ಬೆಳಗಾವಿ: ಜಿಲ್ಲೆಯ ಜನರಿಗೆ ನೀರಿನ ತೊಂದರೆಯಾಗದಂತೆ ಕೃಷ್ಣಾ ನದಿಗೆ 2 ಟಿಎಂಸಿ ನೀರು ಹರಿಸುವಂತೆ ಮಹಾರಾಷ್ಟ್ರ ಸರ್ಕಾರಕ್ಕೆ ಪತ್ರ ಬರೆಯಲು ಪ್ರಾದೇಶಿಕ ಆಯುಕ್ತರಿಗೆ ಮನವಿ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಕುರಿತು ಬೃಹತ್ ಮತ್ತು ಸಣ್ಣ ನೀರಾವರಿ ಇಲಾಖೆಯೊಂದಿಗೆ ಚರ್ಚಿಸಿದ್ದೇವೆ. ಸದ್ಯ ಬೆಳಗಾವಿಯಲ್ಲಿ ನೀರಿನ ಕೊರತೆಯಿಲ್ಲ. ನೀರಿನ ಅಭಾವ ಉಂಟಾಗುವ ಗ್ರಾಮಗಳ ಪಟ್ಟಿ ಮಾಡಲು ಆದೇಶಿಸಲಾಗಿದೆ. ಸಮಸ್ಯೆಯುಂಟಾದಲ್ಲಿ ಖಾಸಗಿ ಬೋರ್ವೆಲ್ ಅಥವಾ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲು ತಹಸೀಲ್ದಾರ್ರಿಗೆ ಸೂಚಿಸಲಾಗಿದೆ. ಕುಡಿಯುವ ನೀರಿನ ಸಮಸ್ಯೆಯಾಗದಂತೆ ಹಿಡಕಲ್ ಜಲಾಶಯದಿಂದ ಬಾಗಲಕೋಟೆಗೆ 2 ಟಿಎಂಸಿ ನೀರನ್ನು ಈಗಾಗಲೇ ಬಿಡಲಾಗಿದೆ. ಟಪ್ರಭೆಯ ಎಡ&ಬಲದಂಡೆ ಕಾಲುವೆಗಳಿಗೂ 2 ಟಿಎಂಸಿ ನೀರು ಈಗ ಬಿಡಲಾಗುತ್ತಿದೆ ಎಂದರು.
ಕಳೆದ ಬಾರಿ ಕಬ್ಬಿನ ಬಾಕಿ ಬಿಲ್ನ್ನು ಕಾರ್ಖಾನೆಗಳು ಪಾವತಿಸಿವೆ. ಕಬ್ಬು ನಿಯಂತ್ರಣ ಕಾಯ್ದೆಯಡಿ ಕಬ್ಬು ಸಾಗಣೆಯಾದ 15 ದಿನದೊಳಗೆ ಬಿಲ್ ಬೆಳೆಗಾರರಿಗೆ ಪಾವತಿಸಬೇಕು. ಕಾನೂನು ಪಾಲಿಸದ ಕಾರ್ಖಾನೆಗಳಿಗೆ ಈಗಾಗಲೇ ನೋಟಿಸ್ ಸಹ ಜಾರಿ ಮಾಡಲಾಗಿದೆ. ಎಲ್ಲ ಕಾರ್ಖಾನೆಗಳು ಬಾಕಿ ಬಿಲ್ ನೀಡುವುದಾಗಿ ತಿಳಿಸಿವೆ ಎಂದರು.