ಸಾಂದರ್ಭಿಕ ಚಿತ್ರ 
ಜಿಲ್ಲೆ

ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಅಪರಾಧಿಗೆ 20 ವರ್ಷ ಕಠಿಣ ಸಜೆ

ಮಂಗಳೂರು: ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂ ಮೂಲಕ ಪರಿಚಯವಾದ ಅಪ್ರಾಪ್ತ ಬಾಲಕಿಯೊಬ್ಬಳನ್ನು ಕಾರು ಚಾಲಕನೊಬ್ಬ ಪ್ರೀತಿಯ ನಾಟಕವಾಡಿ ಲೈಂಗಿಕ ದೌರ್ಜನ್ಯ ನಡೆಸಿದ್ದಲ್ಲದೆ, ಜೀವ ಬೆದರಿಕೆ ಹಾಕಿದ ಪ್ರಕರಣ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯ ಎ್ಟಿಎಸ್‌ಸಿ-2 ಪೋಕ್ಸೋ ಕೋರ್ಟ್‌ನಲ್ಲಿ ಸಾಬೀತಾಗಿದೆ. ನ್ಯಾಯಾಲಯ ಅಪರಾಧಿಗೆ 20ವರ್ಷಗಳ ಕಠಿಣ ಸಜೆ ಹಾಗೂ 50 ಸಾವಿರ ರೂ.ದಂಡ ವಿಧಿಸಿ ತೀರ್ಪು ನೀಡಿದೆ.
ಗುರುಪುರ ಅಡ್ಡೂರು ಕೆಳಗಿನಕೆರೆಮನೆ ನಿವಾಸಿ ಅಫ್ರಿದಿ ಯಾನೆ ಅಪ್ಪಿ (20) ಶಿಕ್ಷೆಗೊಳಗಾದ ಅಪರಾಧಿ.
ಪ್ರಕರಣ ವಿವರ: ಬಂಟ್ವಾಳ ತಾಲೂಕಿನ ನಿವಾಸಿ, 17ವರ್ಷದ ಅಪ್ರಾಪ್ತ ಬಾಲಕಿ ್ಯಾಷನ್ ಡಿಸೈನಿಂಗ್ ಕಲಿಯುತ್ತಿದ್ದಳು. ಈ ಸಂದರ್ಭ ಆಕೆಗೆ ಇನ್‌ಸ್ಟಾಗ್ರಾಂ ಮೂಲಕ ಕಾರು ಚಾಲಕ ಅಫ್ರಿದಿ ಎಂಬಾತನ ಪರಿಚಯವಾಗಿದೆ. ಆಕೆಯ ಜತೆ ಅನ್ಯೋನ್ಯತೆ ಬೆಳೆಸಿಕೊಂಡ ಆರೋಪಿಯು ಆಕೆಯ ಜತೆ ಪ್ರೀತಿಯ ನಾಟಕವಾಡಿದ್ದಲ್ಲದೆ, ಮದುವೆಯಾಗುವುದಾಗಿ ನಂಬಿಸಿದ್ದಾನೆ. 2024ರ ಮೇ 27ರಂದು ಬೆಳಗ್ಗೆ 11 ಗಂಟೆ ವೇಳೆಗೆ ಬಾಲಕಿಯೊಬ್ಬಳೇ ಬಾಡಿಗೆ ಮನೆಯಲ್ಲಿದ್ದಾಗ ಆರೋಪಿ ಆ ಮನೆಗೆ ತೆರಳಿ ಒತ್ತಾಯಿಸಿ ದೈಹಿಕ ಸಂಪರ್ಕ ಬೆಳೆಸಿದ್ದಾನೆ. ಈ ಕೃತ್ಯದ ವಿಡಿಯೋ ಮಾಡಿದ್ದಾಗಿ ಹೇಳಿ, ಇನ್ನು ಮುಂದಕ್ಕೆ ದೈಹಿಕ ಸಂಪರ್ಕಕ್ಕೆ ಸಹಕಾರ ನೀಡಬೇಕು. ಇಲ್ಲದಿದ್ದರೆ ವಿಡಿಯೋ ವೈರಲ್ ಮಾಡುತ್ತೇನೆ, ಜೀವ ಸಹಿತ ನಿನ್ನನ್ನು ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದ. ಇದಾದ ನಂತರ ಪದೇ ಪದೇ ಅಪ್ರಾಪ್ತ ಬಾಲಕಿ ಜತೆ ನಿರಂತರ ಲೈಂಗಿಕ ಸಂಪರ್ಕ ಬೆಳೆಸಿದ್ದಾನೆ.
ಬಾಲಕಿ ಹೆತ್ತವರು 2025ರ ಜೂ.1ರಂದು ಬಾಡಿಗೆ ಮನೆಯನ್ನು ಬದಲಾಯಿಸಿ ಬಂಟ್ವಾಳ ತಾಲೂಕಿನಿಂದ ಬೆಳ್ತಂಗಡಿಗೆ ಸ್ಥಳಾಂತರವಾಗಿದ್ದರು. ಈ ಮನೆಯ ವಿಳಾಸವನ್ನೂ ಪತ್ತೆ ಹಚ್ಚಿದ ಆರೋಪಿ 2025ರ ಆ.6ರಂದು ಮತ್ತೆ ಆ ಮನೆಗೂ ತೆರಳಿ ದೈಹಿಕ ಸಂಪರ್ಕ ಬೆಳೆಸಿದ್ದಾನೆ. ಇದಾದ ಬಳಿಕ ಆರೋಪಿ ಬಾಲಕಿಯಿಂದ ದೂರ ಸರಿದಿದ್ದು, ಈ ವಿಚಾರದಲ್ಲಿ 2025ರ ಅ.30ರಂದು ಇಬ್ಬರೂ ವಾಗ್ವಾದ ನಡೆಸಿದ್ದಾರೆ. ಈ ವೇಳೆ ಆರೋಪಿ ನಿನ್ನನ್ನು ಮದುವೆ ಆಗಲ್ಲ ಎಂದು ಹೇಳಿದ್ದಾನೆ. ವಂಚನೆಗೊಳಗಾದ ಅಪ್ರಾಪ್ತೆ ಬಾಲಕಿ ಮನನೊಂದು ಫಿನಾಯಿಲ್ ಸೇವನೆ ಮಾಡಿ ಆತ್ಮಹತ್ಯೆಗೆ ಯತ್ನಿಸಿದ್ದಳು. ಕೂಡಲೇ ಆಕೆಯನ್ನು ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆರೋಪಿ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ಬಗ್ಗೆ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯ ಎ್ಟಿಎಸ್‌ಸಿ-2 ಪೋಕ್ಸೋ ಕೋರ್ಟ್‌ನ ನ್ಯಾಯಾಧೀಶರಾದ ಕೆ.ಎಸ್. ಮಾನು ಸಮಗ್ರ ವಿಚಾರಣೆ ನಡೆಸಿ ಆರೋಪಿಯ ಅಪರಾಧ ಸಾಬೀತುಪಡಿಸಿ ತೀರ್ಪು ನೀಡಿದ್ದಾರೆ. ಅಪರಾಧ ಐಪಿಸಿ 376(2)(ಎನ್) 506 ಕಲಂ 6 ಪೋಕ್ಸೋ ಕಾಯಿದೆ 2012ರಡಿ ಅಪರಾಧಿಗೆ 20 ವರ್ಷಗಳ ಕಠಿಣ ಸಜೆ ಮತ್ತು 50 ಸಾವಿರ ರೂ. ದಂಡ, ದಂಡ ತೆರಲು ತಪ್ಪಿದಲ್ಲಿ 4 ತಿಂಗಳ ಸಾದಾ ಸಜೆ, ಐಪಿಸಿ 506 (ಬೆದರಿಕೆ) ರಡಿ 3 ತಿಂಗಳು ಸಾದಾ ಸಜೆ, 5 ಸಾವಿರ ರೂ. ದಂಡ, ಒಂದು ವೇಳೆ ದಂಡ ತೆರಲು ತಪ್ಪಿದಲ್ಲಿ 15 ದಿನಗಳ ಸಾದಾ ಶಿಕ್ಷೆ ಅನುಭವಿಸಬೇಕಾಗಿದೆ. 2 ಶಿಕ್ಷೆಗಳನ್ನು ಏಕಕಾಲಕ್ಕೆ ಅನುಭವಿಸಬಹುದಾಗಿದೆ.
ದಂಡದ ಮೊತ್ತ 55 ಸಾವಿರ ರೂ. ಸಂತ್ರಸ್ತೆಗೆ ಪರಿಹಾರವಾಗಿ ನೀಡಬೇಕು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ 5.45ಲಕ್ಷ ರೂ. ಪರಿಹಾರ ನೀಡಬೇಕೆಂದು ನ್ಯಾಯಾಲಯ ನಿರ್ದೇಶನ ನೀಡಿದೆ.
ಬೆಳ್ತಂಗಡಿ ಠಾಣಾ ಇನ್‌ಸ್ಪೆಕ್ಟರ್ ರವಿ ಬಿ.ಎಸ್. ಆರೋಪಿ ವಿರುದ್ಧ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಪೋಕ್ಸೋ ವಿಶೇಷ ಸರ್ಕಾರಿ ಅಭಿಯೋಜಕಿ ಸಹನಾದೇವಿ ಬೋಳೂರು ಸಂತ್ರಸ್ತೆಯ ಪರವಾಗಿ ವಾದಿಸಿದ್ದರು.