ಬೆಂಗಳೂರು: ರಾಜ್ಯದಲ್ಲಿ ಮಾದಕ ವಸ್ತು ಅಕ್ರಮ ಮಾರಾಟ ಜಾಲ ಸಕ್ರಿಯವಾಗಿದ್ದು, ಪೊಲೀಸರು ನಿರಂತರ ಕಾರ್ಯಾಚರಣೆ ನಡೆಸುತ್ತಲೇ ಇದ್ದಾರೆ. ಈ ಜಾಲ ಬಗೆದಷ್ಟು ಆಳ ಎಂಬಂತಿದ್ದು, ಇಂದು(ಗುರುವಾರ) ಬರೋಬ್ಬರಿ ಒಂದು ಕೋಟಿಗೂ ಹೆಚ್ಚು ಬೆಲೆಬಾಳುವ 204 ಕೆಜಿ ಗಾಂಜಾವನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಜಾಲದ ಹಿಂದೆ ರಾಜಕೀಯ ನಾಯಕರೊಬ್ಬರ ಕೈವಾಡ ಇರುವ ಶಂಕೆ ವ್ಯಕ್ತವಾಗಿದೆ.
ನಗರದಲ್ಲಿ ಕಾರ್ಯಾಚರಣೆ ನಡೆಸಿದ ಸಿಸಿಬಿ ಪೊಲೀಸರು ಎರಡು ಕ್ವಿಂಟಾಲ್ ಗಾಂಜಾ ವಶಕ್ಕೆ ಪಡೆದು ಮೂವರನ್ನು ಬಂಧಿಸಿದ್ದಾರೆ. ಆರೋಪಿಗಳಿಂದ ಒಂದು ಲಾರಿ, ಒಂದು ಕಾರು, ಮೂರು ಮೊಬೈಲ್ ಸೇರಿದಂತೆ 204 ಕೆಜಿ ಗಾಂಜಾ ಜಪ್ತಿ ಮಾಡಲಾಗಿದೆ. ಇದನ್ನೂ ಓದಿರಿ ಬಿದಿರು ಬೊಂಬಿನಲ್ಲಿ ಕೆಜಿಗಟ್ಟಲೇ ಗಾಂಜಾ ಪತ್ತೆ!
ರಾಜಾರೋಷವಾಗಿ ಲಾರಿಯಲ್ಲಿ ಗಾಂಜಾ ಸಾಗಣೆ ಮಾಡುತ್ತಿದ್ದ ಆರೋಪದಡಿ ಮೈಸೂರಿನ ಕೈಸರ್ ಪಾಷಾ ಸೇರಿದಂತೆ ಸಮೀರ್ ಮತ್ತು ಇಸ್ಮಾಯಿಲ್ ಎಂಬುವವರನ್ನು ಸಿಸಿಬಿ ಬಂಧಿಸಿದೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಏಕಕಾಲದಲ್ಲಿ ಗಾಂಜಾ ವಶಪಡಿಸಿಕೊಂಡಿರುವುದು ನಗರದಲ್ಲಿ ಇದೇ ಮೊದಲು ಎನ್ನಲಾಗಿದೆ.
ಬಂಧಿತ ಆರೋಪಿ ಕೈಸರ್ ಪಾಷಾ, ಮೈಸೂರು ಮಹಾ ಪಾಲಿಕೆ ಚುನಾವಣೆಯಲ್ಲಿ ಜಿಡಿಎಸ್ನಿಂದ ಸ್ಪರ್ಧಿಸಿ ಸೋತಿದ್ದ.
ಇನ್ಸ್ಪೆಕ್ಟರ್ ಬೊಳೆತ್ತಿನ್ ಹಾಗೂ ವಿರುಪಾಕ್ಷ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಡ್ರಗ್ಸ್ ಪೆಡ್ಲರ್ಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಗಾಂಜಾ ಸಾಗಣೆ ಮಾಡುವಾಗ ಸಿಕ್ಕಿದ್ದ ಆರೋಪಿಗಳು ಗಾಂಜಾ ಪೆಡ್ಲರ್ಸ್ ಎಂದು ಬೆಂಗಳೂರು ನಗರ ಕಮಿಷನರ್ ಕಮಲ್ ಪಂತ್ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಆಂಧ್ರದಿಂದ ಕೆಜಿಗಟ್ಟಲೇ ಗಾಂಜಾ ತಂದು ಬೆಂಗಳೂರಲ್ಲಿ ಮಾರಾಟ ಮಾಡ್ತಿದ್ರು. ಟ್ಯಾಂಕರ್ ಮೂಲಕ ಗಾಂಜಾ ಸಾಗಾಟ ಮಾಡ್ತಿದ್ರು. ರಾಮನಗರ, ಚಾಮರಾಜನಗರ ಭಾಗದ ಕಾಲೇಜು ಸತ್ತಮುತ್ತಲಿಗೂ ಗಾಂಜಾವನ್ನು ಸಪ್ಲೈ ಮಾಡಲಾಗ್ತಿತ್ತು. ಈ ಮಾದಕ ಜಾಲಕ್ಕೆ ಕಡಿವಾಣ ಹಾಕಲು ಪೊಲೀಸ್ ಇಲಾಖೆ ಪಣತೊಟ್ಟಿದೆ ಎಂದು ತಿಳಿಸಿದರು.