ಬೆಳಗಾವಿ: ಮೈಲಿಬೇನೆ ನಿಯಂತ್ರಣಕ್ಕೆ ರುಬೆಲ್ಲಾ ಚುಚ್ಚುಮದ್ದು ಕೊಟ್ಟಿದ್ದರಿಂದ ರಾಮದುರ್ಗ ತಾಲೂಕಿನ ಮೂರು ಮಕ್ಕಳು ಅಸ್ವಸ್ಥಗೊಂಡು ಮೃತಪಟ್ಟಿದ್ದ ಘಟನೆಗೆ ಸಂಬಂಧಿಸಿದಂತೆ ಪಾಲಕರು ಸೋಮವಾರ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರನ್ನು ಭೇಟಿಯಾಗಿ 20 ಲಕ್ಷ ರೂ. ಪರಿಹಾರ ನೀಡುವಂತೆ ಮನವಿ ಸಲ್ಲಿಸಿದರು.
ಆರೋಗ್ಯ ಇಲಾಖೆ ಸಿಬ್ಬಂದಿ ನಿರ್ಲಕ್ಷೃ ವಹಿಸಿದ್ದರಿಂದ ನಮ್ಮ ಮಕ್ಕಳು ಬಲಿಯಾಗಿದ್ದಾರೆ. ಘಟನೆಯಿಂದ ನಮಗೆ ಬಹಳ ನೋವು, ಸಂಕಟವಾಗಿದೆ. ನಮಗೆ ಕೂಡಲೇ ಪರಿಹಾರ ನೀಡಬೇಕು. ಜತೆಗೆ ಲಸಿಕೆ ನೀಡುವಲ್ಲಿ ನಿರ್ಲಕ್ಷೃ ವಹಿಸಿದ ಆರೋಗ್ಯ ಇಲಾಖೆ ಸಿಬ್ಬಂದಿಯನ್ನು ಅಮಾನತು ಮಾಡುವುದಷ್ಟೇ ಅಲ್ಲ.
ಅವರ ಮೇಲೆ ಕಠಿಣ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು. ಪಾಲಕರಾದ ಹೂವಪ್ಪ ಹುಲಗೂರು, ಮಿತ್ರವ್ವ ಹುಲಗೂರ, ಫಕೀರಪ್ಪ ಪೂಜಾರ, ರೇಣುಕಾ ಪೂಜಾರ, ಉಮೇಶ ಕುರುಗುಂದಿ, ಗಂಗವ್ವ ಕುರಗುಂದಿ ಹಾಗೂ ಭೀಮಸಿ ವಾರಿಮನಿ, ಮುತ್ತಪ್ಪ ಪೂಜಾರ, ವಕೀಲ ಎನ್.ಆರ್.ಲಾತೂರ್ ಇತರರು ಇದ್ದರು.