ಕೆಜಿಎ್​ ತಾಲೂಕಿನ ಕೆಂಪಾಪುರ ಗ್ರಾಮದ ಬಳಿ ಪ್ರಾರಂಭಿಸಿರುವ ರಸ್ತೆ ಡಾಂಬರೀಕರಣ ಕಾಮಗಾರಿಯನ್ನು ಶಾಸಕಿ ರೂಪಕಲಾ ಶಶಿಧರ್​ ಅವರು ಮುಖಂಡರೊಂದಿಗೆ ಪರಿಶೀಲನೆ ನಡೆಸಿದರು. ಘಟ್ಟಮಾದಮಂಗಲ ಗ್ರಾಪಂ ಉಪಾಧ್ಯಕ್ಷ ಜಯರಾಮರೆಡ್ಡಿ, ತಾಪಂ ಮಾಜಿ ಅಧ್ಯಕ್ಷೆ ಸುನಂದಮ್ಮ ರಾಮಕೃಷ್ಣಾರೆಡ್ಡಿ, ಗ್ರಾಪಂ ಸದಸ್ಯರಾದ ಮೌನಿ, ಪುರುಷೋತ್ತಮರೆಡ್ಡಿ, ನಗರಸಭೆ ಅಧ್ಯಕ್ಷೆ ಇಂದಿರಾಗಾಂಧಿ ದಯಾಶಂಕರ್​, ಕಮ್ಮಸಂದ್ರ ಗ್ರಾಪಂ ಮಾಜಿ ಅಧ್ಯಕ್ಷ ನಾಗರಾಜ್​ ಇತರರು ಇದ್ದರು.  
ಜಿಲ್ಲೆ

20 ಕೋಟಿ ರೂ. ವೆಚ್ಚದಲ್ಲಿ ಗಡಿಭಾಗದ ರಸ್ತೆ ಅಭಿವೃದ್ಧಿ

ಕೋಲಾರ ಡೆಸ್ಕ್

ಕೆಜಿಎಫ್​: ಹದಗೆಟ್ಟಿರುವ ತಾಲೂಕಿನ ಗಡಿ ಭಾಗವಾದ ಕೆಂಪಾಪುರ ಗ್ರಾಮದಿಂದ ನಗರ ಪ್ರವೇಶ ಮಾಡುವ ರಸ್ತೆ ಅಭಿವೃದ್ಧಿಗೆ ರಾಜ್ಯ ಹೆದ್ದಾರಿ ಪ್ರಾಧಿಕಾರದಿಂದ 20 ಕೋಟಿ ರೂ. ಅನುದಾನ ಬಿಡುಗಡೆಗೊಳಿಸಿ ಕಾಮಗಾರಿ ಪ್ರಾರಂಭಿಸಲಾಗಿದ್ದು, ಶೀಘ್ರ ಪೂರ್ಣಗೊಳ್ಳಲಿದೆ ಎಂದು ಶಾಸಕಿ ರೂಪಕಲಾ ಶಶಿಧರ್​ ತಿಳಿಸಿದರು.

ಕೆಂಪಾಪುರ ಗ್ರಾಮದಿಂದ ನಗರ ಪ್ರವೇಶ ಮಾಡುವ ರಸ್ತೆ ಕಾಮಗಾರಿಯನ್ನು ಗುರುವಾರ ಮುಖಂಡರೊಂದಿಗೆ ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ನಗರದ ರೋಡ್ಜರ್ಸ್​ ಕ್ಯಾಂಪ್​ನಿಂದ ಆಂಧ್ರಪ್ರದೇಶ ಗಡಿಭಾಗದವರೆಗಿನ ರಸ್ತೆ ತೀರಾ ಹದಗೆಟ್ಟಿದ್ದು, ವಾಹನ ಸವಾರರು ರಸ್ತೆಯಲ್ಲಿ ಉಂಟಾಗಿರುವ ಗುಂಡಿಗಳಿಂದ ಹಲವು ಬಾರಿ ಬಿದ್ದು ಭಾರಿ ಪ್ರಮಾಣದಲ್ಲಿ ಪೆಟ್ಟು ತಿಂದಿರುವ ಹಿನ್ನೆಲೆಯಲ್ಲಿ ಡಾಂಬರೀಕರಣ ಕಾಮಗಾರಿ ಕೈಗೆತ್ತಿಕೊಳ್ಳುವಂತೆ ಈ ಭಾಗದ ಮುಖಂಡರು, ಸಾರ್ವಜನಿಕರು ಮನವಿ ಮಾಡಿದ್ದರು. ಮನವಿ ಮೇರೆಗೆ ಡಾಂಬರೀಕರಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು ಗುಣಮಟ್ಟದ ಕಾಮಗಾರಿ ಮಾಡಲಾಗುವುದು ಎಂದರು.

ನಗರದ ಫೈವ್​ಲೈಟ್ಸ್​ನಿಂದ ರೋಡ್ಜರ್ಸ್​ ಕ್ಯಾಂಪ್​, ಅಶೋಕ ನಗರದಿಂದ ಗಾಂಧಿ ವೃತ, ವೇಮಗಲ್​ ನಗರದ ರಸ್ತೆಯ ಡಿವೈಡರ್​ಗಳಲ್ಲಿ ಬೀದಿ ದೀಪಗಳನ್ನು ಅಳವಡಿಸಿರುವಂತೆ ಗಡಿ ಭಾಗದ ರಸ್ತೆಯನ್ನೂ ಸಹ ದ್ವಿಪಥ ರಸ್ತೆಯನ್ನಾಗಿ ಮಾಡಿ ಬೀದಿ ದೀಪಗಳನ್ನು ಅಳವಡಿಸುವಂತೆ ಮುಖಂಡರು ಮನವಿ ಮಾಡಿದ್ದಾರೆ. ಅದರಂತೆ ರಸ್ತೆಯ ಎರಡು ಭಾಗಗಳಲ್ಲಿ ಬೀದಿದೀಪ ಅಳವಡಿಸಲಾಗುವುದು ಎಂದರು.

ಈ ರಸ್ತೆ ಅಭಿವೃದ್ಧಿಯಿಂದಾಗಿ ಹೊರ ರಾಜ್ಯದಿಂದ ತಾಲೂಕಿಗೆ ಆಗಮಿಸುವವರು ಕರ್ನಾಟಕ ಗಡಿ ಭಾಗವನ್ನು ಪ್ರವೇಶಿಸುತ್ತಿದ್ದಂತೆ ಒಳ್ಳೆಯ ಅಭಿಪ್ರಾಯ ವ್ಯಕ್ತಪಡಿಸಬೇಕು. ಅಂತಹ ವಾತವಾರಣ ನಿರ್ಮಿಸಲಾಗುವುದು ಎಂದು ಹೇಳಿದರು.

ಕೆಜಿಎಫ್​ ವಿಧಾನಸಭೆ ಕ್ಷೇತ್ರದ ಎಲ್ಲ ಗಡಿ ಭಾಗಗಳಲ್ಲಿ ಪ್ರವೇಶದ್ವಾರ ನಿರ್ಮಿಸುವ ಯೋಜನೆ ಸಹ ಹೊಂದಿದ್ದು, ಶೀಘ್ರ ಕೈಗೆತ್ತಿಕೊಳ್ಳಲಾಗುವುದು ಎಂದರು.