ಧಾರವಾಡ: ಜಿಲ್ಲೆಯಲ್ಲಿ ಸೋಮವಾರ ಕೋವಿಡ್ 201 ಪಾಸಿಟಿವ್ ಪ್ರಕರಣ ಪತ್ತೆಯಾಗಿವೆ. ಒಟ್ಟು ಪ್ರಕರಣಗಳ ಸಂಖ್ಯೆ 7,852ಕ್ಕೆ ಏರಿದೆ. ಇದುವರೆಗೆ 5,021 ಜನ ಚೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 2,592 ಪ್ರಕರಣಗಳು ಸಕ್ರಿಯವಾಗಿವೆ.
36 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಮವಾರ ಐವರು ಮೃತಪಟ್ಟಿದ್ದಾರೆ. ಇದರಿಂದ ಒಟ್ಟು ಸಾವಿನ ಸಂಖ್ಯೆ 239ಕ್ಕೆ ಏರಿದೆ.
ಸೋಮವಾರದ ಪ್ರಯೋಗಾಲಯ ವರದಿ ಪ್ರಕಾರ, ಹುಬ್ಬಳ್ಳಿ ಶಹರ ಮತ್ತು ಗ್ರಾಮೀಣ ಭಾಗ ಸೇರಿ 45 ಪ್ರದೇಶಗಳಲ್ಲಿ ಕರೊನಾ ಸೋಂಕಿತರು ಕಂಡುಬಂದಿದ್ದಾರೆ. ಶಹರ ಪ್ರದೇಶದಲ್ಲೇ ಹೆಚ್ಚಿನ ಪ್ರಕರಣಗಳು ವರದಿಯಾಗಿವೆ. ಕೆಲ ಭಾಗಗಳಲ್ಲಿ ಹೆಚ್ಚು ಕಡಿಮೆ ನಿತ್ಯವೂ ಒಂದಲ್ಲ ಒಂದು ಪ್ರಕರಣ ವರದಿಯಾಗುತ್ತಿದೆ.
ಧಾರವಾಡ ಶಹರ ಮತ್ತು ಗ್ರಾಮೀಣ ಭಾಗ ಸೇರಿ 42 ಕಡೆಗಳಲ್ಲಿ ಸೋಂಕಿತರು ಕಂಡುಬಂದಿದ್ದಾರೆ. ಕೆಲವು ಕಡೆಗಳಲ್ಲಿ ಒಂದಕ್ಕಿಂತ ಹೆಚ್ಚಿನ ಸೋಂಕಿತರು ಕಂಡುಬಂದಿದ್ದಾರೆ.
ಕಲಘಟಗಿ ತಾಲೂಕಿನ ಬಿದರಗಡ್ಡಿ, ಮಿಶ್ರಿಕೋಟಿ, ಹುಣಸಿಕಟ್ಟಿ, ವಲಯ ಅರಣ್ಯಾಧಿಕಾರಿ ಕಚೇರಿ ಬಳಿ; ಕುಂದಗೋಳ ತಾಲೂಕಿನ ಹಂಚಿನಾಳ, ಸಂಶಿ ಸಿದ್ಧೇಶ್ವರ ಪ್ಲಾಟ್, ಕುಲಕರ್ಣಿ ಗಲ್ಲಿ, ನಾಡಿಗೇರ ಓಣಿ; ನವಲಗುಂದ ತಾಲೂಕಿನ ಅಂಬೇಡ್ಕರ್ ಕಾಲನಿ, ದಾಟನಾಳ ಬೆಂತೂರ ಓಣಿ, ಕುರಬರ ಓಣಿ, ಬಲ್ಲರವಾಡ, ಕಾಲವಾಡ, ಯಮನೂರ ಬಸ್ ನಿಲ್ದಾಣ, ಹೆಬ್ಬಾಳ, ನವಲಗುಂದ ಓಣಿ, ಶಲವಡಿ ಗ್ರಾಮದ ಶಾನಭೋಗರ ಓಣಿ, ಮೈಲಾರಲಿಂಗೇಶ್ವರ ಓಣಿ, ಮಹಾದೇವರ ಗುಡಿ ಹತ್ತಿರ, ದೇಸಾಯಿ ಪೇಟಿ ಓಣಿ, ಶಿರೂರ ಗ್ರಾಮದಲ್ಲಿ ಕರೊನಾ ಪ್ರಕರಣಗಳು ಕಂಡುಬಂದಿವೆ.
ಬೆಳಗಾವಿ, ಹಾವೇರಿ, ಬಾಗಲಕೋಟೆ, ಕೊಪ್ಪಳ, ಗದಗ, ಉತ್ತರ ಕನ್ನಡ ಜಿಲ್ಲೆಯ ಕೆಲವು ಕಡೆಯ ಸೋಂಕಿತರು ಧಾರವಾಡ ಜಿಲ್ಲೆಯ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ.
ಎಲ್ಲರ ವರದಿಗಳು ನೆಗೆಟಿವ್
ಹುಬ್ಬಳ್ಳಿ: ವಾಕರಸಾ ಸಂಸ್ಥೆಯ ಹುಬ್ಬಳ್ಳಿ ಘಟಕದಲ್ಲಿ 48 ಹಾಗೂ ನವಲಗುಂದದಲ್ಲಿ 12 ಜನ ಸಾರಿಗೆ ಸಿಬ್ಬಂದಿಯ ತ್ವರಿತ ಕರೊನಾ ಪರೀಕ್ಷೆ ನಡೆಸಲಾಗಿದ್ದು, ಎಲ್ಲರ ವರದಿಗಳು ನೆಗೆಟಿವ್ ಬಂದಿವೆ ಎಂದು ಹುಬ್ಬಳ್ಳಿ ಗ್ರಾಮೀಣ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ತಿಳಿಸಿದ್ದಾರೆ. ಸಂಸ್ಥೆಯ ಸಿಬ್ಬಂದಿ ಹಾಗೂ ಪ್ರಯಾಣಿಕರ ಹಿತದೃಷ್ಟಿಯಿಂದ ಜಿಲ್ಲಾ ಮತ್ತು ತಾಲೂಕು ಆರೋಗ್ಯ ಇಲಾಖೆ ವತಿಯಿಂದ ಸಂಸ್ಥೆ ಹುಬ್ಬಳ್ಳಿ ವಿಭಾಗದ ಗ್ರಾಮಾಂತರ-2ನೇ ಘಟಕದಲ್ಲಿ ಹಾಗೂ ನವಲಗುಂದ ಬಸ್ ನಿಲ್ದಾಣದಲ್ಲಿ ತ್ವರಿತ ಕರೊನಾ ಪರೀಕ್ಷೆ ಶಿಬಿರ ಹಮ್ಮಿಕೊಳ್ಳಲಾಗಿತ್ತು ಎಂದು ಹೇಳಿದ್ದಾರೆ.
EndFragment