ಜಿಲ್ಲೆ

2030ಕ್ಕೆ ಶೇ.70 ಸಾರ್ವಜನಿಕ ಸಾರಿಗೆ ವ್ಯವಸ್ಥೆ ಗುರಿ

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ಬೆಂಗಳೂರಲ್ಲಿ ಸಂಚಾರಸಿಕ್ಕು ಸಮಸ್ಯೆಯಿಂದ ಸಾಕಷ್ಟು ನಷ್ಟ್ಟಗಳಾಗಿದ್ದು, ಸಾರ್ವಜನಿಕ ಸಂಪರ್ಕ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವ ಮೂಲಕ 2030ರಷ್ಟರಲ್ಲಿ ಶೇ.70 ಮಂದಿ ಸಾರ್ವಜನಿಕ ಸಂಪರ್ಕ ವ್ಯವಸ್ಥೆಯನ್ನು ಅವಲಂಬಿಸುವಂತೆ ಮಾಡುವ ಗುರಿ ಹೊಂದಲಾಗಿದೆ ಎಂದು ಸಚಿವ ಪ್ರಿಯಾಂಕ್​ ರ್ಖಗೆ ತಿಳಿಸಿದ್ದಾರೆ.

ನಗರದ ಖಾಸಗಿ ಹೋಟೆಲ್​ನಲ್ಲಿ ಗುರುವಾರ ಆಯೋಜಿಸಿದ್ದ "ಎನ್​ರೂಟ್​: ಪ್ರಾಡಕ್ಟ್​ ಲಾಂಚ್​' ಉದ್ಘಾಟಿಸಿ ಮಾತನಾಡಿದರು. ಮುಂದಿನ ವರ್ಷ ಸಾರಿಗೆ ಸಂಸ್ಥೆಗೆ 4,500 ಹೊಸ ಬಸ್​ ಸೇರ್ಪಡೆ, 95 ಕಿಮೀ ಮೆಟ್ರೋ ಮಾರ್ಗ ವಿಸ್ತರಣೆ, ಉಪನಗರ ರೈಲು ಯೋಜನೆ ಇತ್ಯಾದಿ ಸಾರ್ವಜನಿಕ ಸಂಪರ್ಕ ವ್ಯವಸ್ಥೆಯನ್ನು ಸುಲಭಗೊಳಿಸುವ ಯೋಜನೆಗಳು ಪ್ರಗತಿಯಲ್ಲಿದೆ ಎಂದು ಮಾಹಿತಿ ನೀಡಿದರು.

ಬೆಂಗಳೂರಿನ ಪ್ರಯಾಣಿಕರಿಗೆ ಒಂದೇ ವೇದಿಕೆಯನ್ನು ಬಳಸಿಕೊಂಡು ಮೆಟ್ರೋ, ಬಸ್​ ಮತ್ತು ಕೊನೆಯ ಹಂತದ ಸಂಪರ್ಕ ಪ್ರಯಾಣಗಳನ್ನು ಯೋಜಿಸಲು ಮತ್ತು ಪೂರ್ಣಗೊಳಿಸಲು ಅನುವು ಮಾಡಲು ಬೆಂಗಳೂರು ಮಹಾನಗರ ಸಾರಿಗೆ ನಿಗಮ (ಬಿಎಂಟಿಸಿ) ಮತ್ತು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತದ (ಬಿಎಂಆರ್​ಸಿಎಲ್​) ಮುಕ್ತ ಜನರಲ್​ ಟ್ರಾನ್ಸಿಟ್​ ಫೀಡ್​ ಸ್ಪೆಸಿಫಿಕೇಶನ್​ ಮಾಹಿತಿಯಿಂದ ನಡೆಸಲ್ಪಡುವ ಮೊದಲ ಸೇವೆ "ಎನ್​ರೂಟ್​: ಎ ಮೊಬಿಲಿಟಿ ಆ್ಯಸ್​ ಎ ಸರ್ವೀಸ್​' ಉಪಕ್ರಮಕ್ಕೆ ಚಾಲನೆ ದೊರೆತಿದೆ ಎಂದರು.

ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಬೆಂಗಳೂರು ಒಂದಾಗಿದ್ದು, ಮೂಲಸೌಕರ್ಯ, ಮೊದಲ ಮತ್ತು ಕೊನೆಯ ಹಂತದ ಸಂಪರ್ಕ ಸೌಲಭ್ಯ ಪರಿಹಾರಗಳು, ಡಿಜಿಟಲ್​ ಏಕೀಕರಣ ಮತ್ತು ಮುಖ್ಯವಾಗಿ ಮುಕ್ತಡೇಟಾ ಈ ಸಮಯದ ಅವಶ್ಯಕತೆಯಾಗಿದೆ. ಮುಕ್ತಡೇಟಾ ಸಮಸ್ಯೆಗಳಿಗೆ 10 ತಿಂಗಳಲ್ಲಿ ಪರಿಹಾರ ಕಾಣುವ ಪ್ರಯತ್ನ ಸರ್ಕಾರದ ಮಟ್ಟದಲ್ಲಿ ಮಾಡುತ್ತೇವೆ ಎಂದು ಪ್ರಿಯಾಂಕ್​ ರ್ಖಗೆ ಭರವಸೆ ನೀಡಿದ್ದಾರೆ. ಕಾರ್ಯಕ್ರಮದಲ್ಲಿ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ಆರ್​. ರಾಮಚಂದ್ರನ್​, ಬ್ರ್ಯಾಂಡ್​​ ಬೆಂಗಳೂರು ಸಮಿತಿ ಸದಸ್ಯ ಪ್ರೊ. ರಾಜೀವ್​ ಗೌಡ ಮತ್ತಿತರರು ಇದ್ದರು.

ಮುಕ್ತ ದತ್ತಾಂಶದಿಂದ ಪರಿಹಾರ

ದತ್ತಾಂಶವು ಚುರುಕಾದ ಮತ್ತು ಸುಸ್ಥಿರ ಚಲನಶೀಲತೆಗೆ ಬೆನ್ನೆಲುಬಾಗಿದೆ. ನೈಜ- ಸಮಯದ ಸಾರಿಗೆ ದತ್ತಾಂಶಕ್ಕೆ ಪ್ರವೇಶವನ್ನು ತೆರೆಯುವ ಮೂಲಕ ಸಾರ್ವಜನಿಕ ಸಾರಿಗೆ ಬಳಕೆಯನ್ನು ಸುಧಾರಿಸುವ, ದಟ್ಟಣೆಯನ್ನು ಕಡಿಮೆ ಮಾಡುವ ಮತ್ತು ನಗರ ಚಲನಶೀಲತೆಯನ್ನು ಪರಿವರ್ತಿಸುವ ಕೆಲಸಗಳನ್ನು ಮಾಡಬಹುದು. ಇದರಿಂದ ಪ್ರಯಾಣಿಕರ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಕೊಳ್ಳಬಹುದು. ಸ್ಟಾರ್ಟ್​ಅಪ್​ಗಳು, ಸರ್ಕಾರ ಮತ್ತು ಉದ್ಯಮಗಳು ಒಟ್ಟಿಗೆ ಸೇರುವ ಎನ್​ರೂಟ್​ನಂತಹ ಉಪಕ್ರಮಗಳು, ಮುಕ್ತದತ್ತಾಂಶವು ನೈಜ-ಪ್ರಪಂಚದ ಸವಾಲುಗಳನ್ನು ನೇರವಾಗಿ ಪರಿಹರಿಸುವ ನಾವೀನ್ಯತೆಯನ್ನು ಹೇಗೆ ಹುಟ್ಟುಹಾಕುತ್ತದೆ ಎಂಬುದನ್ನು ಪ್ರದರ್ಶಿಸುತ್ತವೆ ಎಂದು ಐಟಿ&ಬಿಟಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಏಕ್​ ರೂಪ್​ ಕೌರ್​ ತಿಳಿಸಿದರು.