ಕುಮಟಾ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಮಂಗಳವಾರ ಪಟ್ಟಣದ ಎ.ವಿ. ಬಾಳಿಗಾ ಕಾಲೇಜು ಮೈದಾನದಿಂದ ಬೃಹತ್ ತಿರಂಗಾ ಮೆರವಣಿಗೆ ದೇಶಭಕ್ತಿಯ ಘೋಷಣೆಗಳೊಂದಿಗೆ ನಡೆಯಿತು.
ಸ್ವಾತಂತ್ರ್ಯೋತ್ಸವ ಸಂಭ್ರಮದ ಪೂರ್ವ ಕಾರ್ಯಕ್ರಮವಾಗಿ ತಿರಂಗಾ ಮೆರವಣಿಗೆ ಆಯೋಜಿಸಲಾಗಿದ್ದು, ಸುಮಾರು 200 ಮೀಟರ್ ಉದ್ದದ ರಾಷ್ಟ್ರಧ್ವಜವನ್ನು ಹಿಡಿದ ವಿದ್ಯಾರ್ಥಿಗಳು ಪಟ್ಟಣದ ವಿವಿಧ ಬೀದಿಗಳಲ್ಲಿ ಸಂಚರಿಸಿ ನಾಗರಿಕರಲ್ಲಿ ರಾಷ್ಟ್ರಪ್ರೇಮದ ಸಂದೇಶ ಬಿತ್ತರಿಸಿದರು.
ಮೆರವಣಿಗೆ ಉದ್ದೇಶಿಸಿ ಮಾತನಾಡಿದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಗಿರೀಶ್ ಭಟ್ ಧಾರೇಶ್ವರ, ರಾಷ್ಟ್ರಧ್ವಜ(ತಿರಂಗಾ) ಕೇವಲ ಬಣ್ಣದ ಬಟ್ಟೆಯಲ್ಲ. ಇದು ನಮ್ಮ ಸಾರ್ವಭೌಮತ್ವದ ಸಂಕೇತ, ಸ್ವಾತಂತ್ರ್ಯಕ್ಕೂ ಸ್ವೇಚ್ಛಾಚಾರಕ್ಕೂ ವ್ಯತ್ಯಾಸ ಗುರುತಿಸಬೇಕಿದೆ. ಹಿಂದೆ ಆದ ತಪ್ಪಿನ ಪುನರಾವರ್ತನೆ ಆಗದಂತಿರಲು ನಮ್ಮ ಇತಿಹಾಸವನ್ನು ಎಲ್ಲರೂ ಸರಿಯಾಗಿ ತಿಳಿದುಕೊಳ್ಳಬೇಕಿದೆ ಎಂದರು.
ಎಬಿವಿಪಿ ಸಾಮಾಜಿಕ ಜಾಲತಾಣ ಪ್ರಮುಖ ಜಿತೇಂದ್ರ ಮಾತನಾಡಿದರು. ಸರ್ಕಾರಿ ಪ್ರಥಮದರ್ಜೆ ಕಾಲೇಜು, ನೆಲ್ಲಿಕೇರಿ ಪಿಯು ಕಾಲೇಜು ಮತ್ತು ಬಾಳಿಗಾ ಕಾಲೇಜಿನ ಸುಮಾರು 800 ಕ್ಕೂ ಅಧಿಕ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ತಾಲೂಕು ಸಂಚಾಲಕ ನಿಶಾಂತ ಭಂಡಾರಿ, ಸಹ ಸಂಚಾಲಕಿ ಲಾವಣ್ಯ ಹೆಗಡೆ, ರಾಜ್ಯ ಕಾರ್ಯಕಾರಿಣಿ ಸದಸ್ಯೆ ರೂಪಾ, ಸಿರ್ಸಿ ವಿಭಾಗದ ಸಂಚಾಲಕ ವೀರೇಂದ್ರ ಇತರರು ಇದ್ದರು.