ಹಾಸನ: ಅಂಗನವಾಡಿ ಕಾರ್ಯಕರ್ತೆಯರ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮೇ 20ರಂದು ಅಂಗನವಾಡಿ ನೌಕರರ ಮುಷ್ಕರ ಹಮ್ಮಿಕೊಂಡಿದ್ದು, ಈ ವೇಳೆ ಸಾಮೂಹಿಕ ಬಂಧನಕ್ಕೊಳಗಾಗುವುದಾಗಿ ರಾಜ್ಯ ಅಂಗನವಾಡಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷೆ ಎಂ.ಬಿ. ಪುಷ್ಪಾ ತಿಳಿಸಿದರು.
ಅಂಗನವಾಡಿ ನೌಕರರು 50 ವರ್ಷಗಳಿಂದ ಐಸಿಡಿಎಸ್ ಅಡಿಯಲ್ಲಿ ದುಡಿಯುತ್ತಿದ್ದಾರೆ. ಸಾಮಾಜಿಕ ನ್ಯಾಯದ ಹಿನ್ನಲೆಯಲ್ಲಿ ಈ ಯೋಜನೆಯನ್ನು ಕಾಯಂ ಮಾಡಬೇಕು. ಕಾಯಂ ಮಾಡುವ ತನಕ ಕನಿಷ್ಠವೇತನ ನೀಡಬೇಕು. ಫಲಾನುಭವಿಗಳ ಘಟಕ ವೆಚ್ಚ ಹೆಚ್ಚಳ ಮಾಡಬೇಕೆಂಬ ಬೇಡಿಕೆಗಳನ್ನು ನಿರಂತರವಾಗಿ ಕೇಳಲಾಗುತ್ತಿದೆ. ದೇಶದ ಕಾರ್ಪೊರೇಟ್ ಬಂಡವಾಳಗಾರರಿಗೆ 15.32 ಲಕ್ಷ ಕೋಟಿ ರೂ. ಸಾಲ ಮನ್ನಾ, 1.97 ಲಕ್ಷ ಕೋಟಿ ರೂ. ಸಬ್ಸಿಡಿಗಳನ್ನು ಉದಾರವಾಗಿ ಕೊಡುವ ಕೇಂದ್ರ ಸರ್ಕಾರ ದೇಶದ ಭವಿಷ್ಯವನ್ನು ರೂಪಿಸಲು ಪೂರಕವಾಗಿ ಮಾನವ ಸಂಪನ್ಮೂಲದ ಬೆಳವಣಿಗಳಿಗೆ ದುಡಿಯುತ್ತಿರುವ ಅಂಗನವಾಡಿ ನೌಕರರಿಗೆ ಕೊಡಲು ಹಣವಿಲ್ಲ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ಹೊರಹಾಕಿದರು.
ಗುಜರಾತ್ ಹೈಕೋರ್ಟ್ ತೀರ್ಪಿನಂತೆ ಅಂಗನವಾಡಿ ನೌಕರರನ್ನು ಕಾಯಂ ಮಾಡಬೇಕು. 29 ಕಾರ್ಮಿಕ ಕಾನೂನುಗಳನ್ನು ರದ್ದುಗೊಳಿಸಿ ಹೊಸದಾಗಿ ತಂದಿರುವ 4 ಸಂಹಿತೆಗಳನ್ನು ರದ್ದುಗೊಳಿಸಿ ಐಸಿಡಿಎಸ್ ಯೋಜನೆಗೆ ಬಜೆಟ್ ಹೆಚ್ಚಿಸಬೇಕು. 26 ಸಾವಿರ ಕನಿಷ್ಠ ವೇತನ. 10 ಸಾವಿರ ರೂ. ಮಾಸಿಕ ಪಿಂಚಣಿ ಕೊಡಬೇಕು. 2011ರಿಂದ ನಿವೃತ್ತಿ ಆದ ಎಲ್ಲ ಕಾರ್ಯಕರ್ತೆ ಸಹಾಯಕಿಯರಿಗೆ ಗ್ರಾಚ್ಯುಟಿ ನೀಡಬೇಕು. ಈಗಾಗಲೇ ಬಿಡುಗಡೆ ಆದವರಿಗೆ ಗ್ರಾಚ್ಯುಟಿ ಲೆಕ್ಕಾಚಾರ ಪ್ರಕಾರ ನೀಡದೆ ಸಾವಿರಾರು ರೂ. ಕಡಿತ ಆಗಿರುವುದನ್ನು ವಾಪಸ್ ನೀಡಬೇಕು ಹಾಗೂ ಗ್ರಾಚ್ಯುಟಿ ಹಣ ಬಿಡುಗಡೆ ಮಾಡುವವರಿಗೆ ಸರಿಯಾದ ಕ್ರಮದಲ್ಲಿ ಲೆಕ್ಕ ಹಾಕಿ ನೀಡಬೇಕು. ಈ ಎಲ್ಲ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮೇ 20ರಂದು ಅಂಗನವಾಡಿ ಕೇಂದ್ರಗಳನ್ನು ಬಂದ್ ಮಾಡಿ, ಸಾಮೂಹಿಕ ಬಂಧನಕ್ಕೊಳಗಾಗುವ ಮುಖಾಂತರ ಸಾರ್ವತ್ರಿಕ ಮುಷ್ಕರದಲ್ಲಿ ಪಾಲ್ಗೊಳ್ಳಲಾಗುತ್ತಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ರಾಜ್ಯ ಅಂಗನವಾಡಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಎಂ. ಮಂಜೂಳಾ, ಖಜಾಂಚಿ ಜೆ.ಪಿ. ಶೈಲಜಾ, ಜಿಲ್ಲಾ ಕಾರ್ಯದರ್ಶಿ ಟಿ.ಎಚ್. ಜಯಂತಿ, ತಾಲೂಕು ಅಧ್ಯಕ್ಷೆ ಎನ್.ಕೆ. ನಾಗಲಕ್ಷ್ಮೀ, ಪ್ರಧಾನ ಕಾರ್ಯದರ್ಶಿ ಜರೀನಾ ಬಾನು ಇತರರು ಉಪಸ್ಥಿತರಿದ್ದರು.