ಜಿಲ್ಲೆ

ಮದ್ಯ ವ್ಯಸನಿಗಳಿಂದ ಕುಟುಂಬ, ಸಮಾಜಕ್ಕೆ ಸಂಕಷ್ಟ

ವಿಜಯವಾಣಿ ಸುದ್ದಿಜಾಲ ಧಾರವಾಡ

ಮದ್ಯ ವ್ಯಸನಿಗಳು ಕುಟುಂಬಕ್ಕೆ ಮಾತ್ರವಲ್ಲ, ಸಮಾಜಕ್ಕೆ ಸಂಕಷ್ಟ ತಂದೊಡ್ಡುತ್ತಾರೆ. ಹೀಗಾಗಿ ಸರ್ಕಾರ ಕೂಡಲೇ ಮದ್ಯಪಾನ ನಿಷೇಧ ಮಾಡಬೇಕು ಎಂದು ಗ್ರಾಮಾಭಿವೃದ್ಧಿ ಚಿಂತಕ ಡಾ. ಪ್ರಕಾಶ ಭಟ್ ಹೇಳಿದರು.

ನಗರದ ರಾಯಾಪೂರದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ, ಜನಜಾಗೃತಿ ವೇದಿಕೆ ಮತ್ತು ಮದ್ಯಪಾನ ಸಂಯಮ ಮಂಡಳಿ ವತಿಯಿಂದ ಬುಧವಾರ ಆಯೋಜಿಸಿದ್ದ 2000ನೇ ಮದ್ಯವರ್ಜನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ವ್ಯಸನಿಗಳಿಗೆ ಆರಂಭದಲ್ಲಿ ಮದ್ಯಪಾನ ಮಜಾ ನೀಡುತ್ತದೆ. ನಂತರ ಇಡೀ ಕುಟುಂಬದ ನೆಮ್ಮದಿಯನ್ನು ಕಿತ್ತುಕೊಳ್ಳುತ್ತದೆ. ಇದರಿಂದ ಮದ್ಯ ವ್ಯಸನಿಯ ಕುಟುಂಬ ಹಾಳಾಗಿ ಸಮಾಜಕ್ಕೆ ಕಂಟಕವಾಗುತ್ತಾನೆ ಎಂದರು.

ಕರ್ನಾಟಕ ಜನಜಾಗೃತಿ ಸಂಘದ ಅಧ್ಯಕ್ಷ ನಟರಾಜ ಬಾದಾಮಿ ಮಾತನಾಡಿ, ಧರ್ಮಸ್ಥಳದ ಅನೇಕ ಟ್ರಸ್ಟ್ಗಳ ಮೂಲಕ ಡಾ. ವೀರೇಂದ್ರ ಹೆಗ್ಗಡೆ ಅವರು ಸಮಾಜಮುಖಿ ಕೆಲಸ ಮಾಡುತ್ತಿದ್ದಾರೆ ಎಂದರು.

ವಿದ್ಯಾಗಿರಿ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಮಲ್ಲಿಕಾರ್ಜುನ ಹೊಸೂರ ಮಾತನಾಡಿ, ದಿನನಿತ್ಯದ ಜೀವನದಲ್ಲಿ ನಡೆಯುತ್ತಿರುವ ಅಪರಾಧ ಪ್ರಕರಣಗಳಲ್ಲಿ ಹೆಚ್ಚಿನ ಪ್ರಕರಣಗಳು ಮದ್ಯವ್ಯಸನಿಗಳಿಂದ ಆಗುತ್ತಿವೆ. ಹೀಗಾಗಿ ವ್ಯಸನಮುಕ್ತಿ ಶಿಬಿರದ ಸದುಪಯೋಗ ಪಡೆದು ಪರಿವರ್ತಿತ ಸುಂದರ ಜೀವನ ನಡೆಸಬೇಕು ಎಂದರು.

ಡಾ. ಬಸವರಾಜ ಹೊಂಗಲ್ ಮಾತನಾಡಿ, ಮದ್ಯವ್ಯಸನಿಗಳ ಮನಃಪರಿವರ್ತನೆ ಇಂದಿನ ಅಗತ್ಯ. ಮದ್ಯವ್ಯಸನದಿಂದ ಬಡತನ, ಸಾಲ ಬೆಳೆದು ಸುಂದರ ಬದುಕನ್ನೇ ಬಲಿ ಕೊಟ್ಟಂತಾಗುತ್ತದೆ ಎಂದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಕಾರ್ಯದರ್ಶಿ ಪ್ರದೀಪ ಶೆಟ್ಟಿ ಪ್ರಸ್ತಾವಿಕವಾಗಿ ಮಾತನಾಡಿ, ರಾಜ್ಯದ ಮೂಲೆಮೂಲೆಗಳಲ್ಲಿ ಮದ್ಯವರ್ಜನ ಶಿಬಿರ ಏರ್ಪಡಿಸಿ ಲಕ್ಷಾಂತರ ಜನರಿಗೆ ಹೊಸ ಬದುಕು ಕೊಡುವ ಪ್ರಯತ್ನವನ್ನು ಸಂಘ ಮಾಡುತ್ತಿದೆ. ಕಣ್ಣೀರಿನಲ್ಲಿ ಕೈ ತೊಳೆಯುವ ಕುಟುಂಬಗಳನ್ನು ಮರಳಿ ಮುಖ್ಯವಾಹಿನಿಗೆ ತಂದಿದ್ದು, ಇದಕ್ಕೆ ಡಾ. ವೀರೇಂದ್ರ ಹೆಗ್ಗಡೆ ಅವರೇ ಪ್ರೇರಣೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಜನಜಾಗೃತಿ ವೇದಿಕೆ ಟ್ರಸ್ಟ್ ಅಧ್ಯಕ್ಷ ವಸಂತ ಅರ್ಕಾಚಾರ ಮಾತನಾಡಿ, ಉತ್ತಮ ಸಮಾಜ ನಿರ್ಮಾಣದ ಹೊಣೆ ಎಲ್ಲರ ಮೇಲಿದೆ. ಇದಕ್ಕೆ ಎಲ್ಲರೂ ಕೈ ಜೋಡಿಸಬೇಕು ಎಂದರು.

ಪ್ರಾದೇಶಿಕ ನಿರ್ದೇಶಕಿ ದಯಶೀಲ, ಶಿಬಿರದ ವ್ಯವಸ್ಥಾಪನಾ ಸಮಿತಿ ಸದಸ್ಯ ಪ್ರಭಾಕರ ನಾಯಕ, ಸುರೇಶ ಮರಲಿಂಗನವರ, ಎ.ವಿ. ಜಯರಾಮನವರ, ಮಾರುತಿ ಶೇಠ, ಶಿವಾಜಿ ಖಂಡೇಕರ, ರಮೇಶ ಮಹಾದೇವಪ್ಪನವರ, ಜೆಎಸ್‌ಎಸ್ ಪ್ರಾಚಾರ್ಯ ಮಹಾವೀರ ಉಪಾಧ್ಯೆ, ಡೇಮಾನಿ, ಶಿರೋಜಿ, ರೇಖಾ ಕಲಘಟಗಿ, ಇತರರಿದ್ದರು.