ಬಸವಸಾಗರ ಜಲಾಶಯದ ಗೇಟ್‌ಗಳಲ್ಲಿ ತೊಂದರೆಯುAಟಾದ ಸಂದರ್ಭದಲ್ಲಿ ಕ್ರೇನ್ ಮೂಲಕ ಸ್ಟಾಪ್ ಲಾಕ್ ಸಿಸ್ಟಮ್ ವ್ಯವಸ್ಥೆ ಅಳವಡಿಸಿರುವುದು. 
ಜಿಲ್ಲೆ

2006ರ ಕಹಿ ಘಟನೆ ನೆನಪಿಸಿದ ತುಂಗಭದ್ರಾ ಜಲಾಶಯ

ಕೊಡೇಕಲ್: ಕೊಪ್ಪಳ ಜಿಲ್ಲೆ ಮುನಿರಾಬಾದ್ ಸಮೀಪ ತುಂಗಭದ್ರಾ ಜಲಾಶಯದ ಕ್ರಸ್ಟ್ಗೇಟ್ ಸಂಖ್ಯೆ 19 ಚೈನ್ ತುಂಡಾಗಿ ಬಿದ್ದಿದ್ದರಿಂದ ಅಪಾರ ಪ್ರಮಾಣದ ನೀರು ಪೋಲಾಗುತ್ತಿರುವುದು 2006ರಲ್ಲಿ ನಾರಾಯಣಪುರದ ಬಸವಸಾಗರ ಅಣೆಕಟ್ಟೆಯಲ್ಲಿ ನಡೆದಿದ್ದ ಕಹಿ ಘಟನೆಯನ್ನು ನೆನಪಿಸಿದೆ.

ಹೌದು, ರೇಡಿಯಲ್ ಮಾದರಿಯಲ್ಲಿ 30 ಮುಖ್ಯ ಕ್ರಸ್ಟ್ ಗೇಟ್ ಹೊಂದಿರುವ ಬಸವಸಾಗರದಲ್ಲಿ 2006ರಲ್ಲಿ ಜಲಾಶಯದ 5ನೇ ಮುಖ್ಯ ಕ್ರಸ್ಟ್ ಗೇಟ್ ನೀರಿನ ರಭಸಕ್ಕೆ ಕಿತ್ತು ಹೋಗಿ ಅಂದಾಜು 20 ಟಿಎಂಸಿ ನೀರು ವ್ಯರ್ಥವಾಗಿ ಕೃಷ್ಣಾ ನದಿ ಸೇರಿತ್ತು. ರೇಡಿಯಲ್ (ತ್ರಿಜ್ಯ)ದ ಮಾದರಿಯಲ್ಲಿ 15*12 ಮೀ ಅಳತೆಯ 30 ಕ್ರಸ್ಟ್ ಗೇಟ್‌ಗಳಿವೆ. 10.50 ಮೀಟರ್‌ವರೆಗೆ ಎತ್ತರಿಸಬಹುದಾದ ಸಾಮರ್ಥ್ಯದ ಈ ಗೇಟ್‌ಗಳು ಎಲೆಕ್ಟಾçನಿಕ್ ಆಧಾರದ ಮೇಲೆ ಚಾಲನೆಗೊಳ್ಳುತ್ತವೆ.

2006ರಲ್ಲಿ ಜಲಾಶಯದಲ್ಲಿ ಸಂಗ್ರಹವಾಗಿದ್ದ ನೀರಿನ ರಭಸಕ್ಕೆ 5ನೇ ಮುಖ್ಯ ಕ್ರಸ್ಟ್ ಗೇಟ್ ಕಿತ್ತುಕೊಂಡು ಹೋಗಿತ್ತು. 50 ಟನ್ ಸಾಮರ್ಥ್ಯದ ಕ್ರೇನ್ ಮುಖಾಂತರ ಅಣೆಕಟ್ಟಿನ ಮೇಲೆ ಹೊಸ ಹಳಿ ನಿರ್ಮಿಸಿ ಕ್ರಸ್ಟ್ಗೇಟ್ ಅಳವಡಿಸಿ ಕೇವಲ ಎರಡು ದಿನದಲ್ಲಿ ನೀರು ಪೋಲಾಗುವಿಕೆ ತಡೆದು ಸಂಭವನೀಯ ಅನಾಹುತ ತಪ್ಪಿಸಲು ಅಧಿಕಾರಿಗಳು ನಿರಂತರ ಶ್ರಮಪಟ್ಟಿದ್ದರು ಎನ್ನುತ್ತಾರೆ ಆಂದಿನ ಅಣೆಕಟ್ಟು ವಿಭಾಗದ ಪ್ರಭಾರಿ ಅಧಿಕಾರಿ ಹಾಗೂ ಪ್ರಸ್ತುತ ಆಲಮಟ್ಟಿ ವಿಭಾಗದ ಸಹಾಯಕ ಇಂಜಿನಿಯರ್ ಆರ್.ಎಲ್.ಹಳ್ಳೂರ. ಆದರೆ ಈ ಸ್ಟಾಪ್ ಲಾಕ್ ಸಿಸ್ಟಮ್ ವ್ಯವಸ್ಥೆ ಟಿಬಿ ಡ್ಯಾಮ್‌ನಲ್ಲಿ ಇಲ್ಲದ್ದರಿಂದಲೇ ಭಾರಿ ಪ್ರಮಾಣ ನೀರು ಪೋಲಾಗಲು ಕಾರಣವಾಗಿದೆ.

ಪ್ರತಿವರ್ಷ ಬಸವಸಾಗರಕ್ಕೆ ಒಳಹರಿವು ಬರುವ ಮುನ್ನ ಅಣೆಕಟ್ಟಿನ ಎಲ್ಲ ಮುಖ್ಯ ಕ್ರಸ್ಟ್ ಗೇಟ್‌ಗಳಿಗೆ ಗ್ರಿಸಿಂಗ್ ಸೇರಿ ಸರಿಯಗಿ ಕಾರ್ಯನಿರ್ವಹಿಸುತ್ತವೆಯೇ ಇಲ್ಲವೋ ಎಂದು ಪರೀಕ್ಷೆ ಮಾಡಲಾಗುತ್ತದೆ. ಆದರೆ ಎರಡು ವರ್ಷಗಳಿಂದ ಜಲಾಶಯದ ನಿರ್ವಹಣೆಗೆ ಅನುದಾನ ಬಂದಿಲ್ಲವಾದರೂ ಕೃಷ್ಣಾ ಭಾಗ್ಯ ಜಲನಿಗಮದ ಅಧಿಕಾರಿಗಳು ಹೆಚ್ಚಿನ ಮುತುವರ್ಜಿ ವಹಿಸಿ 30 ಮುಖ್ಯ ಕ್ರಸ್ಟ್ ಗೇಟ್‌ಗಳಿಂದ ಮೂರು ಲಕ್ಷಕ್ಕೂ ಹೆಚ್ಚು ಕ್ಯೂಸೆಕ್ ನೀರು ಹರಿಸಿದ್ದನ್ನು ಮೆಚ್ಚಲೇಬೇಕಾದ ಸಂಗತಿ.

ಟೆAಡರ್ ವಿಷಯದಲ್ಲಿ ಬೇಡ ಆತುರ: ಪ್ರತಿವರ್ಷ ಅಣೆಕಟ್ಟು ಗೇಟ್‌ಗಳ ನಿರ್ವಹಣೆ ಇತರ ಕಾಮಗಾರಿಗಳಿಗಾಗಿ ಟೆಂಡರ್ ಕರೆಯಲಾಗುತ್ತದೆ. ಆದರೆ ಅಣೆಕಟ್ಟಿನ ಗೇಟ್‌ಗಳ ಬಗ್ಗೆ ಜ್ಞಾನವಿಲ್ಲದವರು ಹಾಕುವ ಟೆಂಡರ್‌ಗಳಿಗೆ ಸಮ್ಮತಿ ನೀಡುವುದು ಕೆಲವೊಮ್ಮೆ ಭಾರಿ ಅನಾಹುತ ಸೃಷ್ಟಿಸುತ್ತವೆ ಎಂದು ಹೇಳುತ್ತಾರೆ ನಿವೃತ್ತ ಅಧಿಕಾರಿಗಳೊಬ್ಬರು. ಇದರಿಂದಾಗಿ ಜಲಾಶಯದ ನಿರ್ವಹಣೆಗೆ ಕರೆಯಲಾಗುವ ಟೆಂಡರ್ ವಿಷಯದಲ್ಲಿ ಸರ್ಕಾರ ಆತುರಪಡದೆ ಸೂಕ್ತ ನಿರ್ಧಾರ ಕೈಗೊಳ್ಳುವುದು ಅತಿ ಮುಖ್ಯ.