ಜಿಲ್ಲೆ

20 ಎಲೆಕ್ಟ್ರಿಕಲ್ ಬಸ್ ಸಂಚಾರ ಶೀಘ್ರ

 ಶಾಸಕ ಬಾಲಕೃಷ್ಣ ಭರವಸೆ
ಮಾಗಡಿ ನಿಲ್ದಾಣದಲ್ಲಿ ಪ್ರಯಾಣಿಕರ ಕುಂದುಕೊರತೆ ಆಲಿಕೆ

ಮಾಗಡಿ: ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣಕ್ಕೆ ಶೀಘ್ರವೇ ಕೆಂಪೇಗೌಡ ಬಸ್ ನಿಲ್ದಾಣ ಎಂದು ನಾಮಕರಣ ಮಾಡಲಾಗುವುದು ಎಂದು ಶಾಸಕ ಎಚ್.ಸಿ.ಬಾಲಕೃಷ್ಣ ಹೇಳಿದರು.
ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಶನಿವಾರ ಪ್ರಯಾಣಿಕರ ಕುಂದುಕೊರತೆ ಆಲಿಸಿ ಮಾತನಾಡಿದ ಅವರು, ಮಾಗಡಿಯಿಂದ ಬೆಂಗಳೂರಿಗೆ ಪ್ರತಿನಿತ್ಯ ಸಾವಿರಾರು ಮಂದಿ ಪ್ರಯಾಣಿಸುತ್ತಿರುವುದರಿಂದ ಪ್ರಯಾಣಿಕರ ಅನುಕೂಲಕ್ಕಾಗಿ 15 ದಿನಗಳ ಒಳಗೆ 20 ಎಲೆಕ್ಟ್ರಿಕಲ್ ಬಸ್ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು. ಬಸ್ ನಿಲ್ದಾಣದಲ್ಲಿ ಕಳ್ಳತನ ಪ್ರಕರಣಗಳು ದಾಖಲಾಗುತ್ತಿದ್ದು, ಸಿಸಿ ಕ್ಯಾಮರಾ ಆಳವಡಿಸಬೇಕು, ಮಾರ್ಗಗಳಿಗೆ ಸಂಚರಿಸುವ ಸಮಯದ ಬಗ್ಗೆ ನಾಮಫಲಕಗಳನ್ನು ಶುಕ್ರವಾರದೊಳಗೆ ಅಳವಡಿಸಿ, ನಿಗದಿತ ಸಮಯಕ್ಕೆ ಬಸ್ ತೆರಳಬೇಕು. ಇದರೊಂದಿಗೆ ಸ್ವಚ್ಛತೆಗೆ ಹೆಚ್ಚು ಒತ್ತು ನೀಡಬೇಕು ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೆ ಬಾಲಕೃಷ್ಣ ಸೂಚಿಸಿದರು.

ಹೆಚ್ಚುವರಿ ಬಸ್ ಸಂಚಾರ
ಮಾಗಡಿ, ಕುದೂರು, ಸುಗ್ಗನಹಳ್ಳಿ ಮಾರ್ಗವಾಗಿ ತುಮಕೂರು, ಶ್ರೀಗಿರಿಪುರ, ಶಿವಗಂಗೆ, ದಾಬಸ್‌ಪೇಟೆ ಮಾರ್ಗವಾಗಿ ತುಮಕೂರು, ಮಾಗಡಿ ಅಜ್ಜನಹಳ್ಳಿ ರಾಮನಗರ, ಮಾಗಡಿ, ಜಾಲಮಂಗಲ ಮಾರ್ಗವಾಗಿ ರಾಮನಗರ ಸೇರಿದಂತೆ ಶನಿವಾರ, ಭಾನುವಾರ ಹಾಗೂ ರಜಾ ದಿನಗಳಲ್ಲಿ ಹೆಚ್ಚು ಬಸ್ ಸೌಲಭ್ಯ ಒದಗಿಸಿ ಮಾಗಡಿ-ಬೆಂಗಳೂರಿಗೆ ಬೆಳಗ್ಗೆ 6 ರಿಂದ 9 ಗಂಟೆಯವರೆಗೂ ಬಸ್ ಸಂಚಾರಕ್ಕೆ ಕ್ರಮವಹಿಸುವಂತೆ ಸೂಚಿಸಿದರು.
ಬಸ್ ಸಮಸ್ಯೆಗಳ ಬಗ್ಗೆ ಸಾಕಷ್ಟು ದೂರುಗಳು ಬರುತ್ತಿವೆ. ನಮ್ಮವರೇ ಸಾರಿಗೆ ಸಚಿವರು ಇರುವಾಗ ಬಸ್ ಸಮಸ್ಯೆ ಎಂದರೆ ಹೇಗೆ ಎಂದು ಶಾಸಕರು ಅಧಿಕಾರಿಗಳನ್ನು ಪ್ರಶ್ನಿಸಿದರು.

ಬಸ್ ನಿಲ್ದಾಣದಲ್ಲಿ ಸ್ವಚ್ಛತೆ, ಮೂಲ ಸೌಕರ್ಯ ಇಲ್ಲ. ಹಾಲು ಉಣಿಸುವ ಕೇಂದ್ರ ಕಸದ ತೊಟ್ಟಿಯಾಗಿದೆ, ಮಾಗಡಿಯಿಂದ ಮಂತ್ರಾಲಯಕ್ಕೆ ಬಸ್ ಸಂಪರ್ಕ ಕಲ್ಪಿಸುವಂತೆ ವಿದ್ಯಾರ್ಥಿ ಮಿತ್ರ ಕಿರಣ್ ಶಾಸಕರಲ್ಲಿ ಮನವಿ ಮಾಡಿದರು. ಶಾಲಾ ವಿದ್ಯಾರ್ಥಿಗಳಿಗೆ ಬಸ್ ಪಾಸ್ ನೀಡುತ್ತಿಲ್ಲ. ಹಳೇ ಬಸ್‌ಗಳು ಇವೆ. ಸಮಯಕ್ಕೆ ಬಸ್ ಇಲ್ಲ ಎಂದು ನಿವೃತ್ತ ಶಿಕ್ಷಕ ಮಾರಣ್ಣ ಶಾಸಕರಿಗೆ ಮನವಿ ಮಾಡಿದರು. ಎಸ್ಸಿಎಸ್ಟಿ, ಮಾಜಿ ಸೈನಿಕರಿಗೆ, ಅಂಗವಿಕಲರಿಗೆ ನಿಯಮದಂತೆ ಮಳಿಗೆಗಳನ್ನು ಹಂಚಿಕೆ ಮಾಡಿಲ್ಲ. ಇದರಿಂದ ಅನ್ಯಾಯವಾಗಿದೆ ಎಂದು ದಲಿತ ಮುಖಂಡ ದೊಡ್ಡಯ್ಯ ಶಾಸಕರ ಗಮನಕ್ಕೆ ತಂದರು. ಬಿಎಂಟಿಸಿ ಬಸ್‌ಗಳು ಶ್ರೀಪತಿಹಳ್ಳಿ ಶ್ರೀಲಕ್ಷ್ಮಿನರಸಿಂಹ ಸ್ವಾಮಿ ದೇವಾಲಯದ ಬಳಿ ಬರುತ್ತಿಲ್ಲ. ಗ್ರಾಮದ ಬಳಿಯೇ ನಿಲ್ಲಿಸುವುದರಿಂದ ಭಕ್ತರಿಗೆ ತೊಂದರೆಯಾಗಿದೆ ಎಂದು ಶ್ರೀಪತಿಹಳ್ಳಿ ರಾಜು ಶಾಸಕರ ಗಮನಕ್ಕೆ ತಂದರು. ಈ ವೇಳೆ ಶಾಸಕರು ಸಮಸ್ಯೆ ಬಗೆಹರಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.


ವೇತನ ಹೆಚ್ಚಳ ಸಮಸ್ಯೆ, ವೇತನ ಪರಿಷ್ಕರಣೆ, ಹಿಂಬಾಕಿ ಮೊತ್ತ, ಹೊಸ ಬಸ್ ಖರೀದಿ, ನೌಕರರನ್ನು ನೇಮಿಸಿಕೊಂಡಿಲ್ಲ ಇದರಿಂದ ಸಮಸ್ಯೆ ಉಂಟಾಗುತ್ತಿದೆ ಎಂದು ನೌಕರ ಚಂದ್ರಶೇಖರ್ ಶಾಸಕರ ಗಮನಕ್ಕೆ ತಂದರು. ಶಾಸಕರು, ಸಂಬಂಧ ಪಟ್ಟ ಸಚಿವರ ಬಳಿ ಚರ್ಚಿಸಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು.


ಕೆಎಸ್‌ಆರ್‌ಟಿಸಿ ಡಿಸಿ ಕಿರಣ್ ಕುಮಾರ್, ವಿಭಾಗೀಯ ಸಂಚಾರ ಅಧಿಕಾರಿ ರಾಘವೇಂದ್ರ, ಮ್ಯಾನೇಜರ್ ತಾರಾನಾಥ್, ಪುರಸಭೆ ಸದಸ್ಯ ಶಿವಕುಮಾರು, ಗುರುಸ್ವಾಮಿ, ಆನಂದ್, ಕೆಂಪೇಗೌಡ, ಮಹೇಶ್, ಪುಷ್ವ, ವನಜಾ ಇತರರು ಇದ್ದರು.