ಜಿಲ್ಲೆ

2023ಕ್ಕೆ ಜೆಡಿಎಸ್ ಸ್ವಂತ ಬಲದಲ್ಲಿ ಸರ್ಕಾರ, ಮಾಜಿ ಪ್ರಧಾನಿ ದೇವೇಗೌಡ ವಿಶ್ವಾಸ, ಜೆಡಿಎಸ್ ಮುಳುಗುವ ಹಡಗಲ್ಲ

ದೇವನಹಳ್ಳಿ: ಅನ್ಯ ಪಕ್ಷಗಳು ಜೆಡಿಎಸ್ ಮುಳುಗುವ ಹಡುಗು ಎನ್ನುವ ಭ್ರಮೆಯಲ್ಲಿವೆ. 2023ರ ಚುನಾವಣೆಯಲ್ಲಿ ನಮ್ಮ ಪಕ್ಷವನ್ನು ಸ್ವಂತ ಬಲದ ಮೇಲೆ ಅಧಿಕಾರಕ್ಕೆ ತರಲಾಗುವುದು ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹೇಳಿದರು.

ದೇವನಹಳ್ಳಿ ಸಮೀಪದ ಮಾಳಿಗೇನಹಳ್ಳಿಯ ಕಲ್ಯಾಣಮಂಟಪದಲ್ಲಿ ಮಂಗಳವಾರ ಆಯೋಜಿಸಿದ್ದ ವಿಧಾನಪರಿಷತ್ ಚುನಾವಣೆ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದರು.

ನಾನು ಕಷ್ಟ ಪಟ್ಟು ಕಟ್ಟಿದ್ದ ಪಕ್ಷವನ್ನು ಪ್ರಬಲವಾಗಿಸುವವರೆಗೂ ನಾನು ವಿರಮಿಸುವುದಿಲ್ಲ ಎಂದರು.

ಹಳ್ಳಿಯ ರೈತನೊಬ್ಬ ಈ ದೇಶದ ಪ್ರಧಾನಮಂತ್ರಿಯಾಗುವವರೆಗೂ ಹೇಗೆ ನಡೆದು ಬಂದ ಎಂಬುದನ್ನು ಹಲವು ಭಾಷೆಗಳಲ್ಲಿ ಹೊರಬರುತ್ತಿರುವ ನನ್ನ ಜೀವನಚರಿತ್ರೆಯಲ್ಲಿ ದಾಖಲಿಸಲಾಗಿದೆ ಎಂದರು.

ಪ್ರಧಾನಿಯಾದಾಗ ಮಹಿಳೆಯರಿಗೆ ಶೇ.33 ಮೀಸಲಾತಿ ಕಲ್ಪಿಸಿದೆ. ರೈತರಿಗಾಗಿ ನೀರಾವರಿ ಸೇರಿ ಹಲವು ಯೋಜನೆ ರೂಪಿಸುವ ಮೂಲಕ ಡಾ.ಅಂಬೇಡ್ಕರ್ ಅವರ ರಾಜ್ಯಾಂಗ ವ್ಯವಸ್ಥೆಯನ್ನು ಅನುಷ್ಠಾನಗೊಳಿಸಲು ಸರ್ವಪ್ರಯತ್ನ ಮಾಡಿದೆ ಎಂ ಅವರು, ಯಾವುದೇ ಕಾರಣಕ್ಕೂ ನಮ್ಮ ಮತಗಳನ್ನು ಬಿಜೆಪಿಗೆ ಹಾಕಬೇಡಿ ಎಂದರು.

ಶಾಸಕ ನಿಸರ್ಗ ನಾರಾಯಣಸ್ವಾಮಿ ಮಾತನಾಡಿ, ಪಕ್ಷದ ಅಭ್ಯರ್ಥಿಗೆ ಮೊದಲ ಪ್ರಾಶಸ್ತ್ಯದ ಮತ ಹಾಕುವಂತೆ ಪ್ರೆರೇಪಿಸಬೇಕು ಎಂದರು.

ಜಿಲ್ಲಾ ಜೆಡಿಎಸ್ ಅಧ್ಯಕ್ಷ ಬಿ.ಮುನೆಗೌಡ ಮಾತನಾಡಿ, ನಮ್ಮಲ್ಲಿ ಪ್ರಚಾರದ ಕೊರತೆ ಇದೆ. ಅನ್ಯ ಪಕ್ಷಗಳು ಸಣ್ಣ ಕೆಲಸ ಮಾಡಿದರೂ ದೊಡ್ಡ ಪ್ರಚಾರ ತೆಗೆದುಕೊಳ್ಳುತ್ತಾರೆ.ಪಕ್ಷ ಬಲಿಷ್ಠಗೊಳಿಸಲು ಎಲ್ಲರೂ ಶ್ರಮಿಸೋಣ ಎಂದರು.

ಅಭ್ಯರ್ಥಿ ರಮೇಶಗೌಡ, ತಾಲೂಕು ಜೆಡಿಎಸ್ ಅಧ್ಯಕ್ಷ ಆರ್.ಮುನೇಗೌಡ, ಪ್ರಧಾನ ಕಾರ್ಯದರ್ಶಿ ಜಿ.ಎ.ರವೀಂದ್ರ, ಪುರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಎಸ್.ನಾಗೇಶ್, ಜಿಪಂ ಮಾಜಿ ಸದಸ್ಯ ನರಸಿಂಹಯ್ಯ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಮುನಿರಾಜು, ಮಾಜಿ ಅಧ್ಯಕ್ಷ ಕೆ.ಸಿ.ವೆಂಕಟೇಗೌಡ, ಎಪಿಎಂಸಿ ಮಾಜಿ ಅಧ್ಯಕ್ಷ ಕೆ.ವಿ.ಮಂಜುನಾಥ್ ಇದ್ದರು.