ಕೆ.ಆರ್.ನಗರ: ಪಟ್ಟಣದಲ್ಲಿ ಬಾಕಿ ಉಳಿದಿರುವ ಹಾಗೂ ಹೊಸ ಬಡಾವಣೆಗಳಿಗೆ ಯುಜಿಡಿ ಸಂಪರ್ಕ ಕಲ್ಪಿಸಲು 20 ಕೋಟಿ ರೂ. ಮಂಜೂರು ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕಳೆದ ವಾರ ಸಚಿವ ಸಂಪುಟದ ಸಭೆಯಲ್ಲಿ ಇದಕ್ಕೆ ಒಪ್ಪಿಗೆ ದೊರೆತಿದ್ದು, ಶೀಘ್ರವೇ ಕೆಲಸ ಪ್ರಾರಂಭಿಸಲಾಗುವುದು ಎಂದು ಶಾಸಕ ಡಿ.ರವಿಶಂಕರ್ ಮಾಹಿತಿ ನೀಡಿದರು.
15ನೇ ಹಣಕಾಸು ಯೋಜನೆಯಡಿ ಪಟ್ಟಣದ 2ನೇ ವಾರ್ಡ್‌ನಲ್ಲಿ 23 ಲಕ್ಷ ರೂ. ವೆಚ್ಚದಲ್ಲಿ ರಸ್ತೆ ಮತ್ತು ಚರಂಡಿ ಕಾಮಗಾರಿಗಳಿಗೆ ಶುಕ್ರವಾರ ಚಾಲನೆ ನೀಡಿ ಮಾತನಾಡಿ, ನಗರದ ಜನತೆಗೆ ಸಮರ್ಪಕ ಕುಡಿಯುವ ನೀರು ಸರಬರಾಜು ಮಾಡಲು ಅಮೃತ ಯೋಜನೆಯಡಿ 30 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಆ ಹಣದಲ್ಲಿ 4 ಓವರ್ ಹೆಡ್‌ಟ್ಯಾಂಕ್, ಎರಡು ನೀರು ಶುದ್ಧೀಕರಣ ಘಟಕ, ಕಾವೇರಿ ನದಿಯಿಂದ ಪೈಪ್‌ಲೈನ್ ಕಾಮಗಾರಿ ಸೇರಿದಂತೆ ಇತರ ಅಗತ್ಯ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.
ಪಟ್ಟಣದ ಅಭಿವೃದ್ಧಿಗೆ ಅನುದಾನ ನೀಡುವಂತೆ ಸಚಿವರಾದ ಭೈರತಿ ಸುರೇಶ್ ಮತ್ತು ರಹೀಮ್‌ಖಾನ್ ಅವರಿಗೆ ಮನವಿ ಸಲ್ಲಿಸಿದ್ದು, ಇದಕ್ಕೆ ಪೂರಕವಾಗಿ ಸ್ಪಂದಿಸಿರುವ ಅವರು ಅಂದಾಜು ಪಟ್ಟಿ ನೀಡಿದರೆ ತ್ವರಿತವಾಗಿ ಅನುದಾನ ನೀಡುವ ಭರವಸೆ ನೀಡಿದ್ದಾರೆ. ಅಲ್ಲದೆ ವಸತಿ ಮತ್ತು ವಕ್ಫ್ ಸಚಿವ ಜಮೀರ್‌ಅಹಮದ್ ಅವರು ಕೂಡ ಹೆಚ್ಚಾಗಿ ಅಲ್ಪಸಂಖ್ಯಾತರು ವಾಸಿಸುವ ನಾಲ್ಕು ವಾರ್ಡ್‌ಗಳ ಸಮಗ್ರ ಅಭಿವೃದ್ಧಿ ಹಣ ನೀಡುವುದಾಗಿ ತಿಳಿಸಿದ್ದಾರೆ ಎಂದು ತಿಳಿಸಿದರು.
ಬೆಳಗಾವಿಯಲ್ಲಿ ಇತ್ತೀಚೆಗೆ ನಡೆದ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಶಾಸಕರ ಮನವಿಗೆ ಸ್ಪಂದಿಸಿ ಕ್ಷೇತ್ರವಾರು 25 ಕೋಟಿ ರೂ. ವಿಶೇಷ ಅನುದಾನ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದ್ದಾರೆ. ಚುನಾವಣಾ ಪೂರ್ವದಲ್ಲಿ ನೀಡಿದಂತೆ ಈಗಾಗಲೇ ನಾಲ್ಕು ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದು, ಯುವನಿಧಿ ಯೋಜನೆಯ ನೋಂದಣಿ ಆರಂಭವಾಗಲಿದೆ. ಅರ್ಹರು ಅಗತ್ಯ ದಾಖಲೆ ನೀಡಿ, ಹೆಸರು ನೋಂದಾಯಿಸಿಕೊಳ್ಳಬೇಕು ಎಂದು ಸಲಹೆ ನೀಡಿದರಲ್ಲದೆ, ಗೃಹ ಲಕ್ಷ್ಮೀಯೋಜನೆಯ ಫಲಾನುಭವಿಗಳಿಗೆ ಹಣ ಬಾರದಿದ್ದಲ್ಲಿ ಅಗತ್ಯ ದಾಖಲಾತಿಗಳನ್ನು ತಂದು ಪಟ್ಟಣದಲ್ಲಿರುವ ಶಾಸಕರ ಕಚೇರಿ ನೀಡಿ ಸಮಸ್ಯೆ ಸರಿಪಡಿಸಿಕೊಳುವಂತೆ ಶಾಸಕರು ಇದೇ ವೇಳೆ ತಿಳಿಸಿದರು.
ಪುರಸಭೆಯ 23 ವಾರ್ಡ್‌ಗಳಿಗೂ ಮೂಲ ಸೌಕರ್ಯ ಕಲ್ಪಿಸಲು ಮುಂದಿನ ದಿನಗಳಲ್ಲಿ ಪ್ರತಿ ವಾರ್ಡ್‌ವಾರು ಅಧಿಕಾರಿಗಳು, ಚುನಾಯಿತರು ಮತ್ತು ಸಾರ್ವಜನಿಕ ಸಭೆ ನಡೆಸಿ ಆಗಬೇಕಾಗಿರುವ ಕೆಲಸಗಳನ್ನು ಪಟ್ಟಿ ಮಾಡಿ ಆನಂತರ ಸರ್ಕಾರದಿಂದ ಅನುದಾನ ಮಂಜೂರು ಮಾಡಿಸುತ್ತೇನೆ. ಕಾಮಗಾರಿ ನಡೆಯುವ ಸ್ಥಳದಲ್ಲಿ ಪುರಸಭೆ ಅಧಿಕಾರಿಗಳು ಹಾಜರಿದ್ದು, ಗುಣಮಟ್ಟದ ಕೆಲಸ ಮಾಡಿಸಬೇಕು ಎಂದು ತಾಕೀತು ಮಾಡಿದ ಡಿ.ರವಿಶಂಕರ್, ವಾರ್ಡ್‌ನ ಸದಸ್ಯರು ಕಾಮಗಾರಿ ಬಗ್ಗೆ ನಿಗಾ ವಹಿಸಬೇಕು ಎಂದು ಸಲಹೆ ನೀಡಿದರು.
ಆನಂತರ ಅವರು 1ನೇ ವಾರ್ಡ್‌ನಿಂದ 23ನೇ ವಾರ್ಡ್‌ವರೆಗೆ ಸಂಪರ್ಕವಿಲ್ಲದ ಕಡೆ ಯುಜಿಡಿ ಸಂಪರ್ಕ ಕಲ್ಪಿಸುವ ಕಾಮಗಾರಿ, ವಾರ್ಡ್ 11 ಮತ್ತು 12ರಲ್ಲಿ ಸಿಸಿ ರಸ್ತೆ ಹಾಗೂ ಬಾಕ್ಸ್ ಚರಂಡಿ ನಿರ್ಮಾಣ ಕಾಮಗಾರಿಗಳಿಗೆ ಚಾಲನೆ ನೀಡಿದರು.
ಪುರಸಭಾ ಮುಖ್ಯಾಧಿಕಾರಿ ಡಾ.ಜಯಣ್ಣ ಮಾತನಾಡಿದರು. ಪುರಸಭೆ ಮಾಜಿ ಅಧ್ಯಕ್ಷರಾದ ನರಸಿಂಹರಾಜು, ಕೆ.ಜಿ.ಸುಬ್ರಮಣ್ಯ, ಸದಸ್ಯರಾದ ಪುರಸಭೆ ಸದಸ್ಯ ಕೋಳಿಪ್ರಕಾಶ್, ಶಿವುನಾಯಕ, ನಟರಾಜು, ಶಂಕರ್‌ಸ್ವಾಮಿ, ಆರೋಗ್ಯ ರಕ್ಷಾ ಸಮಿತಿ ಸದಸ್ಯರಾದ ಎಚ್.ಎಚ್.ನಾಗೇಂದ್ರ, ಎಂ.ಲೋಕೇಶ್, ಕೆಂಚಿಮಂಜು, ಎಸ್.ಸಾಗರ್, ಮಾಜಿ ಸದಸ್ಯ ಕೆ.ವಿನಯ್, ಟಿಎಪಿಸಿಎಂಎಸ್ ನಿರ್ದೇಶಕ ಡಿ.ಸಿ.ರವಿ, ಪುರಸಭೆ ಇಂಜಿನಿಯರ್‌ಗಳಾದ ಕೆ.ಆರ್.ಚಂದ್ರಶೇಖರ್, ಸೌಮ್ಯಾ, ನಗರ ಕಾಂಗ್ರೆಸ್ ಅಧ್ಯಕ್ಷ ಎಂ.ಜೆ.ರಮೇಶ್, ಮುಖಂಡರಾದ ಪುಟ್ಟರಾಜು, ಆದರ್ಶ, ಕೃಷ್ಣೇಗೌಡ, ಚಂದ್ರು, ಸಂಜಯ್‌ತಿಲಕ್, ನವೀದ್ ಮತ್ತಿತರರು ಇದ್ದರು.