ಉಮೇಶ ಮರಿಗುದ್ದಿ ಶಿರೋಳ
ಇಡೀ ವಿಶ್ವಕ್ಕೆ ಯೋಗ ಪರಿಚಯಿಸಿದ ಸುಯೋಗ ಭಾರತದ್ದು, ಅದರಲ್ಲೂ ಕರುನಾಡಿನ 20 ವಿದ್ಯಾರ್ಥಿಗಳು ವಿದೇಶದಲ್ಲಿ ಯೋಗ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದು, ಸಾಗರದಾಚೆಗೆ ಯೋಗದ ಮಹತ್ವ ಸಾರುತ್ತಿದ್ದಾರೆ.
ಗದಗ ಜಿಲ್ಲೆಯ ನರಗುಂದ ತಾಲೂಕಿನ ಶಿರೋಳ ಗ್ರಾಮದ ಹಂಪಸಾಗರ ಪರ್ವತ ಮರಿದೇವರ ಸ್ಮಾರಕ ಯೋಗ ವ್ಯಾಯಾಮ ಮತ್ತು ಕ್ರೀಡಾ ಸಂಘದ 20 ಯೋಗ ಸಾಧಕರು ಕಳೆದ ಆರು ವರ್ಷಗಳಿಂದ ವಿಯೆಟ್ನಾಂದಲ್ಲಿ ಯೋಗ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಗದಗದ ತೋಂಟದಾರ್ಯ ಮಠದ ಶ್ರೀ ಸಿದ್ಧಲಿಂಗ ಮಹಾಸ್ವಾಮೀಜಿಗಳು ಹಾಗೂ ಶಿರೋಳ ತೋಂಟದಾರ್ಯ ಮಠದ ಗುರುಬಸವ ಸ್ವಾಮೀಜಿಗಳಿಂದ ಸ್ಥಾಪನೆಗೊಂಡ, ಯೋಗ ಆಚಾರ್ಯ ಕೆ.ಎಸ್. ಪಲ್ಲೇದ ಹಾಗೂ ರುದ್ರಪ್ಪ ಕೊಣ್ಣೂರ ಅವರ ಮಾರ್ಗದರ್ಶನದಲ್ಲಿ ಈ ಕೇಂದ್ರ ಸಾಗುತ್ತಿದೆ.
ಯಾರ‌್ಯಾರು: ಶಿರೋಳ ಗ್ರಾಮದ ತೋಂಟದಾರ್ಯ ಮಠದ ಕೊಠಡಿಯಲ್ಲಿ ಪ್ರಾರಂಭವಾದ ಯೋಗ ಶಾಲೆಯ ವಿದ್ಯಾರ್ಥಿಗಳಾದ ಬಸವರಾಜ ಕೊಣ್ಣೂರ, ಬಸವರಾಜ ನಾಗಲೋಟಿಮಠ, ಉಮೇಶ ಕಬನೂರ, ಸಂಗಮೇಶ ಸಣ್ಣತಮ್ಮಣ್ಣವರ, ಈರಣ್ಣ ಕವಡಿಮಟ್ಟಿ, ಈರಣ್ಣ ಕೋಡಬಳ್ಳಿ, ಮಹಾಂತೇಶ ಮಾದಾರ, ಈರಣ್ಣ ಹೂದ್ಲೂರ, ಮಲ್ಲಿಕಾರ್ಜುನ ಕೋಡಬಳ್ಳಿ, ಸುನೀಲ ಕಳಸದ, ದ್ಯಾಮಣ್ಣ ಮೇಗೂರ, ಪ್ರವೀಣ ಗಡ್ಡಿ, ವಿಜಯ ಮುದೇನಗುಡಿ, ಶಿವಾನಂದ ಕೋಡಬಳ್ಳಿ, ಶರಣಪ್ಪ ಕೊಪ್ಪದ ಹಾಗೂ ಶರಣಪ್ಪ ಕೊಣ್ಣೂರ ಅವರು ಪ್ರಸ್ತುತ ವಿಯೆಟ್ನಾಂ ದೇಶದಲ್ಲಿ ಯೋಗ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಅಂದು ಒಂದು ಕೊಠಡಿಯಲ್ಲಿ ಆರಂಭವಾದ ಶಾಲೆ ಈಗ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದವರೆಗೂ ಬೆಳೆದು ನಿಂತಿದೆ.
ಯೋಗ ಕೇಂದ್ರ ಸ್ಥಾಪನೆ
ಕಳೆದ ಆರೇಳು ವರ್ಷದಿಂದ ಯೋಗ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವ ಶಿರೋಳದ ಈ ತಂಡ ವಿಯೆಟ್ನಾಂ ದೇಶದಲ್ಲಿ ಈಗ ಸ್ವಂತ ಯೋಗ ಕೇಂದ್ರವನ್ನು ತೆರೆದಿದೆ. ವಿದೇಶದ 5-6 ಜನರನ್ನು ಯೋಗ ಶಿಕ್ಷಕರನ್ನಾಗಿ ನೇಮಿಸಿಕೊಂಡು ತರಬೇತಿ ನೀಡುತ್ತಿದೆ.
10 ನಿಮಿಷದಲ್ಲಿ 108 ಸೂರ್ಯನಮಸ್ಕಾರ
ಯೋಗ ಶಿಕ್ಷಕ ಬಸವರಾಜ ನಾಗಲೋಟಿಮಠ ವಿಯೆಟ್ನಾಂ ದೇಶದ ಕ್ಯಾಲಿಫೋರ್ನಿಯಾ ಯೋಗಕೇಂದ್ರದಲ್ಲಿ ಯೋಗ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಜತೆಗೆ 10 ನಿಮಿಷದಲ್ಲಿ 108 ಸೂರ್ಯ ನಮಸ್ಕಾರಗಳನ್ನು ಹಾಕುವ ಮೂಲಕ ಭಾರತದ ಯೋಗವನ್ನು ವಿದೇಶದಲ್ಲಿ ಪಸರಿಸಿದ್ದಾರೆ.
ವಿದೇಶದಲ್ಲಿ ಯೋಗಕ್ಕೆ ಬಹಳ ಮಹತ್ವ ಕೊಡುತ್ತಾರೆ. ಇಲ್ಲಿ ಯೋಗವನ್ನು ಆರೋಗ್ಯದ ದೃಷ್ಟಿಯಿಂದ ನೋಡುತ್ತಾರೆ. ನಿತ್ಯ ಯೋಗ ಮಾಡುವುದರಿಂದ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬಹುದು. - ಬಸವರಾಜ ಕೊಣ್ಣೂರ, ಯೋಗ ಶಿಕ್ಷಕ
ನರಗುಂದ ತಾಲೂಕಿನ ಶಿರೋಳ ಗ್ರಾಮದ ಹಂಪಸಾಗರ ಪರ್ವತ ಮರಿದೇವರ ಸ್ಮಾರಕ ಯೋಗ ವ್ಯಾಯಾಮ ಮತ್ತು ಕ್ರೀಡಾ ಸಂಘಕ್ಕೆ ಇದು ಹೆಮ್ಮೆಯ ವಿಷಯ. ನಮ್ಮ ಶಾಲೆಯ 20 ವಿದ್ಯಾರ್ಥಿಗಳು ವಿದೇಶದಲ್ಲಿ ಯೋಗ ಶಿಕ್ಷಕರಾಗಿ ಯೋಗದ ಮಹತ್ವವನ್ನು ಜಗತ್ತಿಗೆ ಸಾರುವ ಕೆಲಸ ಮಾಡುತ್ತಿರುವುದು ಸಂತಸ ತಂದಿದೆ. - ಪ್ರಕಾಶಗೌಡ್ರ ತಿರಕನಗೌಡ್ರ, ಹಂಪಸಾಗರ ಯೋಗ ಸಂಘದ ಅಧ್ಯಕ್ಷ