ಜಿಲ್ಲೆ

2018ರ ಚುನಾವಣೆಯಲ್ಲಿ ಕಾಂಗ್ರೆಸ್ ಸೋತಿದ್ದೇಕೆ? 20-30 ಶಾಸಕರ ಸೋಲಿಗೆ ಕಾರಣವೇನು ಗೊತ್ತಾ? ಶಾಸಕ ಯಶವಂತರಾಗೌಡ ಬಿಚ್ಚಿಟ್ಟ ರಹಸ್ಯ ಇಲ್ಲಿದೆ ನೋಡಿ...!

ವಿಜಯಪುರ: 2018ರ ವಿಧಾನ ಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಗೆ ಕಾರಣವೇನು? ಎಂಬುದನ್ನು ಶಾಸಕ ಯಶವಂತರಾಯಗೌಡ ಪಾಟೀಲ ಇದೀಗ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.

ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟದಿಂದಲೇ ಕಾಂಗ್ರೆಸ್ ಅಧಿಕಾರ ಕಳೆದುಕೊಳ್ಳಬೇಕಾಯಿತೆಂದು ತಿಳಿಸಿರುವ ಅವರು ಅದಕ್ಕೆ ಕಾರಣೀಕರ್ತರಾದ ಶಾಸಕ ಎಂ.ಬಿ. ಪಾಟೀಲರ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.

ಧರ್ಮ ಒಡೆಯುವ ಕೆಲಸಕ್ಕೆ ಕೈ ಹಾಕಿದ ಕಾರಣಕ್ಕೆ ನಮ್ಮ ಸರ್ಕಾರ ರಚನೆಯಾಗಲಿಲ್ಲ. ರಾಜ್ಯದಲ್ಲಿ ಇನ್ನೂ 20-30 ಸ್ಥಾನಗಳು ಕಾಂಗ್ರೆಸ್‌ಗೆ ಲಭಿಸಲಿದ್ದವು. ಆದರೆ, ಲಿಂಗಾಯತ ಹೋರಾಟದಿಂದ ಆ ಸ್ಥಾನಗಳು ಬರಲಿಲ್ಲ. ನಿಮ್ಮಂಥವರ ಅಚಾತುರ್ಯದಿಂದ ನಾವು ಸರ್ಕಾರ ಕಳೆದುಕೊಳ್ಳಬೇಕಾಯಿತು. ಈ ಬಗ್ಗೆ ನಮ್ಮ ನಾಯಕರು ಸದನದಲ್ಲೇ ಮಾತನಾಡಿದ್ದಾರೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.

ಲಿಂಗಾಯತ ಸಂಸ್ಥೆಯನ್ನು ಸ್ವಂತದ್ದಾಗಿಸಿಕೊಂಡಿರಿ. ಬಂಥನಾಳದ ಪೂಜ್ಯ ಸಂಗನಬಸವ ಶ್ರೀಗಳು ಕಟ್ಟಿದ ಸಂಸ್ಥೆಯನ್ನು ಸ್ವಂತದ ಆಸ್ತಿ ಮಾಡಿಕೊಂಡಿದ್ದೀರಿ. ಬರುವ ದಿನಗಳಲ್ಲಿ ಬಿಎಲ್‌ಡಿಇ ಸಂಸ್ಥೆ ಬಗ್ಗೆಯೂ ಕೆಣಕಬೇಕಾಗುತ್ತದೆ ಎಂದು ಎಚ್ಚರಿಸಿದರು.

ಮಹಾತ್ಮ ಬಸವೇಶ್ವರ ಹೆಸರು ಹೇಳುವ ಯೋಗ್ಯತೆ ನಿಮಗಿಲ್ಲ. ಸಾಮಾಜಿಕ ಸುಧಾರಣೆಗಾಗಿ ಶ್ರಮಿಸಿದ ಬಸವೇಶ್ವರ ಅವರ ತತ್ವಾದರ್ಶಗಳು ಕಿಂಚಿತ್ತೂ ನಿಮ್ಮಲ್ಲಿಲ್ಲ. ಅವರ ಪಾದ ಧೂಳಿಗೂ ಸಮನಲ್ಲ ಎಂದು ಟೀಕಿಸಿದರು.