ರಟ್ಟಿಹಳ್ಳಿ: ದಸರಾ ಮಹೋತ್ಸವ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ವ್ಯಕ್ತಿಯೊಬ್ಬರು 2 ವರ್ಷದ ಮಗುವನ್ನು ಕೈಯಲ್ಲಿ ಹಿಡಿದುಕೊಂಡು ಕಿಚ್ಚು ಹಾಯ್ದ ಘಟನೆ ತಾಲೂಕಿನ ಬುಳ್ಳಾಪುರ ಗ್ರಾಮದಲ್ಲಿ ಮಂಗಳವಾರ ನಡೆದಿದೆ.
ತಾಲೂಕಿನ ಐತಿಹಾಸಿಕ ಪ್ರಸಿದ್ಧ ಬುಳ್ಳಾಪುರ ಗ್ರಾಮದ ದುರ್ಗಾದೇವಿ ದೇವಸ್ಥಾನದಲ್ಲಿ ದಸರಾ ಮಹೋತ್ಸವದ ಅಂಗವಾಗಿ ದೇವಿ ಆರಾಧಕ ಬಸವರಾಜ ಮುಡಬಾಗಿಲು ಅವರು ಮಗುವನ್ನೆತ್ತಿಕೊಂಡು ಕಿಚ್ಚು ಹಾಯ್ದವರು. ಇದು ಕೆಲವರ ವಿರೋಧಕ್ಕೆ ಕಾರಣವಾಗಿದೆ.
ದೇವಿ ಆರಾಧಕರು ಮಾತ್ರ 3 ಬಾರಿ ಕಿಚ್ಚು ಹಾಯುತ್ತಿದ್ದರು. ಆದರೆ, ಮಗು ಎತ್ತಿಕೊಂಡು ಕಿಚ್ಚು ಹಾಯುವ ಪದ್ಧತಿ ಇಲ್ಲಿ ಆಚರಿಸುವುದಿಲ್ಲ. ದಾವಣಗೆರೆ ಮೂಲದ ಭಕ್ತರೊಬ್ಬರಿಗೆ ಸುಮಾರು ವರ್ಷಗಳಿಂದ ಮಕ್ಕಳಾಗಿರಲಿಲ್ಲ. ಅವರು ಮಗು ಜನಿಸಿದಲ್ಲಿ ಒಂದು ಬಾರಿ ಕಿಚ್ಚು ಹಾಯಿಸುವುದಾಗಿ ದೇವಿಗೆ ಹರಕೆ ಹೊತ್ತಿದ್ದರು. ಗಂಡು ಮಗು ಜನಿಸಿದ್ದರಿಂದ ಅವರು ದೇವಿ ಆರಾಧಕ ಬಸವರಾಜ ಮುಡಬಾಗಿಲು ಅವರನ್ನು ಒತ್ತಾಯಿಸಿದ್ದಾರೆ. ಪಾಲಕರ ಒತ್ತಾಯಕ್ಕೆ ಮಣಿದ ಬಸವರಾಜ, ಒಂದು ಬಾರಿ ಮಗುವನ್ನು ಕೈಯಲ್ಲಿ ಮೇಲೆ ಎತ್ತಿ ಹಿಡಿದು ಕಿಚ್ಚು ಹಾಯ್ದು ಬಳಿಕ ಮಗುವನ್ನು ಕ್ಷೇಮವಾಗಿ ಪಾಲಕರಿಗೆ ಒಪ್ಪಿಸಿದ್ದಾರೆ ಎಂದು ತಿಳಿದು ಬಂದಿದೆ.
ಕಿಚ್ಚು ಹಾಯುವ ವಿಶೇಷ ಕಾರ್ಯಕ್ರಮ: ದೇವಿ ಆರಾಧಕ ಬಸವರಾಜ ಮುಡಬಾಗಿಲು ಅವರು ನವರಾತ್ರಿಯಲ್ಲಿ 9 ದಿನವೂ ಉಪವಾಸ ವ್ರತ ಮಾಡುತ್ತಾರೆ. 9ನೇ ದಿನ ದೇವಸ್ಥಾನದ ಮುಂಭಾಗದಲ್ಲಿ 20 ಅಡಿ ಉದ್ದ ಹಾಕಿದ ಕೆಂಡದಲ್ಲಿ 3 ಬಾರಿ ಕಿಚ್ಚು ಹಾಯುತ್ತಾರೆ. ಕೊನೇ ಬಾರಿ ಹಾಯುವಾಗ ಕೆಂಡವನ್ನು ತನ್ನ ಬಟ್ಟೆಯಲ್ಲಿ ಕಟ್ಟಿಕೊಂಡು ದೇವಿ ಸನ್ನಿಧಿಗೆ ಅರ್ಪಿಸಿ ವಿಶೇಷವಾಗಿ ಪೂಜೆ ಸಲ್ಲಿಸುತ್ತಾರೆ. ಲೋಕಕಲ್ಯಾಣಕ್ಕಾಗಿ ನಡೆಯುವ ಈ ಕಾರ್ಯಕ್ರಮ ವೀಕ್ಷಿಸಲು ಸುತ್ತಮುತ್ತಲಿನ ಗ್ರಾಮಗಳಿಂದ ಸಾವಿರಾರು ಭಕ್ತರು ಆಗಮಿಸುತ್ತಾರೆ.
ಸರಳವಾಗಿ ಆಚರಣೆ: ಪ್ರತಿ ವರ್ಷ ಸಾವಿರಾರು ಭಕ್ತರ ಸಮ್ಮುಖದಲ್ಲಿ ಕಿಚ್ಚು ಹಾಯುವ ಕಾರ್ಯಕ್ರಮ ವಿಜೃಂಭಣೆಯಿಂದ ಜರುಗುತ್ತಿತ್ತು. ಈ ಬಾರಿ ಕರೊನಾದಿಂದಾಗಿ ಧಾರ್ವಿುಕ ಕಾರ್ಯಕ್ರಮಗಳನ್ನು ಪರಸ್ಪರ ಅಂತರದೊಂದಿಗೆ ಸರಳವಾಗಿ ಆಚರಿಸಲಾಯಿತು ಎಂದು ದೇವಸ್ಥಾನ ಕಮಿಟಿಯವರು ತಿಳಿಸಿದರು.