ಕಡೂರು: ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಒತ್ತು ನೀಡುವುದರ ಜತೆಗೆ ದುಡಿಯುವ ವರ್ಗಗಳ ಏಳಿಗೆಗೂ ಪ್ರಾಮುಖ್ಯತೆ ನೀಡಲಾಗುತ್ತಿದೆ ಎಂದು ಶಾಸಕ ಕೆ.ಎಸ್.ಆನಂದ್ ತಿಳಿಸಿದರು.
ಸಾರ್ವಜನಿಕ ಆಸ್ಪತ್ರೆ ಸಂಗೊಳ್ಳಿರಾಯಣ್ಣ ಟ್ಯಾಕ್ಸಿ ನಿಲ್ದಾಣದಲ್ಲಿ 20 ಲಕ್ಷ ರೂ. ವೆಚ್ಚದಲ್ಲಿ ನೂತನ ನಿಲ್ದಾಣ ನಿರ್ಮಾಣಕ್ಕೆ ಗುರುವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿ, ಶ್ರಮಿಕ ವರ್ಗಕ್ಕೆ ಸೌಕರ್ಯಗಳನ್ನು ಕಲ್ಪಿಸಲು ಸರ್ಕಾರ ಅನೇಕ ಯೋಜನೆಗಳನ್ನು ರೂಪಿಸಿದೆ. ಪಟ್ಟಣದ ಹಲವಾರು ಕಡೆ ಆಟೋ ನಿಲ್ದಾಣಗಳ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಬೀರೂರಿನಲ್ಲೂ ಟ್ಯಾಕ್ಸಿ ನಿಲ್ದಾಣಕ್ಕೆ 14 ಲಕ್ಷ ರೂ. ಅನುದಾನ ನೀಡಲಾಗಿದೆ. ಚಾಲಕರ ಬಹಳ ವರ್ಷದ ಬೇಡಿಕೆಗಳನ್ನು ಹಂತ ಹಂತವಾಗಿ ಈಡೇರಿಸಲಾಗುತ್ತಿದೆ ಎಂದರು.
ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಮಾತನಾಡಿ, ಪಟ್ಟಣದ ಸರ್ವಾಂಗೀಣ ಅಭಿವೃದ್ಧ್ದಿಗೆ ಶಾಸಕರ ಜತೆಗೂಡಿ ಪುರಸಭೆ ಶ್ರಮಿಸುತ್ತದೆ. ನಿಲ್ದಾಣದ ಕಾಮಗಾರಿಗೆ ಅನುದಾನದ ಕೊರತೆಯಿದೆ. ಶಾಸಕರು ಕಾಳಜಿ ವಹಿಸಿ ಸುಸಜ್ಜಿತ ನಿಲ್ದಾಣಗಳ ನಿರ್ಮಾಣಕ್ಕೆ ಒತ್ತು ನೀಡುತ್ತಿದ್ದಾರೆ. ಪಟ್ಟಣದ ಬಸವೇಶ್ವರ ವೃತ್ತದ ಬಳಿಯ ಬಸ್ ತಂಗುದಾಣ ನಿರ್ಮಿಸಬೇಕಿದೆ. ಆದರೆ ಜಾಗದ ಕೊರತೆಯಿದ್ದು, ಶಾಸಕರ ಜತೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದರು.
ಪುರಸಭೆ ಉಪಾಧ್ಯಕ್ಷೆ ಮಂಜುಳಾ ಚಂದ್ರು, ಸದಸ್ಯರಾದ ಈರಳ್ಳಿ ರಮೇಶ್, ಸೈಯಾದ್ ಯಾಸೀನ್, ಯತಿರಾಜ್, ಟ್ಯಾಕ್ಸಿ ಚಾಲಕರ ಸಂಘದ ಅಧ್ಯಕ್ಷ ವಿನೋದ್, ಮುಖಂಡರಾದ ಚಂದ್ರಮೌಳಿ, ಎನ್.ಬಷೀರ್ ಸಾಬ್, ಪಂಗ್ಲಿ ಮಂಜುನಾಥ್, ರಾಜು, ಡಿಶ್ ಮಂಜುನಾಥ್, ಭೂಸೇನಾ ನಿಗಮದ ಎಇಇ ಅಶ್ವಿನಿ, ಗಿರೀಶ್, ರಾಜು, ಗಂಗರಾಜ್ ಇತರರಿದ್ದರು.