ಜಿಲ್ಲೆ

20 ಕರೊನಾ ರೋಗಿಗಳು ಗುಣಮುಖ

ಕಾರವಾರ: ಇಲ್ಲಿನ ಕ್ರಿಮ್್ಸ ವಿಶೇಷ ಕರೊನಾ ವಾರ್ಡ್​ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 20 ಕರೊನಾ ರೋಗಿಗಳು ಗುಣಮುಖರಾಗಿದ್ದು, ಶನಿವಾರ ಆಸ್ಪತ್ರೆಯಿಂದ ಬಿಡುಗಡೆಯಾದರು.

ಬಿಡುಗಡೆಯಾದವರಲ್ಲಿ 9 ಮಹಿಳೆಯರು, ನಾಲ್ವರು ವೃದ್ಧರು, ಮೂವರು ಮಕ್ಕಳು ಸೇರಿದ್ದು, ಎಲ್ಲರೂ ಭಟ್ಕಳದವರಾಗಿದ್ದಾರೆ. ಜಿಲ್ಲಾಡಳಿತ ಹಾಗೂ ಕ್ರಿಮ್ಸ್​ನಿಂದ ಅವರಿಗೆ ಹೂಗುಚ್ಛ ನೀಡಿ, ಚಪ್ಪಾಳೆ ತಟ್ಟಿ ಆಂಬುಲೆನ್ಸ್​ಗಳಲ್ಲಿ ಬೀಳ್ಕೊಡಲಾಯಿತು.

ರೋಗಿಗಳು ಕ್ರಿಮ್್ಸ ವೈದ್ಯರ ಚಿಕಿತ್ಸೆ ಹಾಗೂ ಇಲ್ಲಿ ಮಾಡಿರುವ ವ್ಯವಸ್ಥೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಮಗೆ ಊಟ, ತಿಂಡಿ ಎಲ್ಲ ವ್ಯವಸ್ಥೆ ಸಮರ್ಪಕವಾಗಿತ್ತು. ವೈದ್ಯರು, ನರ್ಸ್​ಗಳು ಅತ್ಯಂತ ಪ್ರೀತಿಯಿಂದ ನೋಡಿಕೊಂಡರು ಎಂದು ಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ‘ನಮಗೆ ಯಾವುದೇ ರೋಗ ಲಕ್ಷಣವೇ ಇರಲಿಲ್ಲ. ವೈದ್ಯಕೀಯ ಪರೀಕ್ಷೆಯ ನಂತರವಷ್ಟೇ ನಮಗೆ ಗೊತ್ತಾಗಿದೆ. ಎಲ್ಲರಿಗೂ ಗುಣವಾಗಿದೆ. ಜನ ಆತಂಕಪಡಬಾರದು’ ಎಂದು ಸಲಹೆ ನೀಡಿದ್ದಾರೆ.

ಜಿಲ್ಲಾಧಿಕಾರಿ ಡಾ.ಹರೀಶ ಕುಮಾರ ಕೆ. ಜಿಪಂ ಸಿಇಒ ಎಂ.ರೋಷನ್, ಎಸ್​ಪಿ ಶಿವಪ್ರಕಾಶ ದೇವರಾಜು, ಡಾ.ಗಜಾನನ ನಾಯಕ, ಡಾ.ಶಿವಾನಂದ ಕುಡ್ತಲಕರ್, ಡಾ.ಜಿ.ಎನ್.ಅಶೋಕ ಕುಮಾರ್ ಇದ್ದರು.

ಯುಪಿಎಸ್​ಸಿ ಕೋಚಿಂಗ್ ಹೋದವನಿಗೂ ಬಂತು: ಜಿಲ್ಲೆಯಲ್ಲಿ ಮಹಾರಾಷ್ಟ್ರದಿಂದ ಆಗಮಿಸಿದ ಇನ್ನಿಬ್ಬರಿಗೆ ಕರೊನಾ ಇರುವುದು ಖಚಿತವಾಗಿದೆ. ಹೊನ್ನಾವರ ಕ್ವಾರಂಟೈನ್ ಕೇಂದ್ರದಲ್ಲಿದ್ದ ಮಹಾರಾಷ್ಟ್ರದಿಂದ ಮರಳಿದ 44 ವರ್ಷದ ಉದ್ಯಮಿಗೆ (ಪಿ.1693)ರೋಗ ಇರುವುದು ಶುಕ್ರವಾರ ಖಚಿತವಾಗಿತ್ತು. ಅವರ 34 ವರ್ಷದ ಪತ್ನಿಗೆ (ಪಿ.1911) ಶನಿವಾರ ರೋಗ ಖಚಿತವಾಗಿದೆ.

ಮುಂಬೈನಿಂದ ಬಂದ ಮುಂಡಗೋಡ ಪಾಳದ 23 ವರ್ಷದ ಯುವಕನಿಗೆ (ಪಿ.1912)ರೋಗ ಇರುವುದು ಶನಿವಾರ ಖಚಿತವಾಗಿದೆ. ಈತ ಹಾಗೂ ಇನ್ನು ನಾಲ್ವರ ಜತೆ ಯುಪಿಎಸ್​ಸಿ ಕೋಚಿಂಗ್​ಗೆ ತೆರಳಿದ್ದ. ಈ ಎಲ್ಲರೂ ಲಾಕ್​ಡೌನ್​ನಿಂದ ಅಲ್ಲೇ ಸಿಕ್ಕಿಕೊಂಡಿದ್ದರು. ಮೇ 14ರಂದು ರೈಲಿನ ಮೂಲಕ ಹುಬ್ಬಳ್ಳಿಗೆ ಬಂದು, ಯಲ್ಲಾಪುರ ತಲುಪಿದ್ದರು. ಈ ವೇಳೆ ಅವರನ್ನು ಯಲ್ಲಾಪುರ ಕ್ವಾರಂಟೈನ್ ಕೇಂದ್ರದಲ್ಲಿ ಇಡಲಾಗ್ತಿತ್ತು. ಇವರ ಜತೆ ಇದ್ದವರ ಗಂಟಲ ದ್ರವದ ಮಾದರಿ ಕಳುಹಿಸಲಾಗಿತ್ತು. ಇದರಲ್ಲಿ ಯುವಕನಿಗೆ ಪಾಸಿಟಿವ್ ಬಂದಿದ್ದು. ಈತನ ಜತೆ ಬಂದವರ ಪೈಕಿ ಇನ್ನು ಮೂವರ ವರದಿ ನೆಗೆಟಿವ್ ಬಂದಿದೆ. ಇನ್ನೊಬ್ಬರ ಪರೀಕ್ಷಾ ವರದಿ ಬರುವುದು ಇನ್ನೂ ಬಾಕಿ ಇದೆ. ಜಿಲ್ಲೆಯ ಒಟ್ಟಾರೆ ಕರೊನಾ ಮೀಟರ್ 66 ಕ್ಕೆ ಏರಿಕೆಯಾಗಿದ್ದು, ಅದರಲ್ಲಿ ಇದುವರೆಗೆ 32 ಜನ ಗುಣಮುಖರಾದಂತಾಗಿದೆ. ಸದ್ಯ ಜಿಲ್ಲೆಯ 34 ಹಾಗೂ ಉಡುಪಿ ಜಿಲ್ಲೆಯ ಇಬ್ಬರು ಸೇರಿ 36 ಜನರು ಕ್ರಿಮ್್ಸ ಕರೊನಾ ವಾರ್ಡ್​ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

25 ರಂದು ಐಸಿಎಂಆರ್ ತಜ್ಞರ ಭೇಟಿ: ಇಲ್ಲಿನ ಕ್ರಿಮ್ಸ್​ನಲ್ಲಿ ಪ್ರಾರಂಭವಾಗಿರುವ ರೋಗ ಸೂಕ್ಷಾ್ಮಣು ಪ್ರಯೋಗಾಲಯದಲ್ಲಿ ಸದ್ಯ ತ್ವರಿತ ಪರೀಕ್ಷಾ ಕಿಟ್​ಗಳ ಮೂಲಕ ದಿನಕ್ಕೆ 100 ಶಂಕಿತ ಕರೊನಾ ರೋಗಿಗಳ ಗಂಟಲ ದ್ರವದ ಮಾದರಿ ಪರೀಕ್ಷೆ ಮಾಡಲಾಗುತ್ತಿದೆ. ಅದರಿಂದ ಶೇ.60 ರಷ್ಟು ಮಾತ್ರ ಖಚಿತ ವದರಿ ನಿರೀಕ್ಷಿಸಬಹುದು. ಇದರಿಂದ ರಿವರ್ಸ್ ಟ್ರಾನ್ಸ್​ಸ್ಕ್ರಿಪ್ಶನ್ ಪಾಲಿಮರ್ ರಿಯಾಕ್ಷನ್ ಅಥವಾ ರಿಯಲ್ ಟೈಮ್ ಪಾಲಿಮರ್ ರಿಯಾಕ್ಷನ್ ಎಂದು ಕರೆಯುವ ಆರ್​ಟಿಪಿಸಿಆರ್ ಎಂಬ ಅತ್ಯಾಧುನಿಕ ಯಂತ್ರವನ್ನು ತರಿಸಲಾಗಿದೆ. ಅದರ ವರದಿ ಶೇ. 100 ರಷ್ಟು ನಿಖರವಾಗಿರಲಿದೆ. ಅಲ್ಲದೆ, ಸೋಂಕಿನ ಪ್ರಮಾಣ ಎಷ್ಟು ಪ್ರಮಾಣದಲ್ಲಿದೆ ಎಂಬುದನ್ನೂ ಗುರುತಿಸಬಹುದು. ದಿನಕ್ಕೆ 500 ಕ್ಕೂ ಅಧಿಕ ಮಾದರಿ ಪರೀಕ್ಷೆ ಮಾಡಬಹುದು. ಅದಕ್ಕೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಅನುಮೋದನೆ ಬೇಕಿದೆ. ಮೇ 25 ರಂದು ನವದೆಹಲಿಯಿಂದ ತಜ್ಞರ ತಂಡ ಪರಿಶೀಲನೆಗೆ ಕ್ರಿಮ್ಸ್​ಗೆ ಆಗಮಿಸಲಿದೆ. ಐಸಿಎಂಆರ್ ಅನುಮೋದನೆಯ ನಂತರ ಒಂದೆರಡು ದಿನದಲ್ಲಿ ಆರ್​ಟಿಪಿಸಿಆರ್ ಪರೀಕ್ಷೆ ಪ್ರಾರಂಭವಾಗಲಿದೆ ಎಂದು ಜಿಪಂ ಸಿಇಒ ಎಂ.ರೋಶನ್ ತಿಳಿಸಿದ್ದಾರೆ.

ಕರೊನಾ ಗುಣಪಡಿಸಬಹುದಾದ ರೋಗ. ವೃದ್ಧರು, ಮಕ್ಕಳು, ಗರ್ಭಿಣಿಯರು ಹಾಗೂ ಅಸ್ತಮಾದಂಥ ಆರೋಗ್ಯ ಸಮಸ್ಯೆ ಇರುವವರಿಗೆ ತೊಂದರೆ ಉಂಟಾಗುತ್ತದೆ. ಕರೊನಾ ಬಂತು ಎಂದು ಜನ ಕಂಗಾಲಾಗುವ ಅವಶ್ಯಕತೆ ಇಲ್ಲ. ನಮ್ಮಲ್ಲಿ ಉತ್ತಮ ವೈದ್ಯಕೀಯ ಸೌಲಭ್ಯ ಇದೆ. ಒಬ್ಬರಿಗೂ ಐಸೋಲೇಶನ್ ವೆಂಟಿಲೇಶನ್ ವ್ಯವಸ್ಥೆ ಬಳಸುವ ಪ್ರಮೇಯ ಬಂದಿಲ್ಲ. ಇನ್ನು ಜನರು ರೋಗಿಗಳು ಹಾಗೂ ಅವರ ಕುಟುಂಬದವರನ್ನು ಕೀಳಾಗಿ ನೋಡಿ ಸಾಮಾಜಿಕ ಬಹಿಷ್ಕಾರ ಮಾಡುವುದನ್ನು ಬಿಡಬೇಕು.
ಡಾ.ಗಜಾನನ ನಾಯಕ ಕ್ರಿಮ್್ಸ ನಿರ್ದೇಶಕ