ಬೆಂಗಳೂರು: ಕರೊನಾ ವಿರುದ್ಧದ ಸಮರೋಪಾದಿಯ ಕಾರ್ಯಕ್ಕೆ ಆರ್ಥಿಕ ಚೈತನ್ಯ ತುಂಬಲು ಇಂಡಿಯನ್ ಬ್ಯಾಂಕ್ ಸಿಬ್ಬಂದಿ ಮುಂದಾಗಿದ್ದಾರೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿಗಳ ಕರೊನಾ ಪರಿಹಾರ ನಿಧಿಗೆ 20 ಲಕ್ಷ ರೂಪಾಯಿ ದೇಣಿಗೆ ನೀಡಿದ್ದಾರೆ.
ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ಅವರನ್ನು ಗುರುವಾರ ಭೇಟಿ ಮಾಡಿದ ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ನಿರ್ದೇಶಕ ಪಿ. ಲಕ್ಷ್ಮೀನಾರಾಯಣ, ಉಪ ವಲಯ ಮುಖ್ಯಸ್ಥ ಎಂ. ಆರ್ಮುಗಂ, ಪ್ರಧಾನ ಪ್ರಬಂಧಕ ಸುಂದರ ಬಾಬು ಅವರು ನೆರವಿನ ಚೆಕ್ ಹಸ್ತಾಂತರಿಸಿದರು.
ಇದೇ ವೇಳೆ ಇಂಡಿಯನ್ ಬ್ಯಾಂಕ್ ತನ್ನ ಗ್ರಾಹಕರಿಗೆ ಕರೊನಾ ಲಾಕ್ಡೌನ್ ಸಂದರ್ಭದಲ್ಲೂ ನೀಡಿದ ಸೇವೆಗಳ ಮಾಹಿತಿ ಒಳಗೊಂಡ ವರದಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಯಿತು.