ಸಿದ್ದಾಪುರ: ತಾಲೂಕಿನ ಕೊರ್ಲಕೈ ಗ್ರಾಪಂ ವ್ಯಾಪ್ತಿಯ ಮಾವಿನಗುಂಡಿ-ಸಾಗರ ರಾಷ್ಟ್ರೀಯ ಹೆದ್ದಾರಿಯ 206ರ ಸಮೀಪ ಇರುವ ಶಿಥಿಲಾವಸ್ಥೆಯಲ್ಲಿರುವ ನಿಸರ್ಗ ನಿರ್ವಿುತ ಶಿಲಾ ಸೇತುವೆಯ(ಕಲ್ಲು ಸಂಕ) ಸಂರಕ್ಷಣೆಗೆ ಸಹ್ಯಾದ್ರಿ ಪಾರಂಪರಿಕ ಅಭಿವೃದ್ಧಿ ಪ್ರಾಧಿಕಾರ 20 ಲಕ್ಷ ರೂ. ಅನುದಾನದ ನೀಡಿದೆ.
ಸ್ಥಳೀಯ ಕಲಗಾರಿನಲ್ಲಿ ಹುಟ್ಟಿ ಮುಂದೆ ವರದಾನದಿಗೆ ಸೇರುವ ಹೊಳೆಗೆ ಪ್ರಾಕೃತಿಕವಾಗಿ ಶಿಲಾ ಸೇತುವೆ ನಿರ್ವಣಗೊಂಡಿದೆ. 45 ಅಡಿ ಉದ್ದ, 4ರಿಂದ 6 ಅಡಿ ಅಗಲ, 2ರಿಂದ 3 ಅಡಿ ದಪ್ಪ ಇದ್ದು ಹೊಳೆಯ ತಳಪಾಯದಿಂದ 9 ಅಡಿ ಎತ್ತರದಲ್ಲಿ ಶಿಲಾ ಸೇತುವೆ ಇದೆ.
ಸಂರಕ್ಷಣೆಗೆ ಚಾಲನೆ: ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಇತ್ತೀಚೆಗೆ ಶಿಲಾ ಸೇತುವೆ(ಕಾಲು ಸಂಕ) ಸಂರಕ್ಷಣೆಗೆ ಚಾಲನೆ ನೀಡಿ, ಜವಾಬ್ದಾರಿಯುತವಾಗಿ ಕಾಮಗಾರಿ ನಡೆಸಬೇಕು ಎಂದು ಪ್ರಾಧಿಕಾರ ಹಾಗೂ ನಿರ್ವಿುತಿ ಕೇಂದ್ರದ ಅಧಿಕಾರಿಗಳಿಗೆ ಸೂಚಿಸಿದರು.
ಗ್ರಾಪಂ ಅಧ್ಯಕ್ಷ ಮಂಜುನಾಥ ಮಡಿವಾಳ, ಜಿಪಂ ಸದಸ್ಯೆ ಸುಮಂಗಲಾ ನಾಯ್ಕ, ತಾಪಂ ಅಧ್ಯಕ್ಷ ಸುಧೀರ್ ಗೌಡರ್, ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಮಹಾಬಲೇಶ್ವರ ಹೆಗಡೆ, ತಾಪಂ ಸದಸ್ಯೆ ಪದ್ಮಾವತಿ ಮಡಿವಾಳ, ಸಹ್ಯಾದ್ರಿ ಪಾರಂಪರಿಕ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪೂರ್ಣಿಮಾ, ಸದಸ್ಯರಾದ ಶಿವಾನಂದ ಹೆಗಡೆ ಕೆರೆಮನೆ, ಶ್ರೀಪಾದ ಬಿಚ್ಚುಗತ್ತಿ, ನಿರ್ವಿುತಿ ಕೇಂದ್ರದ ಇಂಜಿನಿಯರ್ ಕುಮಾರ್ ಇದ್ದರು.