ಜಿಲ್ಲೆ

2023ಕ್ಕೆ ಎತ್ತಿನಹೊಳೆ ಯೋಜನೆ ಪೂರ್ಣ,  ಸಂಸದ ಬಿ.ಎನ್. ಬಚ್ಚೇಗೌಡ ಭರವಸೆ, ಹುಟ್ಟುಹಬ್ಬದ ಪ್ರಯುಕ್ತ ಸೌಮ್ಯ ಕೇಶವಸ್ವಾಮಿ ದೇಗುಲದಲ್ಲಿ ವಿಶೇಷ ಪೂಜೆ

ವಿಜಯಪುರ: ಕುಡಿಯುವ ನೀರಿನ ರಾಷ್ಟ್ರೀಯ ಯೋಜನೆಯಾದ ಎತ್ತಿನಹೊಳೆ ಯೋಜನೆಯನ್ನು ಪೂರೈಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬದ್ಧವಾಗಿದ್ದು, 2023ಕ್ಕೆ ಯೋಜನೆ ಪೂರ್ಣಗೊಳ್ಳಲಿದೆ ಎಂದು ಸಂಸದ ಬಿ.ಎನ್. ಬಚ್ಚೇಗೌಡ ಭರವಸೆ ನೀಡಿದರು.

ಶಾಸಕರು ಹುಟ್ಟುಹಬ್ಬದ ಪ್ರಯುಕ್ತ ಮನೆದೇವರಾದ ವಿಜಯಪುರದ ಶ್ರೀ ಸೌಮ್ಯಕೇಶವಸ್ವಾಮಿ ದೇಗುಲಕ್ಕೆ ಪತ್ನಿ ಉಮಾ ಅವರ ಜತೆಗೂಡಿ ಶುಕ್ರವಾರ ಭೇಟಿ ನೀಡಿದ್ದ ಅವರು ವಿಶೇಷ ಪೂಜೆ ಸಲ್ಲಿಸಿ, ಸುದ್ದಿಗಾರರ ಜತೆ ಮಾತನಾಡಿದರು.

ಈ ಯೋಜನೆಯ ಬಗ್ಗೆ ಕೇಂದ್ರ ಜಲಸಂಪನ್ಮೂಲ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರ ಬಳಿ ಸಿಎಂ ಬಸವರಾಜ ಬೊಮ್ಮಾಯಿ ಮತ್ತು ರಾಜ್ಯದ ಸಂಸದರು ಹಾಗೂ ಸಚಿವರು ಚರ್ಚಿಸಿದ್ದಾರೆ. ಈಗಾಗಲೇ ಕೊರಟಗೆರೆ ಭಾಗದಲ್ಲಿ ಬೈರಗೊಂಡ್ಲು ಜಲಾಶಯ ನಿರ್ಮಾಣಕ್ಕೆ ಭೂಸ್ವಾಧೀನ ಪ್ರಕ್ರಿಯೆ ನಡೆಯುತ್ತಿದೆ. ಸರ್ಕಾರ ಜಮೀನಿನ ಬೆಲೆ ನಿಗದಿಪಡಿಸಿರುವ ವಿಷಯದಲ್ಲಿ ಗೊಂದಲ ಉಂಟಾಗಿದೆ. ಶೀಘ್ರವೇ ಇದಕ್ಕೆ ಪರಿಹಾರ ಕಂಡುಕೊಳ್ಳಲಾಗುವುದು ಎಂದರು.

ಈ ಯೋಜನೆ ಪೂರ್ಣಗೊಂಡಲ್ಲಿ ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ ಜಿಲ್ಲೆಗಳ 33 ಸಾವಿರಕ್ಕೂ ಹೆಚ್ಚು ಗ್ರಾಮಗಳ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯುತ್ತದೆ ಎಂದರು.

ಜಿಪಂ ಮಾಜಿ ಅಧ್ಯಕ್ಷ ಸಿ. ಮುನಿಯಪ್ಪ, ದೊಡ್ಡನಲ್ಲಾಳ ಗ್ರಾಪಂ ಉಪಾಧ್ಯಕ್ಷ ಗೋಪಾಲ್, ಚಿಕ್ಕತತ್ತಮಂಗಲದ ನಾರಾಯಣಸ್ವಾಮಿ, ಜಿಲ್ಲಾ ಪೌರಕಾರ್ಮಿಕ ಸಂಘದ ಸಂಚಾಲಕ ನಾಗರಾಜು, ಮುಖಂಡರಾದ ಶ್ರೀನಿವಾಸ್, ರಮೇಶ್ ಅವರು ಬಿ.ಎನ್.ಬಚ್ಚೇಗೌಡ ಅವರಿಗೆ ಶುಭಕೋರಿದರು. ಅರ್ಚಕರಾದ ಮುರಳೀಧರ್ ಭಟ್ಟಾಚಾರ್ಯ, ರಾಜು ಭಟ್ಟಾಚಾರ್ಯ ಪೂಜಾ ಕೈಂಕರ್ಯ ನೆರವೇರಿಸಿದರು.