ಶಿವಮೊಗ್ಗದ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ ನ್ಯಾಯಾಲಯ 
ಜಿಲ್ಲೆ

ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದವಗೆ 20 ವರ್ಷ ಕಠಿಣ ಶಿಕ್ಷೆ

ಶಿವಮೊಗ್ಗ: ಒಂಬತ್ತು ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದ ವ್ಯಕ್ತಿಗೆ ಪೋಕ್ಸೋ ನ್ಯಾಯಾಲಯವು 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು 2 ಲಕ್ಷ ರೂ. ದಂಡ ವಿಧಿಸಿದೆ.

ದಾವಣಗೆರೆ ಜಿಲ್ಲೆ ನ್ಯಾಮತಿಯ 34 ವರ್ಷದ ವ್ಯಕ್ತಿ ಶಿಕ್ಷೆಗೆ ಒಳಗಾದವ. ಈತ 2021ರಲ್ಲಿ ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದ. ಈ ಬಗ್ಗೆ ವಿನೋಬನಗರ ಠಾಣೆಯಲ್ಲಿ ಪೋಕ್ಸೋದಡಿ ಪ್ರಕರಣ ದಾಖಲಾಗಿತ್ತು. ಅಂದಿನ ತನಿಖಾಧಿಕಾರಿಯಾಗಿದ್ದ ವಿನೋಬನಗರ ಸಿಪಿಐ ಎನ್.ಎಸ್.ರವಿ ಅವರು ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದ್ದರು.
ಈ ಬಗ್ಗೆ ವಿಚಾರಣೆ ನಡೆಸಿದ ಶಿವಮೊಗ್ಗದ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ ನ್ಯಾಯಾಲಯ ಎಫ್‌ಟಿಎಸ್‌ಸಿ-2 (ಪೋಕ್ಸೋ) ನ್ಯಾಯಾಧೀಶರು ಆರೋಪ ಸಾಭೀತಾಗಿದ್ದರಿಂದ ಕಠಿಣ ಶಿಕ್ಷೆ ಮತ್ತು ದಂಡ ವಿಧಿಸಿದ್ದಾರೆ. ದಂಡ ಪಾವತಿಸಲು ವಿಫಲನಾದರೆ ಹೆಚ್ಚುವರಿ ಆರು ತಿಂಗಳು ಸಾದಾ ಕಾರಾಗೃಹ ಶಿಕ್ಷೆ ವಿಧಿಸಿದ್ದಾರೆ. ಅಲ್ಲದೆ, ಸಂತ್ರಸ್ತೆಗೆ 3 ಲಕ್ಷ ರೂ. ಪರಿಹಾರ ನೀಡುವಂತೆ ಆದೇಶಿಸಿದ್ದಾರೆ. ಸರ್ಕಾರಿ ಅಭಿಯೋಜಕ ಹರಿಪ್ರಸಾದ್ ಅವರು ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು.