ಜಿಲ್ಲೆ

ಸದಸ್ಯರಿಗೆ ಶೇ.20 ಡಿವಿಡೆಂಡ್ ಘೋಷಣೆ

Avinash R

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

ವೇಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ ವೇಣೂರು ಶ್ರೀ ಬಾಹುಬಲಿ ಸಭಾಭವನದಲ್ಲಿ ಸಂಘದ ಅಧ್ಯಕ್ಷ ಸುಂದರ ಹೆಗ್ಡೆ ಬಿ.ಇ ಅಧ್ಯಕ್ಷತೆಯಲ್ಲಿ ಭಾನುವಾರ ನಡೆಯಿತು.

ಸಂಘ 2023-24ನೇ ಸಾಲಿನಲ್ಲಿ 328.42 ಕೋಟಿ ರೂ. ವ್ಯವಹಾರ ನಡೆಸಿದ್ದು 1.59 ಕೋಟಿ ರೂ. ಲಾಭಗಳಿಸಿರುತ್ತದೆ. ಸಂಘದ ಸದಸ್ಯರಿಗೆ ಶೇ.20 ಡಿವಿಡೆಂಡ್ ಘೋಷಿಸಲಾಯಿತು.

ಸಂಘದ ಸದಸ್ಯರ ಎಸ್‌ಎಸ್‌ಎಲ್‌ಸಿಗಿಂತ ಹೆಚ್ಚಿನ ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಹಾಗೂ ಭತ್ತದ ಕೃಷಿ ಬೆಳೆಯುವ ಸಂಘದ ಸದಸ್ಯರಿಗೆ ಪ್ರೋತ್ಸಾಹ ಧನ ನೀಡಲಾಯಿತು. ಸಂಘದ ಹಿರಿಯ 12 ಮಂದಿ ಸದಸ್ಯರನ್ನು ಗೌರವಿಸಲಾಯಿತು. ಏಷ್ಯನ್ ಪೆಸಿಫಿಕ್ ಚಾಂಪಿಯನ್‌ಷಿಪ್ ಅಂತರಾಷ್ಟ್ರೀಯ ಯೋಗಾಸನ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದ ಕರಿಮಣೇಲು ಗ್ರಾಮದ ಕೊಕ್ರಾಡಿ ಪ್ರೌಢಶಾಲೆ ಶಿಕ್ಷಕಿ ಅಕ್ಕಮ್ಮ, ಹೈನುಗಾರಿಕೆಯಲ್ಲಿ ಉತ್ತಮ ಸಾಧನೆ ಮಾಡಿದ ಹರೀಶ್ ನೀರಪಲ್ಕೆ ಹಾಗೂ ಉತ್ತಮ ಪ್ರಗತಿಪರ ಕೃಷಿ ಕೃಷಿಕರಾದ ಗುಣಪಾಲ ಅತಿಕಾರಿ ಕಡಂಬಿಲ ಅವರನ್ನು ಸನ್ಮಾನಿಸಲಾಯಿತು.

ಸಂಘದ ಉಪಾಧ್ಯಕ್ಷ ಸುಂದರ್ ಪೂಜಾರಿ, ನಿರ್ದೇಶಕರಾದ ರಾಮದಾಸ್ ನಾಯಕ್, ನಾಗಪ್ಪ, ರತ್ನಾಕರ ಬಿ., ಸುಧೀರ್ ಭಂಡಾರಿ, ಗಣಪತಿ ಪ್ರಸನ್ನ, ದೋಗು ನಾಯ್ಕ, ಆಶಾ, ವೀಣಾ ದೇವಾಡಿಗ, ಸಂದೀಪ್ ಹೆಗ್ಡೆ, ಎಂ.ಆರ್.ಸಂತೋಷ್, ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಮೇಲ್ವಿಚಾರಕರಾದ ಸಿರಾಜುದ್ದೀನ್, ಲೆಕ್ಕಿಗರಾದ ಭರತ್ ರಾಜ್ ಕೆ.ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

ನಿರ್ದೇಶಕರಾದ ಸುಧೀರ್ ಭಂಡಾರಿ ವಂದಿಸಿದರು. ಸಂಘದ ಅಧ್ಯಕ್ಷರಾದ ಸುಂದರ ಹೆಗ್ಡೆ ಸ್ವಾಗತಿಸಿ, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಯಂತ ಪೂಜಾರಿ ವಾರ್ಷಿಕ ವರದಿ ಹಾಗೂ ಸಂಘದ ಲೆಕ್ಕಪತ್ರಗಳನ್ನು ಮಂಡಿಸಿದರು.