ಬೆಂಗಳೂರು:ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿ ಬಿಒಒ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ಡೇಟಾ ಎಂಟ್ರಿ ಆಪರೇಟರ್ಗಳಿಗೆ ಕಂಪನಿಯೇ ಪ್ರತಿ ತಿಂಗಳು ಸಮರ್ಪಕವಾಗಿ ವೇತನ ನೀಡಬೇಕು ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ವಿಧಾನಪರಿಷತ್ತಿನಲ್ಲಿ ತಿಳಿಸಿದರು.
ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿಯ ಚಿದಾನಂದ ಎಂ.ಗೌಡ ಎತ್ತಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಸರ್ಕಾರದಿಂದ ಹಣ ಬಂದಿಲ್ಲ ಎಂಬ ಕಾರಣವೊಡ್ಡಿ ವೇತನ ಪಾವತಿಗೆ ಕಂಪನಿ ವಿಳಂಬ ಮಾಡಬಾರದು. ಆದರೂ ಮೆ:ಸಿಎಂಎಸ್ ಕಂಫ್ಯೂಟರ್ಸ್ ಲಿ.ಸಂಸ್ಥೆಯಡಿ ಕರ್ತವ್ಯ ನಿರ್ವಹಿಸುತ್ತಿರುವ ಇವರಿಗೆ ವೇತನ ಪಾವತಿಸಲು 20 ಕೋಟಿ ರೂ.ಅನುದಾನ ಬಿಡುಗಡೆ ಮಾಡಲಾಗಿದೆ ಎಂದರು.
ಹಿಂದಿನ ಸರ್ಕಾರದ ಅವಧಿಯಲ್ಲಿ ಸಂಪುಟದ ಅಧಿಕಾರ ಉಲ್ಲಂಘಿಸಿ ಉಪಕರಣ, ಸಿಬ್ಬಂದಿ ಒದಗಿಸಲು ಕಂಪನಿಗೆ 5 ವರ್ಷ ಅವಧಿಗೆ 400 ಕೋಟಿ ರೂ.ಅಂದಾಜಿಸಿ ಗುತ್ತಿಗೆ ನೀಡಲಾಗಿದೆ. ಆದರೆ, ಅದರ ಮೊತ್ತ ಇದೀಗ 700 ಕೋಟಿ ರೂ.ಗೆ ತಲುಪಿದೆ. ಹಿಂದಿನ ಸರ್ಕಾರ ಮಾಡಿರುವ ತಪ್ಪು ಸರಿಪಡಿಸುವ ಕೆಲಸ ಮಾಡಲಾಗುತ್ತಿದೆ. ಹೊಸದಾಗಿ ಗುತ್ತಿಗೆ ನೀಡಲು ಅಥವಾ ಹೆಚ್ಚುವರಿ ಮೊತ್ತ ಪಾವತಿಸಲು ಸಚಿವ ಸಂಪುಟದಲ್ಲಿ ಅನುಮೋದನೆ ಪಡೆಯಬೇಕಾಗುತ್ತದೆ ಎಂದು ಕಂದಾಯ ಸಚಿವರು ತಿಳಿಸಿದರು.