ಜಿಲ್ಲೆ

20 ಮಂದಿ ಬುಡಕಟ್ಟು ಮುಖಂಡರು ದೆಹಲಿಗೆ

ಮೈಸೂರು: ದೆಹಲಿಯಲ್ಲಿ ಆಯೋಜಿಸಿರುವ ಕಾರ್ಯಾಗಾರದಲ್ಲಿ ಭಾಗವಹಿಸಲು ಹಾಗೂ ರಾಷ್ಟ್ರಪತಿ ಭೇಟಿಗಾಗಿ 20 ಜನರ ಜೇನುಕುರುಬ ಹಾಗೂ ಕೊರಗ ಜನಾಂಗದ ಮುಖಂಡರು ನಗರದಿಂದ ವಿಮಾನದ ಮೂಲಕ ಪ್ರಯಾಣ ಬೆಳೆಸಿದರು.
ನಗರದ ನ್ಯಾಯಾಂಗ ಬಡಾವಣೆಯಲ್ಲಿರುವ ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯಿಂದ ಜೂ.11 ರಿಂದ 13 ರವರೆಗೆ ಮೂರು ದಿನಗಳ ಕಾಲ ದೆಹಲಿ ಪ್ರವಾಸ ಕೈಗೊಂಡವರಿಗೆ ಶನಿವಾರ ಬೀಳ್ಕೊಡಲಾಯಿತು.
ಅಳಿವಿನ ಅಂಚಿನಲ್ಲಿರುವ ಮೂಲವಾಸಿ ಬುಡಕಟ್ಟು ಸಮುದಾಯದ ಸಮಗ್ರ ಅಭಿವೃದ್ಧಿಗಾಗಿ ನಡೆಯುವ ಕಾರ್ಯಾಗಾರದಲ್ಲಿ ದೇಶದ 15 ರಾಜ್ಯಗಳಿಂದ ಬುಡಕಟ್ಟು ಜನರ ಪ್ರತಿನಿಧಿಗಳು ಭಾಗವಹಿಸುತ್ತಾರೆ. ಮೈಸೂರು, ಕೊಡಗು, ಚಾಮರಾಜನಗರ, ಮಂಗಳೂರು, ಉಡುಪಿ ಜಿಲ್ಲೆಗಳಿಂದ ಹೊರಟ 20 ಜನರಲ್ಲಿ 7 ಜನ ಮಹಿಳೆಯರು, 13 ಜನ ಪುರುಷರು ಇದ್ದಾರೆ. ಇವರೆಲ್ಲರಿಗೂ ರಾಷ್ಟ್ರಪತಿ ಭೇಟಿ ನಂತರ ದೆಹಲಿ ದರ್ಶನ ಮಾಡಿಸಲಾಗುವುದು ಎಂದು ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ಎಲ್. ಶ್ರೀನಿವಾಸ್ ತಿಳಿಸಿದರು.
ಆದಿವಾಸಿ ಬುಡಕಟ್ಟು ಇಲಾಖೆಯ ಉಪನಿರ್ದೇಶಕಿ ಬಿ.ಎಸ್. ಪ್ರಭಾಅರಸ್, ಸಮಾಜ ಕಲ್ಯಾಣ ಇಲಾಖೆಯ ಅಧೀನ ಕಾರ್ಯದರ್ಶಿ ಶಿವಲಿಂಗ ಪ್ರಭುವಾಲಿ, ಸಹಾಯಕ ನಿರ್ದೇಶಕ ಎಚ್. ಶ್ರೀನಿವಾಸ್ ತಂಡದೊಂದಿಗೆ ದೆಹಲಿಗೆ ತೆರಳಿದರು. ಈ ಸಂದರ್ಭದಲ್ಲಿ ಸಂಶೋಧನಾ ಅಧಿಕಾರಿ ಸಿ. ಶಿವಕುಮಾರ್, ಕಲ್ಯಾಣಾಧಿಕಾರಿ ಬಸವರಾಜು, ಅರುಣಾಪ್ರಭು ಇತರರು ಇದ್ದರು.