ಶಿಕ್ಷಣ ಸಚಿವ ಮಧು ಬಂಗಾರಪ್ಪ  
ಜಿಲ್ಲೆ

ವರ್ಷದೊಳಗೆ 2ರಿಂದ 3 ಗ್ರಾಪಂಗೊಂದು ಕೆಪಿಎಸ್

ಶಿವಮೊಗ್ಗ: ರಾಜ್ಯದಲ್ಲಿ 6 ಸಾವಿರ ಗ್ರಾಮ ಪಂಚಾಯಿತಿಗಳಿದ್ದು ಮುಂದಿನ ಒಂದು ವರ್ಷದೊಳಗೆ ಕನಿಷ್ಠ 2ರಿಂದ 3 ಗ್ರಾಮ ಪಂಚಾಯತಿಗೊಂದು ಕೆಪಿಎಸ್(ಕರ್ನಾಟಕ ಪಬ್ಲಿಕ್ ಸ್ಕೂಲ್) ಸ್ಥಾಪಿಸುವ ಚಿಂತನೆ ಇದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.

ನಗರದಲ್ಲಿ ಗುರುವಾರ ಪತ್ರಿಕಾ ಸಂವಾದ ಮತ್ತು ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಖಾಸಗಿ ಶಾಲೆಗಳ ಪ್ರಭಾವದಿಂದ ಗ್ರಾಮೀಣ ಭಾಗದಲ್ಲಿ ಮಕ್ಕಳ ಸಂಖ್ಯೆ ಕಡಿಮೆ ಆಗುತ್ತಿದೆ. ಅದನ್ನು ತಗ್ಗಿಸಲು ಕೆಪಿಎಸ್ ತರಲಾಗುವುದು. ಪ್ರತಿ ಜಿಲ್ಲೆಯ ಮಕ್ಕಳೂ ಹೆಚ್ಚಿನ ಫಲಿತಾಂಶ ತರಬೇಕು ಎಂದರು.
ಜಿಲ್ಲೆಗಳ ನಡುವೆ ಯಾಕೆ ಫಲಿತಾಂಶದಲ್ಲಿ ಅಂತವಿದೆ ಎಂಬುದರ ಬಗ್ಗೆ ಪರಿಶೀಲನೆ ಮಾಡುತ್ತಿದ್ದೇನೆ. ಎಲ್ಲ ಜಿಲ್ಲೆಗಳ ಅಧಿಕಾರಿಗಳೊಂದಿಗೆ ಚರ್ಚೆ ಮಾಡುತ್ತಿರುವೆ. ಮುಂದಿನ ದಿನಗಳಲ್ಲಿ ಜಿಲ್ಲೆಗಳ ಫಲಿತಾಂಶದಲ್ಲಿ ಅಂತರ ಕಡಿಮೆಯಾಗಬೇಕು. ಶಿಕ್ಷಕರ ಕೊರತೆ, ಮೂಲ ಸೌಕರ್ಯಗಳ ಕೊರತೆ ನೀಗಿಸುವ ಪ್ರಯತ್ನ ನಡೆದಿದೆ ಎಂದರು.
ರಾಜ್ಯ ಸರ್ಕಾರ ಈಗಷ್ಟೇ 100 ದಿನ ಪೂರೈಸಿದೆ. ಇನ್ನೂ ಕನಿಷ್ಠ 10 ವರ್ಷ ರಾಜ್ಯದಲ್ಲಿ ಅಧಿಕಾರದಲ್ಲಿರುವ ಗುರಿ ಹೊಂದಿದ್ದೇವೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಜನಪರ ಯೋಜನೆಗಳನ್ನು ಅನುಷ್ಟಾನಗೊಳಿಸಲಾಗುವುದು. ವಿಶೇಷವಾಗಿ ಶಿಕ್ಷಣ ಇಲಾಖೆಯಲ್ಲಿ ಹಲವು ಕಾರ್ಯಕ್ರಮಗಳ ಮೂಲಕ ಮಕ್ಕಳ ಭವಿಷ್ಯ ಉಜ್ವಲಗೊಳಿಸಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.