ಜಿಲ್ಲೆ

2 ಹಂತದ ಪಂಚಾಯತ್​ರಾಜ್ ವ್ಯವಸ್ಥೆ ಸೂಕ್ತ

Dharwad

ಧಾರವಾಡ: ರಾಜ್ಯದಲ್ಲಿ ಎರಡು ಹಂತದ ಪಂಚಾಯತ್​ರಾಜ್ ವ್ಯವಸ್ಥೆ ಜಾರಿಗೊಳಿಸುವುದು ಸೂಕ್ತ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ. ಈ ಕುರಿತು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ರ್ಚಚಿಸಿ ಸಂವಿಧಾನ ತಿದ್ದುಪಡಿ ಕೋರಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಕಳಿಸುವ ಉದ್ದೇಶವಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.

ನಗರದ ಜಿಲ್ಲಾ ಪಂಚಾಯಿತಿ ಆವರಣದಲ್ಲಿ 1.40 ಕೋಟಿ ರೂ. ವೆಚ್ಚದಲ್ಲಿ ನಿರ್ವಿುಸಿರುವ ಅಧ್ಯಕ್ಷ, ಉಪಾಧ್ಯಕ್ಷ, ಸ್ಥಾಯಿ ಸಮಿತಿಗಳ ಅಧ್ಯಕ್ಷರ ನೂತನ ಕೊಠಡಿಗಳ ಆಡಳಿತ ಭವನವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದ ಅವರು, ಮೂರು ಹಂತದ ವ್ಯವಸ್ಥೆ ಬದಲಿಗೆ ಎರಡು ಹಂತದ ವ್ಯವಸ್ಥೆ ಜಾರಿಗೊಳ್ಳಬೇಕು ಎಂಬ ಅಭಿಪ್ರಾಯಕ್ಕೆ ಸಂಪೂರ್ಣ ಸಹಮತವಿದೆ. ಸಂವಿಧಾನದಲ್ಲಿ ಮೂರು ಹಂತದ ಪಂಚಾಯತ್​ರಾಜ್ ವ್ಯವಸ್ಥೆ ಸೂಚಿಸಿರುವುದರಿಂದ ಅನುಷ್ಠಾನ ಅನಿವಾರ್ಯ. ಇದನ್ನು ಬದಲಾಯಿಸಲು ಕೋರಿ ಸಚಿವ ಸಂಪುಟ ಸಭೆಯಲ್ಲಿ ರ್ಚಚಿಸಲಾಗುವುದು. ಸಂವಿಧಾನಕ್ಕೆ ತಿದ್ದುಪಡಿಯಾದರೆ ಮಾತ್ರ ಈ ಬದಲಾವಣೆ ಸಾಧ್ಯ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್, ಶಾಸಕರಾದ ಅಮೃತ ದೇಸಾಯಿ, ಸಿ.ಎಂ. ನಿಂಬಣ್ಣವರ, ಜಿಪಂ ಅಧ್ಯಕ್ಷೆ ವಿಜಯಲಕ್ಷ್ಮೀ ಪಾಟೀಲ, ಜಿಲ್ಲಾಧಿಕಾರಿ ನಿತೇಶ ಪಾಟೀಲ, ಜಿಪಂ ಸಿಇಒ ಡಾ. ಸುಶೀಲಾ ಬಿ., ಸದಸ್ಯರಾದ

ಚೈತ್ರಾ ಶಿರೂರ, ರೇಣುಕಾ ಇಬ್ರಾಹಿಂಪುರ, ಚನ್ನಬಸಪ್ಪ ಮಟ್ಟಿ, ಕರಿಯಪ್ಪ ಮಾದರ, ಇತರರು ಇದ್ದರು.

ಉಪಾಧ್ಯಕ್ಷರ ಮುನಿಸು: ನೂತನ ಕಟ್ಟಡ ಉದ್ಘಾಟನಾ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಿಲ್ಲ ಎಂದು ಆರೋಪಿಸಿ ಜಿಪಂ ಉಪಾಧ್ಯಕ್ಷ ಶಿವಾನಂದ ಕರಿಗಾರ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದರು. ಅಧಿಕಾರಿಗಳು ಸರಿಯಾಗಿ ಶಿಷ್ಟಾಚಾರ ಪಾಲನೆ ಮಾಡದೆ ತರಾತುರಿಯಲ್ಲಿ ಉದ್ಘಾಟನೆ ಸಮಾರಂಭ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು. ಬಳಿಕ ಸಚಿವ ಕೆ.ಎಸ್. ಈಶ್ವರಪ್ಪ, ಕರಿಗಾರ ಅವರನ್ನು ಸಮಾಧಾನಪಡಿಸಿ ಸಮಾರಂಭಕ್ಕೆ ಕರೆದುಕೊಂಡು ಹೋದರು.