ಜಿಲ್ಲೆ

ತಿರುವಿನಲ್ಲಿ ಉರುಳಿದ ಬಸ್ 20 ಮಂದಿಗೆ ಗಾಯ

ಕನಕಪುರ: ಬಸ್​ ಉರುಳಿ ಬಿದ್ದು 20 ಮಂದಿ ತೀವ್ರವಾಗಿ ಗಾಯಗೊಂಡಿರುವ ಘಟನೆ ತಾಲೂಕಿನ ಹೆಗ್ಗನೂರು ಬಳಿ ನಡೆದಿದೆ.

ಕನಕಪುರ ತಾಲೂಕಿನ ತಗಡೇಗೌಡನದೊಡ್ಡಿ ಗ್ರಾಮದ ಮದುವೆಯೊಂದು ಸಾತನೂರು ಸಂಗಮ ಬಳಿ ಇರುವ ಮಡಿವಾಳದ ಶಿವನಂಕಾರೇಶ್ವರದ ದೇವಾಲಯದ ಬಳಿ ನಡೆಯುತ್ತಿತ್ತು. ಈ ಮದುವೆಗೆ ತಗಡೇಗೌಡನದೊಡ್ಡಿ ಸೇರಿದಂತೆ ವಿವಿಧ ಗ್ರಾಮಗಳ ಜನರನ್ನು ಬಸ್​ನಲ್ಲಿ ಸಾಗಿಸಲಾಗುತಿತ್ತು.

ಕಾವೇರಿ ವನ್ಯ ಜೀವಿಧಾಮದ ಹೆಗ್ಗನೂರು ಬಳಿ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಬಸ್ ಉರುಳಿ ಬಿದ್ದಿದೆ. ಈ ವೇಳೆ ಬಸ್ ನಲ್ಲಿ ಇದ್ದ ಸುಮಾರು 20ಕ್ಕೂ ಹೆಚ್ಚು ಮಂದಿಗೆ ತೀವ್ರ ಗಾಯಗಳಾಗಿವೆ. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಸಾತನೂರು ಪೊಲೀಸರು ಸ್ಥಳೀಯರ ನೆರವಿನೊಂದಿಗೆ ಎಲ್ಲಾ ಗಾಯಾಳುಗಳನ್ನು ಕನಕಪುರ ಆಸ್ಪತ್ರೆಗೆ ಸಾಗಿಸಿದ್ದಾರೆ.

ಹಲವರ ಸ್ಥಿತಿ ಚಿಂತಾಜನಕವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಎಲ್ಲರನ್ನೂ ಬೆಂಗಳೂರಿನ ಸಂಜಯಗಾಂಧಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಈ ಸಂಬಂಧ ಸಾತನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.