ತಿಪಟೂರು:ದೇಶಾದ್ಯಂತ 2027ರೊಳಗೆ ರೈಲ್ವೆ ಮತ್ತು ಹೆದ್ದಾರಿ ಕಾಮಗಾರಿ ಪೂರ್ಣಗೊಳಿಸಲು ಪ್ರಧಾನಿ ಮೋದಿ ಪಣತೊಟ್ಟಿದ್ದು, ಅದರಂತೆ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು ಎಂದು ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ಸೂಚಿಸಿದರು.
ನಗರದ ಕಲ್ಪತರು ಇಂಜಿನಿಯರಿಂಗ್ ಕಾಲೇಜು ಸಭಾಂಗಣದಲ್ಲಿ ಆಯೋಜಿಸಿದ್ದ ರೈಲ್ವೆ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಮತ್ತು ಸಾರ್ವಜನಿಕರ ಕುಂದು ಕೊರತೆ ಹಾಗೂ ಜನಸಂಪರ್ಕ ಸಭೆಯಲ್ಲಿ ಮಾತನಾಡಿದ ಅವರು, ಬಡವರ ಪರವಾಗಿ ಕೆಲಸ ಮಾಡುವುದು ಸರ್ಕಾರದ ಕೆಲಸವಾಗಿದ್ದು, ಅಧಿಕಾರಿಗಳು ಜವಾಬ್ದಾರಿ ಅರಿತು ಸಾರ್ವಜನಿಕರಿಗೆ ಹಾಗೂ ಸಮಸ್ಯೆ ಹೊತ್ತು ಬರುವವರಿಗೆ ಸ್ವಂದಿಸುವ ಕೆಲಸ ಮಾಡಿದರೆ ಭಗವಂತ ಉನ್ನತ ಮಾರ್ಗ ತೋರಿಸುತ್ತಾನೆ ಎಂದರು.
ಸಾರ್ವಜನಿಕರ ಸಮಸ್ಯೆಯಲ್ಲಿ ಬಹು ಮುಖ್ಯವಾಗಿ ನಗರದ ಹಾಸನ ರಸ್ತೆಯ ಮೇಲ್ಸೇತುವೆ ನಿಮಾರ್ಣಕ್ಕೆ ಸಾಕಷ್ಟು ಅರ್ಜಿಗಳು ಬಂದಿದ್ದು, ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವಿಳಂಬದ ಬಗ್ಗೆ ನೊಂದವರು ಅರ್ಜಿ ನೀಡಿದರು. ಭೂಸ್ವಾಧಿನಕ್ಕೆ ಸಂಬಂಧಿಸಿದಂತೆ ಎಲ್ಲ ಸಮಸ್ಯೆ ಬಗೆಹರಿಸಿದ್ದು, ಮುಂದಿನ 6 ತಿಂಗಳಲ್ಲಿ ತುಮಕೂರು-, ತಿಪಟೂರು ಗಡಿಯ ಹೆದ್ದಾರಿಯ ಕಾಮಗಾರಿಯನ್ನು ಪೂರ್ಣಗೊಳಿಸಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗುವುದು ಎಂದು ಸೋಮಣ್ಣ ಭರವಸೆ ನೀಡಿದರು.
ಕೇಂದ್ರ ಸರ್ಕಾರದ ಕಾರ್ಯವೈಖರಿಯೇ ಬೇರೆ, ರಾಜ್ಯ ಸರ್ಕಾರದ ಕಾರ್ಯ ವೈಖರಿ ಬೇರೆ. ರಾಜ್ಯ ಸರ್ಕಾರಗಳಲ್ಲಿ ಒಂದು ನಿಮಿಷಕ್ಕೆ ಆದೇಶ ಮಾಡಬಹುದು, ಆದರೆ ಕೇಂದ್ರ ಸರ್ಕಾರದಲ್ಲಿ ಯಾವುದೇ ಆದೇಶಗಳನ್ನು ಮಾಡುವ ಮೊದಲು ಅದರ ಸಾಧಕ&ಬಾಧಕಗಳ ಪಟ್ಟಿ ಮಾಡಿ, ನಂತರ ಆದೇಶ ಮಾಡಲಾಗುತ್ತದೆ ಒಮ್ಮೆ ಮಾಡಿದ ಆದೇಶ ರದ್ದು, ಮಾಡುವ ಅಥವಾ ವಜಾಗೊಳಿಸುವ ಪ್ರಸಂಗವಿರುವುದಿಲ್ಲ. ಆದ್ದರಿಂದ ಯೋಚಿಸಿ ಕೇಂದ್ರ ಸರ್ಕಾರ ಯೋಜನೆಗಳನ್ನು ಸಿದ್ಧಪಡಿಸಲಾಗುತ್ತದೆ. ಅದರಂತೆ ಮಾಜಿ ಸಚಿವ ಬಿ.ಸಿ.ನಾಗೇಶ್ ಹಾಗೂ ಶಾಸಕ ಕೆ.ಷಡಕ್ಷರಿ ಮನವಿಯ ಮೇರೆಗೆ ಎರಡು ಜನಶತಾಬ್ದಿ ರೈಲುಗಳ ನಿಲುಗಡೆ ಮಾಡಲಾಗಿದೆ ಎಂದರು. ಸಾರ್ವಜನಿಕ ಜೀವನದಲ್ಲಿ ಅಧಿಕಾರಿಗಳು ಉತ್ತಮ ರೀತಿಯಲ್ಲಿ ಸ್ವಂದಿಸಬೇಕು ಎಂದ ಸೋಮಣ್ಣ, ಪ್ರಧಾನಿಯವರ ಆಶಯದಂತೆ ತಳಮಟ್ಟದ ಜನಸಾಮಾನ್ಯರನ್ನು ಮೇಲೆತ್ತುವ ಕೆಲಸ ಮಾಡಬೇಕಾಗಿದೆ. ಕೆಳಮಟ್ಟದ ಅಧಿಕಾರಿಗಳು ಜನರಿಗೆ ಸುಳ್ಳು ಮಾಹಿತಿ ನೀಡಬಾರದು. ಸಣ್ಣಪುಟ್ಟ ಆಸೆಗಳಿಗೆ ಬಲಿಯಾಗದೆ ಪ್ರಮಾಣಿಕ, ಜಾಗ್ರತೆಯಾಗಿ ಕೆಲಸನಿರ್ವಹಿಸಬೇಕು ಎಂದರು.
400 ಕಿಲೋ ಮೀಟರ್ ಕಾಮಗಾರಿ ಶ್ರೀ ಪೂರ್ಣ: ಇಡೀ ಲೋಕಸಭಾ ಕ್ಷೇತ್ರದಲ್ಲಿ ತುಮಕೂರು, ಗ್ರಾಮಾಂತರ, ಗುಬ್ಬಿ, ತುರುವೇಕೆರೆ, ತಿಪಟೂರು ವ್ಯಾಪ್ತಿಯಲ್ಲಿರುವ 14 ಲೆವೆಲ್ ಕ್ರಾಸ್ನ ಅನಾಹುತ ತಪ್ಪಿಸಲು ಈಗಾಗಲೇ ಟೆಂಡರ್ ಕೆರಯಲಾಗಿದ್ದು, 2 ವರ್ಷದೊಳಗೆ ಕಾಮಗಾರಿ ಪೂರ್ಣಗೊಳಿಸಲಾಗುವುದು. ಬೆಂಗಳೂರು, ರಾಷ್ಟ್ರೀಯ ಹೆದ್ದಾರಿಗಳ ಕೆಲಸ ಪೂರ್ಣಗೊಳಿಸಿ, ತುಮಕೂರು ಜನಸಂದಣಿ ಗಮನಿಸಿ ರಾಷ್ಟ್ರೀಯ ಹೆದ್ದಾರಿಗಳ ಕೆಲಸ ಪೂರ್ಣಗೊಳಿಸಲಾಗುತ್ತಿದೆ. ಪಾವಗಡ, ಮಧುಗಿರಿ ಕೊರಟಗೆರೆ ಮಾರ್ಗ 207 ಕಿ.ಮೀ ಹಾಗೂ ತುಮಕೂರು, ಶಿರಾ, ಹಿರಿಯೂರು, ದಾವಣಗೆರೆ, ಚಿತ್ರದುರ್ಗ ರೈಲ್ವೆ ಮಾರ್ಗದ 192 ಕಿ.ಮೀ ಸೇರಿ ಒಟ್ಟು 400 ಕಿ.ಮೀ ಉದ್ದದ ರೈಲ್ವೆ ಕಾಮಗಾರಿಯನ್ನು ಜನವರಿ ಹಾಗೂ ಫೆಬ್ರವರಿಯಲ್ಲಿ ಸಾರ್ವಜನಿಕರಿಗೆ ಪ್ರಧಾನಿ ನೇತೃತ್ವದಲ್ಲಿ ಸಮರ್ಪಣೆ ಮಾಡಲಾಗುವುದು ಎಂದು ಸೋಮಣ್ಣ ಭರವಸೆ ನೀಡಿದರು.
ಹಳ್ಳಿಗಾಡಿನ ಜೀವನದಲ್ಲಿ ಬದಲಾವಣೆ ತರುವ ನಿಟ್ಟಿನಲ್ಲಿ, ತಿಪಟೂರಿನಲ್ಲಿ ಸಾರ್ವಜನಿಕರ ಸಭೆ ಆಯೋಜಿಸಲಾಗಿದೆ. ಸರ್ಕಾರದ ಅನುದಾನವು ಸದುಪಯೋಗವಾಗುತ್ತಿದೆಯೇ ಎಂದು ಪರಿಶೀಲನೆ ಮಾಡಲಾಗುತ್ತಿದೆ. ನನ್ನಿಂದ ಯಾರಿಗೂ ಸಣ್ಣ ಅಪ್ರಚಾರವಾಗಬಾರದೆಂದು ತಿಳಿದು ಇಂತಹ ಜನಸಂಪರ್ಕ ಸಭೆ ಆಯೋಜಿಸಲಾಗಿದೆ. 2027ರೊಳಗೆ ರೈಲ್ವೆ ಮತ್ತು ಹೆದ್ದಾರಿ ಕಾಮಗಾರಿ ಪೂರ್ಣಗೊಳಿಸಲು ಪ್ರಧಾನಿ ಮೋದಿ ಅವರು ಸೂಚಿಸಿದ್ದು, ಅದರಂತೆ ಎಲ್ಲ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು.
| ಸೋಮಣ್ಣ, ರೈಲ್ವೆ ಸಚಿವ