ದೊಡ್ಡಬಳ್ಳಾಪುರ: ಪಟ್ಟಣದ ಹಾಲು ಶೀತಲೀಕರಣ ಕೇಂದ್ರದಲ್ಲಿ ಸೋಮವಾರ ವಿವಿಧ ಡೇರಿಗಳಿಂದ ಸಂಗ್ರಹಿಸಿದ್ದ 2 ಸಾವಿರ ಲೀಟರ್ ಹಾಲನ್ನು ಗುಣಮಟ್ಟ ಸರಿಯಿಲ್ಲ ಎಂದು ಅಧಿಕಾರಿಗಳು ಚರಂಡಿಗೆ ಸುರಿದಿದ್ದಾರೆ.
ಈ ಬಗ್ಗೆ ಮಾಹಿತಿ ಪಡೆದ ರೈತ ಮುಖಂಡರು, ಕೇಂದ್ರಕ್ಕೆ ಆಗಮಿಸಿ ಹಿರಿಯ ಅಧಿಕಾರಿಗಳು ಸ್ಪಷ್ಟನೆ ನೀಡಬೇಕು ಎಂದು ಪಟ್ಟು ಹಿಡಿದರು.
ರೈತರ ಬಳಿ ಹಾಲು ಪಡೆಯುವಾಗ ಇರುವ ಗುಣಮಟ್ಟ ಇಲ್ಲಿಗೆ ತಂದ ಮೇಲೆ ಇಲ್ಲ ಎಂದರೆ ಏನು ಅರ್ಥ?, ಸಂಬಂಧಪಟ್ಟ ಡೇರಿಯ ಕಾರ್ಯದರ್ಶಿ, ಅಧ್ಯಕ್ಷರನ್ನು ಕರೆಸಿ ತೋರಿಸಿ. ಡೇರಿಗೆ ವಿಚಾರ ತಿಳಿಸದೆ ಈ ರೀತಿ ಮಾಡುವುದು ಸರಿಯಲ್ಲ ಎಂದು ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಪ್ರಸನ್ನ, ತಾಲೂಕು ಅಧ್ಯಕ್ಷ ಹನುಮೇಗೌಡ, ಕಾರ್ಯದರ್ಶಿ ಆರ್.ಎಸ್. ಸತೀಶ್ ಆಕ್ರೋಶ ವ್ಯಕ್ತಪಡಿಸಿದರು.
ಒಂದು ಲೀಟರ್ ಹಾಲು ಪಡೆಯಬೇಕಾದರೆ ಎಷ್ಟು ಕಷ್ಟ ಪಡಬೇಕೆಂಬುದು ಅಧಿಕಾರಿಗಳಿಗೆ ತಿಳಿದಿಲ್ಲ ಎಂದು ದೂರಿದರು.
ಬಮುಲ್ ಅಂಕಿ-ಅಂಶದಂತೆ ದಿನಕ್ಕೆ 18 ಲಕ್ಷ ಲೀಟರ್ ಹಾಲು ಉತ್ಪತ್ತಿ ಆಗುತ್ತದೆ. 10 ಲಕ್ಷ ಲೀಟರ್ ಹಾಲು ಮಾರಾಟ ಮಾಡಲಾಗುತ್ತಿದೆ. ಮಾರಾಟ ಮಾಡಲು ಆಗದೆ, ಗುಣಮಟ್ಟದ ನೆಪವೊಡ್ಡಿ ಚರಂಡಿಗೆ ಚೆಲ್ಲುತ್ತಿರುವುದು ಖಂಡನೀಯ. ಮುಂದೆ ಇಂಥ ಘಟನೆಗಳು ಮರುಕಳಿಸಬಾರದು ಎಂದರು.
ಸ್ಥಳಕ್ಕೆ ಬಂದ ಶಿಬಿರದ ಉಪವ್ಯವಸ್ಥಾಪಕ ಡಾ.ಎಲ್.ಬಿ. ನಾಗರಾಜ್, ವ್ಯವಸ್ಥಾಪಕ ಡಾ.ಶಿವಶಂಕರ್ ಪ್ರತಿಕ್ರಿಯಿಸಿ, ದೊಡ್ಡಬಳ್ಳಾಪುರ ಶಿಬಿರದಲ್ಲಿ ಗುಣಮಟ್ಟ ಕಡಿಮೆ ಆಗಿರುವ ಬಗ್ಗೆ ದೂರುಗಳು ಬರುತ್ತಿವೆ. 13 ಕೇಂದ್ರಗಳ ಪೈಕಿ ಈ ಘಟಕ 11ನೇ ಸ್ಥಾನದಲ್ಲಿದೆ. ಎಸ್‌ಎನ್‌ಎಫ್ 8.5ಕ್ಕಿಂತ ಕಡಿಮೆಯಾದರೆ ಹಾಲಿನ ಪೌಡರ್ ಮಾಡಲು ಆಗುವುದಿಲ್ಲ. ಗುಣಮಟ್ಟ ಇಲ್ಲದೇ ಹಾಲು ತಿರಸ್ಕೃತವಾಗುತ್ತಿದೆ. ಇದರೊಂದಿಗೆ ಕ್ಯಾನ್‌ಗಳಲ್ಲಿ ಪಾಚಿ ಇರುವುದು, ಕೆಚ್ಚಲುಬಾವು ರೋಗ ಬಂದಿರುವ ಹಸುಗಳ ಹಾಲು ಸಹ ಇದೆ. ಹಾಲನ್ನು ಚೆಲ್ಲುವ ಉದ್ದೇಶ ನಮಗಿಲ್ಲ ಎಂದು ಸ್ಪಷ್ಟನೆ ನೀಡಿದರು.
ಸ್ಥಳಕ್ಕೆ ಆಗಮಿಸಿದ ಶಾಸಕ ಟಿ.ವೆಂಕಟರಮಣಯ್ಯ ಮಾತನಾಡಿ, ಹಾಲನ್ನು ಚೆಲ್ಲಿರುವ ಕುರಿತು ಬಮುಲ್ ನಿರ್ದೇಶಕರ ಗಮನಕ್ಕೆ ತರಲಾಗಿದೆ. ಇನ್ಮುಂದೆ ಹೀಗಾಗದಂತೆ ನೋಡಿಕೊಳ್ಳಲು ಸೂಚಿಸಲಾಗಿದೆ. ರೈತರಿಗೆ ನಷ್ಟ ಕಟ್ಟಿಕೊಡುವ ಕುರಿತು ಚರ್ಚೆ ನಡೆಸಿ ತೀರ್ಮಾನಿಸಲಾಗುವುದು. ರೈತರೂ ಸಹ ಕೆಚ್ಚಲುಬಾವು ಬಂದಿರುವ ಹಸುಗಳ ಹಾಲನ್ನು ಹಾಕದೆ ಗುಣಮಟ್ಟ ಕಾಯ್ದುಕೊಳ್ಳಬೇಕು ಎಂದು ಹೇಳಿದರು.
ರೈತ ಸಂಘದ ಮುಖಂಡರಾದ ವಸಂತ್ ಕುಮಾರ್, ಮುರಳಿ, ಹಾಲು ಒಕ್ಕೂಟದ ನೌಕರರ ಸಂಘದ ತಾಲೂಕು ಅಧ್ಯಕ್ಷ ರುದ್ರಪ್ಪ ಮತ್ತಿತರರು ಇದ್ದರು.