ಭದ್ರಾವತಿಯಲ್ಲಿ ಪಶು ಸಂಗೋಪನಾ ಸಚಿವ ಕೆ.ವೆಂಕಟೇಶ್ ನೂತನ ಪಶು ಆಸ್ಪತ್ರೆ ಕಟ್ಟಡಕ್ಕೆ ಗುದ್ದಲಿಪೂಜೆ ನೆರವೇರಿಸಿದರು.. ಬಿ.ಕೆ.ಸಂಗಮೇಶ್ವರ್, ಬಲ್ಕಿಷ್‌ಬಾನು, ಎಸ್.ಕುಮಾರ್ ಇತರರಿದ್ದರು. 
ಜಿಲ್ಲೆ

200 ಆಸ್ಪತ್ರೆಗಳು 20ಪಾಲಿಕ್ಲಿನಿಕ್ ಮಂಜೂರು

ಭದ್ರಾವತಿ: ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಶಿಥಿಲಾವಸ್ಥೆ ತಲುಪಿರುವ ಪಶು ಆಸ್ಪತ್ರೆಗಳನ್ನು ಗುರುತಿಸಿ ಆ ಭಾಗದಲ್ಲಿ ಹೊಸ ಆಸ್ಪತ್ರೆಗಳ ನಿರ್ಮಾಣ ಹಾಗೂ ಜಿಲ್ಲಾಮಟ್ಟದ ಪಾಲಿಕ್ಲಿನಿಕ್ ಅನ್ನು ತಾಲೂಕು ಮಟ್ಟಕ್ಕೂ ವಿಸ್ತರಿಸುವ ಕೆಲಸ ಮಾಡಲಾಗುತ್ತಿದೆ ಎಂದು ಪಶು ಸಂಗೋಪನಾ ಸಚಿವ ಕೆ.ವೆಂಕಟೇಶ್ ಹೇಳಿದರು. ನಗರದ ರಂಗಪ್ಪವೃತ್ತದ ಬಳಿ ಇರುವ ಪಶು ಆಸ್ಪತ್ರೆ ಆವರಣದಲ್ಲಿ ಆರ್‌ಐಡಿಎಫ್ ಟ್ರಾಂಚ್-30 ಯೋಜನೆಯಡಿ ನೂತನ ಪಶು ಆಸ್ಪತ್ರೆ ಕಟ್ಟಡದ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು. ಪಶು ಇಲಾಖೆಯಲ್ಲಿ ವೈದ್ಯರು ಸೇರಿದಂತೆ 18 ಸಾವಿರ ಸಿಬ್ಬಂದಿಗಳಿದ್ದರು. ಈಗ ಶೇ.50ರಷ್ಟು ಕಡಿಮೆಯಾಗಿದ್ದಾರೆ. ರಾಜ್ಯದಲ್ಲಿ ವೈದ್ಯರು ಹಾಗೂ ಆಸ್ಪತ್ರೆಯ ಕೊರತೆ ಇದೆ. ರಾಜ್ಯದಲ್ಲಿ ಹಲವಾರು ಆಸ್ಪತ್ರೆಗಳು ಶಿಥಿಲಾವಸ್ಥೆ ತಲುಪಿವೆ. ಆದ್ದರಿಂದ ನೂತನ ಕಟ್ಟಡ ನಿರ್ಮಾಣಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ಮನವಿ ಮಾಡಿಕೊಂಡಿದ್ದೆ. ಅದರಂತೆ 200 ಹೊಸ ಪಶು ಆಸ್ಪತ್ರೆಗಳು ಹಾಗೂ 20 ಪಾಲಿಕ್ಲಿನಿಕ್‌ಗಳನ್ನು ಮಂಜೂರು ಮಾಡಿಕೊಟ್ಟಿದ್ದರು. ಅದರಲ್ಲಿ ಸಂಗಮೇಶ್ವರ್ ಅವರ ಬೇಡಿಕೆಯಂತೆ ತಾಲೂಕಿನಲ್ಲಿ 50 ಲಕ್ಷ ರೂ. ವೆಚ್ಚದ ಪಾಲಿಕ್ಲಿನಿಕ್ ಹೊಂದಿರುವ ನೂತನ ಪಶು ಆಸ್ಪತ್ರೆ ಕಟ್ಟಡ ಶಂಕುಸ್ಥಾಪನೆ ನೆರವೇರಿಸಲಾಗುತ್ತಿದೆ. ಒಂದೇ ಸೂರಿನಡಿ ಎಲ್ಲ ರೀತಿಯ ಚಿಕಿತ್ಸೆಗಳು ದೊರೆಯುವ ನಿಟ್ಟಿನಲ್ಲಿ ಪಾಲಿಕ್ಲಿನಿಕ್ ತೆರೆಯಲಾಗುತ್ತಿದೆ. ಜನರಿಗೆ ಆಸ್ಪತ್ರೆಗಳಿರುವಂತೆ ಜಾನುವಾರುಗಳಿಗೂ ಆಸ್ಪತ್ರೆಯ ಅಗತ್ಯವಿದೆ ಎಂದರು. ಕೇಂದ್ರ ಪುರಸ್ಕೃತ ಯೋಜನೆಯಡಿ ಹೈನೋದ್ಯಮ ಉತ್ತೇಜಿಸಲು ಶ್ರಮಿಸುತ್ತಿರುವ ಸಖಿಯರಿಗೆ ಸರ್ಕಾರವು ಪ್ರತಿ ತಿಂಗಳು ನೀಡುತ್ತಿರುವ 3500 ರೂ.ಗಳನ್ನು 5 ಸಾವಿರ ರೂ.ಗೆ ಹೆಚ್ಚಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು. ತಾಲೂಕಿನಲ್ಲಿ ದೊಡ್ಡೇರಿ ಹಾಗೂ ಕಲ್ಲಹಳ್ಳಿ ಭಾಗದಲ್ಲಿ ಎರಡು ಪ್ರತ್ಯೇಕ ಪಶು ಆಸ್ಪತ್ರೆ ಬೇಕೆಂಬ ಮನವಿ ಇದೆ. ಆದರೆ ಸರ್ಕಾರದ ಮಾನದಂಡದಂತೆ 5 ಸಾವಿರ ಜಾನುವಾರುಗಳು ಇರುವ ಕಡೆ ಮಾತ್ರ ಆಸ್ಪತ್ರೆ ನಿರ್ಮಾಣಕ್ಕೆ ಅವಕಾಶವಿದೆ. ಆದರೂ ಸಂಗಮೇಶ್ವರ್ ಅವರ ಬೇಡಿಕೆ ಈಡೇರಿಸುವ ಪ್ರಯತ್ನ ಮಾಡುತ್ತೇನೆ. ಆಕಸ್ಮಿಕವಾಗಿ ಮರಣ ಹೊಂದಿದ ಜಾನುವಾರುಗಳ ಮಾಲೀಕರಿಗೆ ಪರಿಹಾರದ ಚೆಕ್ ವಿತರಣೆ ಮಾಡಲಾಯಿತು. ವಿಧಾನಪರಿಷತ್ ಸದಸ್ಯೆ ಬಲ್ಕಿಷ್‌ಬಾನು, ಶಿಮುಲ್ ನಾಮ ನಿರ್ದೇಶಿತ ಸದಸ್ಯ ಎಸ್.ಕುಮಾರ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬಿ.ಕೆ.ಶಿವಕುಮಾರ್, ಕಾಂಗ್ರೆಸ್ ಗ್ರಾಮಾಂತರ ಅಧ್ಯಕ್ಷ ಎಚ್.ಎಲ್.ಷಡಾಕ್ಷರಿ, ಗ್ಯಾರಂಟಿ ಯೋಜನೆ ಅಧ್ಯಕ್ಷ ಮಣಿಶೇಖರ್, ನಗರಸಭೆ ಅಧ್ಯಕ್ಷ ಗೀತಾರಾಜ್ ಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷ ರಿಯಾಜ್ ಅಹಮದ್, ಸದಸ್ಯೆ ಅನುಸುಧಾ ಮೋಹನ್, ಚನ್ನಪ್ಪ, ಡಾ.ಶಿವರಾಜ್, ಬಾಬುರತ್ನ ಸೇರಿದಂತೆ ಹಲವರಿದ್ದರು.

ಪರಿಹಾರ ಧನ ಹೆಚ್ಚಳ ಸಿದ್ದರಾಮಯ್ಯನವರ ಸರ್ಕಾರ ಬಡವರ, ರೈತರ ಪರವಾಗಿದ್ದು ರೈತರ ಅನುಕೂಲಕ್ಕಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಇತ್ತೀಚೆಗೆ ಪಶುಪಾಲನೆ ಚಟುವಟಿಕೆಯಲ್ಲಿ ತೊಡಗುವವರ ಸಂಖ್ಯೆ ಹೆಚ್ಚಾಗುತ್ತಿದೆ. ಅವರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಹಾಲಿನ ದರ ಏರಿಕೆ ಮಾಡಲಾಗಿದೆ. ಏ. 1ರಿಂದ ಆಕಸ್ಮಿಕವಾಗಿ ಮೃತಪಡುವ ರಾಸುಗಳ ಪರಿಹಾರ ಧನವನ್ನು 10 ಸಾವಿರದಿಂದ 15 ಸಾವಿರ ರೂ. ಹಾಗೂ ಕುರಿಗಳಿಗೆ 5 ಸಾವಿರದಿಂದ 7 ಸಾವಿರ ರೂ.ಕ್ಕೆ ಏರಿಕೆ ಮಾಡಲಾಗಿದೆ ಎಂದು ಸಚಿವ ಕೆ.ವೆಂಕಟೇಶ್ ಹೇಳಿದರು. ಸಚಿವರು ಕ್ಷೇತ್ರದ ದೊಡ್ಡೇರಿ ಹಾಗೂ ಕಲ್ಲಹಳ್ಳಿ ಭಾಗದಲ್ಲಿ ಪಶು ಆಸ್ಪತ್ರೆ ಮಂಜೂರು ಮಾಡಿಸುವ ಭರವಸೆ ನಮಗಿದೆ. 18 ಬಾರಿ ಬಜೆಟ್ ಮಂಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಲವು ಅಭಿವೃದ್ಧಿ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಹಾಲಿನ ದರ 50 ರೂ.ಗಳಿಗೆ ಏರಿಕೆ ಮಾಡಿದರೆ ಒಳ್ಳೆಯದು. ಭಾರತದಲ್ಲಿ ವಾಸಿಸುವ ಪ್ರತಿಯೊಬ್ಬರೂ ಹಿಂದುಗಳೆ ಎಂಬುದನ್ನು ಎಲ್ಲರೂ ಮನಗಾಣಬೇಕು. ಬಿಜೆಪಿ ಮಾತ್ರ ಹಿಂದುಗಳ ಹೆಸರಿನಲ್ಲಿ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದೆ. ಇದು ಸರಿಯಲ್ಲ. ಬಿ.ಕೆ.ಸಂಗಮೇಶ್ವರ್, ಶಾಸಕ