???????????????????????????????????? 
ಜಿಲ್ಲೆ

2 ಲಕ್ಷ ದಾಟಿದ ಕರೊನಾ ಟೆಸ್ಟ್

ಸ.ದಾ. ಜೋಶಿ ಬೀದರ್

ಬೀದರ್ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಬ್ರಿಮ್ಸ್) ಮಾಲಿಕ್ಯೂಲರ್ ವೈರಾಲಜಿ ಲ್ಯಾಬ್ (ಸೂಕ್ಷ್ಮಾಣು ರೋಗ ಪತ್ತೆ ಪ್ರಯೋಗಾಲಯ) ದಲ್ಲಿ ಕರೊನಾ ಪರೀಕ್ಷೆ ಮಾಡಿರುವ ಸಂಖ್ಯೆ 2 ಲಕ್ಷದ ಗಡಿ ದಾಟಿದೆ. ಒಂಬತ್ತು ತಿಂಗಳ ಹಿಂದೆ ಆರಂಭವಾಗಿರುವ ಲ್ಯಾಬ್ ನಲ್ಲಿ ಮೊದಲ 1 ಲಕ್ಷ ಟೆಸ್ಟ್ ಗೆ 6 ತಿಂಗಳು ಹಿಡಿದರೆ, ನಂತರದ 1 ಲಕ್ಷ ಪರೀಕ್ಷೆಗಳನ್ನು ಕೇವಲ 80 ದಿನದಲ್ಲಿ ನಡೆಸಿ ದಾಖಲೆ ನಿರ್ಮಿಸಿದೆ.

ಕರೊನಾ ಸೋಂಕು ನಿಯಂತ್ರಣದಲ್ಲಿ ಟೆಸ್ಟ್ ವರದಿ ತ್ವರಿತ ಮತ್ತು ಸೋಂಕಿತರ ಸಂಪರ್ಕಕ್ಕೆ ಬಂದವರ ಬೇಗ ಪತ್ತೆ ಬಹಳ ಪ್ರಮುಖ ಪಾತ್ರ ವಹಿಸುತ್ತದೆ. ಕಳೆದ ಜುಲೈ, ಆಗಸ್ಟ್, ಸೆಪ್ಟೆಂಬರ್ ನಲ್ಲಿ ಜಿಲ್ಲಾದ್ಯಂತ ತಲ್ಲಣ ಸೃಷ್ಟಿಸಿದ್ದ ಮಹಾಮಾರಿ ಸದ್ಯ ಸಾಕಷ್ಟು ನಿಯಂತ್ರಣಕ್ಕೆ ಬಂದಿದೆ. ಸದ್ಯ ಕೇವಲ 32 ಸಕ್ರಿಯ ಪ್ರಕರಣಗಳಿದ್ದು, ಕರೊನಾ ಕಟ್ಟಿ ಹಾಕುವಲ್ಲಿ ಬ್ರಿಮ್ಸ್ ಲ್ಯಾಬ್ ನೀಡುತ್ತಿರುವ ತ್ವರಿತ ಪರೀಕ್ಷಾ ವರದಿ ಪೂರಕ ಎನಿಸಿದೆ.

ಬ್ರಿಮ್ಸ್ ನಲ್ಲಿ ವೈರಾಣು ಪತ್ತೆ ಲ್ಯಾಬ್ ಇರಲಿಲ್ಲ. ಕರೊನಾ ಸಂಕಷ್ಟ ಸುತ್ತಿಕೊಂಡ ಬೆನ್ನಲ್ಲೇ ಲ್ಯಾಬ್ ಸ್ಥಾಪನೆ ಚರ್ಚೆಗೆ ಬಂತು. ರಾಜ್ಯ ಪ್ರಕೃತಿ ವಿಕೋಪ ನಿಯಂತ್ರಣ ನಿಧಿಯಿಂದ 2 ಕೋಟಿ ರೂ. ವೆಚ್ಚದಲ್ಲಿ 2020ರ ಜೂನ್ 6ಕ್ಕೆ ಲ್ಯಾಬ್ ಶುರುವಾಗಿ ಕರೊನಾ ಟೆಸ್ಟಿಂಗ್ ಆರಂಭಿಸಿತು. ಬ್ರಿಮ್ಸ್ ಸೂಕ್ಷ್ಮಜೀವ ವಿಜ್ಞಾನ (ಮೈಕ್ರೋಬಯಾಲಜಿ) ವಿಭಾಗದ ಅಧೀನ ಲ್ಯಾಬ್ ಇದ್ದು, ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ ಮಾನ್ಯತೆ ನೀಡಿದೆ. ಲ್ಯಾಬ್ ಸ್ಥಾಪನೆಯ 6 ತಿಂಗಳಲ್ಲಿ (2020ರ ನವೆಂಬರ್ ಅಂತ್ಯದವರೆಗೆ) 1.01 ಲಕ್ಷ ಕರೊನಾ ಪರೀಕ್ಷೆ ನಡೆಸಲಾಗಿತ್ತು. ನಂತರದ ಮೂರು ತಿಂಗಳ ಅವಧಿಯಲ್ಲೇ ಈ ಸಂಖ್ಯೆ 2.08 ಲಕ್ಷಕ್ಕೇರಿದೆ.

ಜಿಲ್ಲೆಯಲ್ಲಿ ಕರೊನಾ ಪ್ರಕರಣ ಇಳಿಮುಖ ಆಗುತ್ತಿರುವುದು ನೆಮ್ಮದಿ ತಂದಿದೆ. ಆರೋಗ್ಯ, ವೈದ್ಯಕೀಯ ಸೇರಿ ಎಲ್ಲ ಇಲಾಖೆ ಅಧಿಕಾರಿ, ಸಿಬ್ಬಂದಿ ಸತತ ಶ್ರಮ ಮತ್ತು ಸಾಮೂಹಿಕ ಪ್ರಯತ್ನ ಇದಕ್ಕೆ ಪ್ರಮುಖ ಕಾರಣ. ಬ್ರಿಮ್ಸ್ ಲ್ಯಾಬ್ ಸೇವೆ ವಿಶಿಷ್ಟವಾಗಿದೆ. ಪ್ರತಿಯೊಬ್ಬರೂ ಮಾಸ್ಕ್ ಧರಿಸುವಿಕೆ, ಪರಸ್ಪರ ಅಂತರ ಕಾಪಾಡುವಿಕೆ ಸೇರಿ ಕೋವಿಡ್ ಮಾರ್ಗಸೂಚಿ ಕಡ್ಡಾಯ ಪಾಲಿಸಬೇಕು. ಬೀದರ್ ಜಿಲ್ಲೆಯನ್ನು ಬೇಗ ಕರೊನಾಮುಕ್ತ ಮಾಡಲು ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ರಾಮಚಂದ್ರನ್ ಮನವಿ ಮಾಡಿದ್ದಾರೆ.

ಒಂದೇ ದಿನ 3596 ಪರೀಕ್ಷೆ !
ಬ್ರಿಮ್ಸ್ ಮೈಕ್ರೋಬಯಾಲಜಿ ವಿಭಾಗದ ಅಸಿಸ್ಟಂಟ್ ಪ್ರೊಫೆಸರ್ ಡಾ.ಸುಧೀಂದ್ರ ಕುಲಕರ್ಣಿ ಈ ಲ್ಯಾಬ್ ಪ್ರಧಾನ ಪರೀಕ್ಷಕರಾಗಿ (ಪ್ರಿನ್ಸಿಪಲ್ ಇನ್ವೆಸ್ಟಿಗೇಟರ್) ಹೆಚ್ಚುವರಿ ಹೊಣೆ ನಿರ್ವಹಿಸುತ್ತಿದ್ದಾರೆ. 12 ತಂತ್ರಜ್ಞರು ಸೇರಿ 20 ಸಿಬ್ಬಂದಿ ಹಗಲಿರುಳು ಸೇವೆ ಸಲ್ಲಿಸುತ್ತಿದ್ದು, ಕಮ್ಮಿ ಸಮಯದಲ್ಲಿ 2.08 ಲಕ್ಷ ಟೆಸ್ಟ್ ನಡೆಸಿ ದಾಖಲೆ ನಿರ್ಮಿಸಲಾಗಿದೆ. ದಿನದ 24 ಗಂಟೆ ಟೆಸ್ಟಿಂಗ್ ನಡೆಯುತ್ತಿದೆ. ಮುಂಚೆ ನಿತ್ಯ ಸರಾಸರಿ 500-600 ಟೆಸ್ಟ್ ನಡೆಯುತ್ತಿದ್ದವು. ನಂತರ ಈ ಪ್ರಮಾಣ 1000-1200ಕ್ಕೆ ಏರಿದೆ. ಕಳೆದ ಜನವರಿ 1ರಂದು ಒಂದೇ ದಿನ ದಾಖಲೆ ಎಂಬಂತೆ 3596 ಟೆಸ್ಟ್ ಮಾಡಲಾಗಿದೆ. ಅತ್ಯುತ್ತಮ ಸಾಧನೆ ಹಿನ್ನೆಲೆಯಲ್ಲಿ ಡಾ.ಸುಧೀಂದ್ರ ಅವರ ತಂಡಕ್ಕೆ ಜಿಲ್ಲಾಡಳಿತ ಭೇಷ್ ಎಂದಿದ್ದು, ಪ್ರಶಂಸಾ ಪತ್ರ ನೀಡಿ ಗೌರವಿಸಿದೆ.

ಎರಡನೇ ಅಲೆ ಆತಂಕ
ಗಡಿಯಲ್ಲಿ ಮಹಾ ಕಟ್ಟೆಚ್ಚರ

ಮಹಾರಾಷ್ಟ್ರದ ವಿವಿಧೆಡೆ ಕರೊನಾ ಎರಡನೇ ಅಲೆ ಅಪಾಯ ಎದುರಾಗಿದ್ದರೀಂದ ಗಡಿಗೆ ಹೊಂದಿಕೊಂಡಿರುವ ಬೀದರ್ ಜಿಲ್ಲೆಯಲ್ಲೂ ಜಿಲ್ಲಾಡಳಿತ ತೀವ್ರ ಕಟ್ಟೆಚ್ಚರ ವಹಿಸಿದೆ. ಮಹಾರಾಷ್ಟ್ರದಿಂದ ಬೀದರ್ ಗೆ ಸೇರುವ ವಿವಿಧ ಮಾರ್ಗಗಳಲ್ಲಿ ಚೆಕ್ಪೋಸ್ಟ್ ಆರಂಭಿಸಿದ್ದು, ಜಿಲ್ಲೆಗೆ ಪ್ರವೇಶಿಸುವ ಪ್ರಯಾಣಿಕರ ಹಾಗೂ ಎಲ್ಲ ವಾಹನಗಳ ತಪಾಸಣೆ ನಡೆಸಲಾಗುತ್ತಿದೆ. ಮಹಾರಾಷ್ಟ್ರದಿಂದ ಜಿಲ್ಲೆಗೆ ಬರುವವರಿದ್ದರೆ 72 ಗಂಟೆ ಹಿಂದಿನ ಕರೊನಾ ಆರ್ ಟಿಪಿಸಿಆರ್ ನೆಗೆಟಿವ್ ವರದಿ ಹೊಂದಿರುವುದು ಕಡ್ಡಾಯಗೊಳಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿಯ ಬಸವಕಲ್ಯಾಣ ತಾಲೂಕಿನ ಚಂಡಕಾಪುರದಲ್ಲಿ ತಪಾಸಣೆ ಜತೆಗೆ ಸ್ಥಳದಲ್ಲೇ ರ್ಯಾಪಿಡ್ ಆ್ಯಂಟಿಜನ್ ಟೆಸ್ಟ್ ಆರಂಭಿಸಲಾಗಿದೆ. ನೀಲಂಗಾ-ಶಹಜಾನಿ ಔರಾದ್ ಸಂಪರ್ಕಿಸುವ ಹುಲಸೂರು ಗಡಿ, ಕಮಲನಗರ ಹತ್ತಿರದ ಗಡಿ, ದೇಗಲೂರು ಸಂಪರ್ಕಿಸುವ ವನಮಾರಪಳ್ಳಿ ಸೇರಿ ವಿವಿಧೆಡೆ ಚೆಕ್ ಪೋಸ್ಟ್ ಸ್ಥಾಪಿಸಲಾಗಿದೆ. ಆರೋಗ್ಯ ಮತ್ತು ಪೊಲೀಸ್ ಅಧಿಕಾರಿಗಳು ತಪಾಸಣೆ ಮಾಡುತ್ತಿದ್ದಾರೆ. ಥರ್ಮಲ್ ಸ್ಕ್ರೀನಿಂಗ್ ಸಹ ನಡೆಯುತ್ತಿದೆ. ಕರೊನಾ ನೆಗೆಟಿವ್ ವರದಿ ಇಲ್ಲದೆ ಅನೇಕರು ಗಡಿಯಿಂದಲೇ ವಾಪಸ್ ಮರಳುವಂತಾಗಿದ್ದು, ಹೈರಾಣಕ್ಕೆ ಸಿಲುಕಿದ್ದಾರೆ. ಕೆಲವರು ಚೆಕ್ಪೋಸ್ಟ್ ತಪಾಸಣೆಯಿಂದ ಬಚಾವ್ ಆಗಲು ಅತ್ತಿತ್ತ ಸುತ್ತಾಡಿ, ಹಳ್ಳಿ ಮಾರ್ಗಗಳಿಂದ ಜಿಲ್ಲೆಗೆ ಎಂಟ್ರಿ ಕೊಡುತ್ತಿದ್ದಾರೆ. ಇಲ್ಲಿಂದ 160 ಕಿಮೀ ದೂರದ ಮಹಾರಾಷ್ಟ್ರದ ಲಾತೂರ್ ಜಿಲ್ಲೆಯಲ್ಲಿ ಶನಿವಾರ ಮತ್ತು ಭಾನುವಾರ ಜನತಾ ಕಫ್ರ್ಯೂ ಜಾರಿಗೊಳಿಸಲಾಗಿದೆ. ಇದರಿಂದ ಎರಡೂ ರಾಜ್ಯಗಳ ನಡುವಿನ ಪ್ರಯಾಣ ಸ್ಥಗಿತವಾಗಿದೆ.

ಸದ್ಯ 32 ಸಕ್ರಿಯ ಪ್ರಕರಣ
ಫೆ.26 ರವರೆಗಿನ ಅಂಕಿ ಅಂಶ ಪ್ರಕಾರ, ಜಿಲ್ಲೆಯಲ್ಲಿ ಸದ್ಯ 32 ಕರೊನಾ ಸಕ್ರಿಯ ಪ್ರಕರಣಗಳಿವೆ. ಕಳೆದೆರಡು ವಾರಗಳಿಂದ ಪಾಸಿಟಿವ್ ಪ್ರಕರಣ ಸಂಖ್ಯೆ ಗಣನೀಯ ಕುಗ್ಗಿದೆ. ಕಮ್ಮಿ ಪ್ರಕರಣ ವರದಿ ಆಗುತ್ತಿರುವುದು ಸಮಾಧಾನಕರ ಸಂಗತಿ. ಆದರೆ ಮಹಾರಾಷ್ಟ್ರದ ಕೆಲ ಜಿಲ್ಲೆಗಳಲ್ಲಿ ಎರಡನೇ ಅಲೆ ತೀವ್ರವಾಗಬಹುದು ಎನ್ನುತ್ತಿರುವುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದ್ದು, ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳುವ ಅನಿವಾರ್ಯತೆ ಎನಿಸಿದೆ. ಜಿಲ್ಲೆಯಲ್ಲಿ ಈವರೆಗೆ 7526 ಪಾಸಿಟಿವ್ ಪ್ರಕರಣ ಪತ್ತೆಯಾಗಿದು, ಈ ಪೈಕಿ 7318 ಸೋಂಕಿತರು ಚೇತರಿಸಿಕೊಂಡಿದ್ದಾರೆ. ಸೋಂಕಿಗೆ 172 ಮಂದಿ ಬಲಿಯಾಗಿದ್ದಾರೆ. ಇದಕ್ಕೆ ಹೊರತುಪಡಿಸಿ ಹೈದರಾಬಾದ್, ಸೊಲ್ಲಾಪುರ, ಬೆಂಗಳೂರು ಇತರ ಕಡೆ ಚಿಕಿತ್ಸೆಗೆ ದಾಖಲಾಗಿದ್ದ 25ಕ್ಕೂ ಹೆಚ್ಚು ಮಂದಿ ಕರೊನಾಗೆ ಬಲಿಯಾಗಿದ್ದಾರೆ. ಇದರಲ್ಲಿ ಬಸವಕಲ್ಯಾಣ ಶಾಸಕ ಬಿ.ನಾರಾಯಣರಾವ್, ಜಿಪಂ ಸದಸ್ಯ ಅನೀಲ ಗುಂಡಪ್ಪ, ಹಿರಿಯ ವೈದ್ಯ ಡಾ.ಜೈರಾಜ ಪಾಟೀಲ್ ಸಹ ಸೇರಿದ್ದಾರೆ.

ಜಿಲ್ಲೆಯಲ್ಲಿ ಕರೊನಾ ಪಾಸಿಟಿವ್ ಪ್ರಕರಣ ಕಮ್ಮಿಯಾಗಿವೆ ಎಂದು ಯಾರೂ ಮೈಮರೆಯಕೂಡದು. ಕೆಲವೆಡೆ ಎರಡನೇ ಅಲೆ ಅಪ್ಪಳಿಸುತ್ತಿರುವುದು ನಮಗೂ ಎಚ್ಚರಿಕೆ ಗಂಟೆ. ವೈರಸ್ ಕಾಟದಿಂದ ಇನ್ನೂ ಮುಕ್ತವಾಗಿಲ್ಲ. ರೋಗದಿಂದ ಪಾರಾಗಲು ಜನರು ಕಡ್ಡಾಯವಾಗಿ ಮುನ್ನೆಚ್ಚರಿಕೆ ಕ್ರಮ ಪಾಲಿಸಬೇಕು.| ಪ್ರಭು ಚವ್ಹಾಣ್ ಜಿಲ್ಲಾ ಉಸ್ತುವಾರಿ ಸಚಿವ
ಮಹಾರಾಷ್ಟ್ರದ ಕೆಲವೆಡೆ ಇತ್ತೀಚೆಗೆ ಕರೊನಾ ಪ್ರಕರಣಗಳಲ್ಲಿ ದಿಢೀರ್ ಹೆಚ್ಚಳವಾಗಿದೆ. ಎರಡನೇ ಅಲೆ ಬರಬಹುದೆಂಬ ಎಚ್ಚರಿಕೆ ಹಿನ್ನೆಲೆಯಲ್ಲಿ ಗಡಿಗೆ ಹೊಂದಿಕೊಂಡ ಬೀದರ್ ಜಿಲ್ಲೆಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಗಡಿಯಲ್ಲಿ ಚೆಕ್ ಪೋಸ್ಟ್ ಸ್ಥಾಪಿಸಿ ತಪಾಸಣೆ ಬಿಗಿಗೊಳಿಸಲಾಗಿದೆ. ಸರ್ಕಾರದ ನಿರ್ದೇಶನದಂತೆ ಕೋವಿಡ್ ನೆಗೆಟಿವ್ ವರದಿ ಇಲ್ಲದವರಿಗೆ ಮಹಾರಾಷ್ಟ್ರದಿಂದ ಜಿಲ್ಲೆಗೆ ಪ್ರವೇಶವಿಲ್ಲ. | ರಾಮಚಂದ್ರನ್ ಜಿಲ್ಲಾಧಿಕಾರಿ