಕದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಮತೀಯ ಗಲಭೆಗಳು, ಕೊಲೆಗಳು ಹೆಚ್ಚಾಗುತ್ತಿವೆ. ನೇಹಾ ಪ್ರಕರಣ ಲವ್ ಜಿಹಾದ್ ಅಲ್ಲದೆ, ಮತ್ತೇನಲ್ಲ. ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ದೂರಿದರು.

ಕಾಂಗ್ರೆಸ್ ನಾಯಕರು ಒಂದು ಕೋಮಿನ ಮತ ಪಡೆಯಲು ಓಲೈಕೆ ರಾಜಕಾರಣ ಮೊದಲಿನಿಂದಲೂ ಮಾಡುತ್ತಿದ್ದಾರೆ. ಹೀಗಾಗಿ ಅಪರಾಧಗಳ ಸಂಖ್ಯೆ ಹೆಚ್ಚುತ್ತಿದೆ. ಗಲಭೆಗಳು ಸೃಷ್ಟಿಯಾಗುತ್ತಿವೆ. ನಮ್ಮ ದೇವರನ್ನು ಪೂಜಿಸಲು ಕೂಡ ಭಯದ ವಾತಾವರಣ ಉಂಟಾದರೂ ಅಚ್ಚರಿ ಇಲ್ಲ ಎಂದು ವಾಗ್ದಾಳಿ ನಡೆಸಿದರು.

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಸೂಕ್ತ ತನಿಖೆ ನಡೆಸುವ ಮೂಲಕ ತಪ್ಪಿತಸ್ಥರಿಗೆ ಶಿಕ್ಷೆಗೆ ಗುರಿಪಡಿಸಲು ರಾಜ್ಯದ ಗೃಹ ಸಚಿವರು, ಸರ್ಕಾರ ಮುಂದಾಗಬೇಕು ಎಂದು ಕೋರಿದರು.