ಚಿತ್ರದುರ್ಗ: ದಾವಣಗೆರೆ -ಚಿತ್ರದುರ್ಗ- ತುಮಕೂರು ನೇರ ಹಾಗೂ ತುಮಕೂರು-ರಾಯದುರ್ಗ ರೈಲ್ವೆ ಮಾರ್ಗಗಳನ್ನು 2027ರ ಡಿಸೆಂಬರ್ ಅಂತ್ಯಕ್ಕೆ ಪೂರ್ಣಗೊಳಿಸಿ, ಉದ್ಘಾಟಿಸಲಾಗುವುದು ಎಂದು ಕೇಂದ್ರ ರೈಲ್ವೆ, ಜಲಶಕ್ತಿ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಹೇಳಿದರು.
ಡಿಸಿ ಕಚೇರಿಯಲ್ಲಿ ಶನಿವಾರ ರೈಲ್ವೆ ಮಾರ್ಗಗಳ ಕಾಮಗಾರಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ದೇಶದಲ್ಲಿ ನೆನೆಗುದಿಗೆ ಬಿದ್ದಿದ್ದ ಎಲ್ಲ 7.30 ಲಕ್ಷ ಕೋಟಿ ರೂ. ಮೊತ್ತದ ಯೋಜನೆಗಳನ್ನು ಪೂರ್ಣಗೊಳಿಸುತ್ತಿದ್ದೇವೆ. ರಾಜ್ಯದಲ್ಲಿ 33 ಸಾವಿರ ಕೋಟಿ ರೂ.ವೆಚ್ಚದ ಯೋಜನೆಗಳನ್ನು ಅನುಷ್ಠಾನ ಗೊಳಿಸಲಾಗುತ್ತಿದೆ ಎಂದರು.
ರಾಯದುರ್ಗ-ತುಮಕೂರು ಯೋಜನೆಗೆ ಟೆಂಡರ್ ಆಗಿದೆ. ತುಮಕೂರು-ಚಿತ್ರದುರ್ಗ-ದಾವಣಗೆರೆ ನೇರ ರೈಲ್ವೆ ಯೋಜನೆಗೆ ಭೂ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಿ, ಶೀಘ್ರ ಕಾಮಗಾರಿ ಅನುಷ್ಠಾನಗೊಳಿಸಲಾಗುವುದು. ಈ ಮಾರ್ಗಕ್ಕೆ ಚಳ್ಳಕೆರೆಯಿಂದ ಹಿರಿಯೂರಿಗೆ ಹೊಸದಾಗಿ ರೈಲ್ವೆ ಸಂಪರ್ಕ ಕಲ್ಪಿಸಲು ಸರ್ವೆ ನಡೆಸಲಾಗುವುದು. ಇದಕ್ಕಾಗಿ ಸಚಿವ ಡಿ. ಸುಧಾಕರ್, ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ ಬೇಡಿಕೆ ಸಲ್ಲಿಸಿದ್ದಾರೆ ಎಂದರು.
ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ, ಸಂಸದ ಗೋವಿಂದ ಕಾರಜೋಳ ಅವರು ಜಿಲ್ಲೆಯ ಬಹಳಷ್ಟು ರೈಲ್ವೇ ಕೆಳ ಸೇತುವೆಗಳಲ್ಲಿ ನೀರು ನಿಂತು ಸಂಚಾರಕ್ಕೆ ಎದುರಾಗುತ್ತಿರುವ ಸಮಸ್ಯೆಗಳನ್ನು ವಿವರಿಸಿದರು. ಪರಿಶೀಲಿಸಿ ಸಮಸ್ಯೆ ಪರಿಹರಿಸುವಂತೆ ರೈಲ್ವೆ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಹೊಸ ರೈಲ್ವೆ ಮೇಲು ಹಾಗೂ ಕೆಳ ಸೇತುವೆಗಳಿಗೆ ಭೂಸ್ವಾಧೀನವಾಗಬೇಕಾಗಿದೆ. ಭೂಸ್ವಾಧೀನಕ್ಕೆ ಹಾಗೂ ಸೇತುವೆಗಳ ಕಾಮಗಾರಿ ವೆಚ್ಚವನ್ನು ಕೇಂದ್ರ ಭರಿಸಲಿದೆ. ರಾಜ್ಯದಲ್ಲಿ ಪ್ರವಾಸ ಕೈಗೊಂಡು ಕೇಂದ್ರದ ಮಹತ್ವಾಕಾಂಕ್ಷಿ ಯೋಜನೆಗಳನ್ನು ಶೀಘ್ರ ಪರಿಶೀಲಿಸಲಾಗುವುದು ಎಂದು ತಿಳಿಸಿದರು.
ದಾವಣಗೆರೆ-ಚಿತ್ರದುರ್ಗ-ತುಮಕೂರು ನೇರ ರೈಲು ಮಾರ್ಗದಲ್ಲಿ ಶೇ.90 ಭೂಸ್ವಾಧೀನ ಪೂರ್ಣಗೊಂಡಿದೆ. ಇನ್ನುಳಿದ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಿ ರೈಲ್ವೆಗೆ ಭೂಮಿ ಹಸ್ತಾಂತರಿಸುವಂತೆ ಜಿಲ್ಲಾಡಳಿತಕ್ಕೆ ಸೂಚಿಸಿದರು.
ಡಿಸಿ ಟಿ. ವೆಂಕಟೇಶ್ ಮಾತನಾಡಿ, ಈ ಮಾರ್ಗಕ್ಕೆ ಚಿತ್ರದುರ್ಗ ಹಾಗೂ ಹಿರಿಯೂರು ತಾಲೂಕುಗಳು ಸೇರಿ ಅಗತ್ಯವಿರುವ 1211 ಎಕರೆ ಜಮೀನು ಪೈಕಿ 1026 ಎಕರೆ ಜಮೀನು ಅವಾರ್ಡ್ ಆಗಿದೆ. ಜಮೀನು ಮಾಲೀಕರಿಗೆ ಪರಿಹಾರ ವಿತರಿಸಲಾಗಿದೆ ಎಂದು ತಿಳಿಸ್ದಿರು.
ಭರಮಸಾಗರ-ಚಿತ್ರದುರ್ಗ ನಡುವೆ 36 ಕಿ.ಮೀ.ವ್ಯಾಪ್ತಿಯಲ್ಲಿ 348 ಎಕರೆ ಪೈಕಿ 312 ಎಕರೆಯನ್ನು ರೈಲ್ವೆಗೆ ಹಸ್ತಾಂತರಿಸಿದ್ದು, ಕಾಮಗಾರಿ ನಡೆದಿದೆ. ಹೆಚ್ಚುವರಿ 41 ಎಕರೆ ಸ್ವಾಧೀನ ಪ್ರಕ್ರಿಯೆ ಪ್ರಾರಂಭವಾಗಿದೆ. ಚಿತ್ರದುರ್ಗ-ಹಿರಿಯೂರು ಮಾರ್ಗದ 36 ಕಿ.ಮೀ. ವ್ಯಾಪ್ತಿಯಲ್ಲಿ ಅಗತ್ಯವಿರುವ 383 ಎಕರೆ ಪೈಕಿ 338 ಎಕರೆಯನ್ನು ಹಸ್ತಾಂತರಿಸಲಾಗಿದೆ. ಡಿ.ಎಸ್.ಹಳ್ಳಿಯಲ್ಲಿ ಸ್ಟೇಷನ್ ನಿರ್ಮಾಣಕ್ಕೆ 44 ಎಕರೆ ಹೆಚ್ಚುವರಿ ಭೂಮಿ ಸ್ವಾಧೀನ ಪ್ರಕ್ರಿಯೆ ನಡೆದಿದೆ. ಹಿರಿಯೂರು-ತಾವರೆಕೆರೆ ಮಾರ್ಗದ 29 ಕಿ.ಮೀ.ವ್ಯಾಪ್ತಿಯಲ್ಲಿ 478 ಎಕರೆ ಪೈಕಿ 374 ಎಕರೆ ಜಮೀನನ್ನು ಹಸ್ತಾಂತರಿಸಲಾಗಿದೆ ಎಂದರು.
ಎಂಎಲ್‌ಸಿ ಕೆ.ಎಸ್. ನವೀನ್, ರೈಲ್ವೆ ಇಲಾಖೆ ಮುಖ್ಯಆಡಳಿತಾಧಿಕಾರಿ(ನಿರ್ಮಾಣ)ಅಜಯ್ ಶರ್ಮಾ, ಡಿಜಿಎಂ ಮುದಿತ್ ಮಿತ್ತಲ್, ಜಿಪಂ ಸಿಇಒ ಎಸ್.ಜೆ. ಸೋಮಶೇಖರ್, ಎಸ್‌ಪಿ ರಂಜಿತ್ ಕುಮಾರ್‌ಬಂಡಾರು, ಎಡಿಸಿ ಬಿ.ಟಿ. ಕುಮಾರಸ್ವಾಮಿ, ಎಸಿ ಮೆಹಬೂಬ್ ಜಿಲಾನಿ ಖುರೇಷಿ, ವಿಶೇಷ ಭೂಸ್ವಾಧೀನಾಧಿಕಾರಿ ವೆಂಕಟೇಶ್ ಮತ್ತಿತರರು ಇದ್ದರು.
ಕಾರ್ಗೋ ಎಕನಾಮಿಕ್ ಕಾರಿಡಾರ್
ಕೃಷಿ ಮತ್ತು ತೋಟಗಾರಿಕೆ ಬೆಳೆಗಳಿಗೆ ಮಾರುಕಟ್ಟೆ ಒದಗಿಸಲು ದಾವಣಗೆರೆ-ತುಮಕೂರು ನೇರ ರೈಲ್ವೆ ಮಾರ್ಗದ ಶಿರಾ ಅಥವಾ ರೈಲ್ವೆ ಇಲಾಖೆ ನಿರ್ಧರಿಸುವ ಸ್ಥಳದಲ್ಲಿ ರೈಲ್ವೆ ಕಾರ್ಗೋ ಕಾರಿಡಾರ್ ನಿರ್ಮಾಣಕ್ಕೆ ಶಿರಾ ಶಾಸಕ ಟಿ.ಬಿ. ಜಯಚಂದ್ರ ರೈಲ್ವೆ ಸಚಿವ ವಿ. ಸೋಮಣ್ಣ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಸಾಧ್ಯತೆ ಪರಿಶೀಲಿಸುವುದಾಗಿ ಸೋಮಣ್ಣ ಹೇಳಿದರು. ಮೈನಿಂಗ್‌ಗೆ ಸಂಬಂಧಿಸಿದಂತೆ ಅಗತ್ಯ ರೈಲ್ವೆ ಮಾರ್ಗದ ಕುರಿತಂತೆ ಡಾ.ಎಂ. ಚಂದ್ರಪ್ಪ ಸಚಿವರ ಗಮನ ಸೆಳೆದರು.
---
ಭದ್ರಾಕ್ಕೆ ಅನುದಾನ ಕೊಡಿಸಿ
ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಘೋಷಿಸಿರುವ 5300 ಕೋಟಿ ರೂ.ಅನುದಾನ ಕೊಡಿಸುವಂತೆ ಸಚಿವ ವಿ.ಸೋಮಣ್ಣ ಅವರಿಗೆ ಸಚಿವ ಡಿ.ಸುಧಾಕರ್ ಒತ್ತಾಯಿಸಿದರು. ಸಂಸತ್ ಅಧಿವೇಶದಲ್ಲಿ ಈ ಕುರಿತಂತೆ ಅಗತ್ಯ ಕ್ರಮ ವಹಿಸುವುದಾಗಿ ಸೋಮಣ್ಣ ಭರವಸೆ ನೀಡಿದರು.
----