ಜಿಲ್ಲೆ

ಮೈಸೂರಿಗೆ ವರ್ಷಾಂತ್ಯದಲ್ಲಿ 2 ಲಕ್ಷ ಪ್ರವಾಸಿಗರು ಭೇಟಿ

ಸದೇಶ್ ಕಾರ್ಮಾಡ್ ಮೈಸೂರು
ಕೋವಿಡ್ ಭೀತಿಯ ನಡುವೆಯೂ ಸಾಂಸ್ಕೃತಿಕ ನಗರಿ ಮೈಸೂರಿಗೆ ಪ್ರವಾಸಿಗರ ಪ್ರವಾಹವೇ ಹರಿದು ಬಂದಿದ್ದು, ವಷಾಂತ್ಯದಲ್ಲಿ ನಗರಕ್ಕೆ 2 ಲಕ್ಷ ಪ್ರವಾಸಿಗರು ಭೇಟಿ ನೀಡಿದ್ದಾರೆ.

ವರ್ಷಾಂತ್ಯದಲ್ಲಿ ಕೇರಳ, ಗೋವಾ ಮತ್ತು ಮಹಾರಾಷ್ಟ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಕೋವಿಡ್ ಸೋಂಕಿಗೆ ಗುರಿಯಾಗಿದ್ದು, ರಾಜ್ಯದಲ್ಲೂ ಹೊಸ ಕೋವಿಡ್ ತಳಿ ಕಾಣಿಸಿಕೊಂಡು ಆತಂಕ ಮೂಡಿಸಲು ಪ್ರಾರಂಭಿಸಿದೆ. ಈ ಹಿನ್ನೆಲೆಯಲ್ಲಿ ಪ್ರವಾಸಿಗರ ಸಂಖ್ಯೆ ಕ್ಷೀಣವಾಗುವ ನಿರೀಕ್ಷೆ ಇತ್ತು. ಆದರೆ, ಪ್ರವಾಸಿಗರು ಕೋವಿಡ್ ವಿಚಾರಕ್ಕೆ ತಲೆಕೆಡಿಸಿಕೊಳ್ಳದೆ ಮೈಸೂರಿನತ್ತ ಮುಖ ಮಾಡಿದರು. ವರ್ಷಾಂತ್ಯದಲ್ಲಿ ಸಾಲು ಸಾಲು ರಜೆಯ ಹಿನ್ನೆಲೆಯಲ್ಲಿ ನಗರಕ್ಕೆ ಡಿ.24 ರಿಂದಲೇ ಪ್ರವಾಸಿಗರು ನಗರಕ್ಕೆ ದೊಡ್ಡ ಸಂಖ್ಯೆಯಲ್ಲಿ ಆಗಮಿಸಿ ದರು. ನಗರಕ್ಕೆ ಡಿ.24 ರಿಂದ 31ರ ಅವಧಿಯಲ್ಲಿ 2 ಲಕ್ಷ ಪ್ರವಾಸಿಗರು ಭೇಟಿ ನೀಡಿದ್ದಾರೆ.

ಹೋಟೆಲ್‌ಗಳು ಭರ್ತಿ: ದಸರಾ ಸಂದರ್ಭ ನಗರದ ಎಲ್ಲ ಹೋಟೆಲ್‌ಗಳು ಭರ್ತಿಯಾಗುತ್ತವೆ. ಆ ನಂತರ ನಗರಕ್ಕೆ ಭಾರಿ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿ ಸುವುದಿಲ್ಲ. ದಸರಾ ನಂತರ ವರ್ಷಾಂತ್ಯದಲ್ಲಿ ಪ್ರತಿವರ್ಷ ಸಾಂಸ್ಕೃತಿಕ ನಗರಿಯು ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಸೆಳೆಯುತ್ತದೆ. ವಷಾಂತ್ಯದಲ್ಲಿ ನಗರದ ಎಲ್ಲ ಹೋಟೆಲ್‌ಗಳು ಪ್ರವಾಸಿಗರಿಂದ ಭರ್ತಿಯಾಗಿತ್ತು. ಜಿಲ್ಲೆಯಲ್ಲಿ 425 ಹೋಟೆಲ್‌ಗಳಲ್ಲಿ 10,500 ಕೊಠಡಿ ಗಳಿದ್ದು, ಎಲ್ಲ ಕೊಠಡಿಗಳ ಪ್ರವಾಸಿಗರಿಂದ ತುಂಬಿತ್ತು. ಲಕ್ಷಾಂತರ ಸಂಖ್ಯೆಯಲ್ಲಿ ಆಗಮಿಸಿದ ಪ್ರವಾಸಿಗರು ಮೈಸೂರಿನ ಆತಿಥ್ಯ ಸ್ವೀಕರಿಸಿ ಸಂಭ್ರಮಿಸಿದರು. ಕ್ರಿಸ್‌ಮಸ್ ಹಾಗೂ ಹೊಸ ವರ್ಷ ಹಿನ್ನೆಲೆಯಲ್ಲಿ ಹೋಟೆಲ್, ಬೇಕರಿಗಳಲ್ಲಿ ಉತ್ತಮ ವ್ಯಾಪಾರ ವಹಿವಾಟು ನಡೆಯಿತು. ಕೇವಲ ಹೋಟೆಲ್‌ಗಳು ಮಾತ್ರವಲ್ಲದೆ ಬೀದಿಬದಿ ವ್ಯಾಪಾರಿಗಳು, ಟಾಂಗಾವಾಲಗಳು, ಆಟೋ ರಿಕ್ಷಾ, ಟ್ಯಾಕ್ಸಿ ಚಾಲಕರ ಮೊಗದಲ್ಲೂ ಹೊಸ ವರ್ಷ ನಗುವನ್ನು ಅರಳಿಸಿತು.

ಡಿಸೆಂಬರ್‌ನಲ್ಲಿ 5 ಲಕ್ಷ ಪ್ರವಾಸಿಗರು: ಅಂಬಾವಿಲಾಸ ಅರಮನೆಗೆ ಡಿಸೆಂಬರ್ 1 ರಿಂದ 31ರವರೆಗೆ ಒಟ್ಟು 5,03,669 ಪ್ರವಾಸಿಗರು ಭೇಟಿ ನೀಡಿದ್ದಾರೆ. 3,14,412 ವಯಸ್ಕರು, 3,037 ವಿದೇಶಿಯರು, 1,22,210 ವಿದ್ಯಾರ್ಥಿಗಳು, 64,010 ಮಕ್ಕಳು ಅರಮನೆ ವೀಕ್ಷಿಸಿದ್ದಾರೆ.

ವರ್ಷಾಂತ್ಯದಲ್ಲಿ 2 ಲಕ್ಷ ಜನರು ಭೇಟಿ: ನಗರದ ಶ್ರೀ ಚಾಮರಾಜೇಂದ್ರ ಮೃಗಾಲಯಕ್ಕೆ ಡಿಸೆಂಬರ್ 23 ರಿಂದ 30 ರವರೆಗೆ 2 ಲಕ್ಷಕ್ಕೂ ಹೆಚ್ಚು ಪ್ರವಾಸಿಗರು ಭೇಟಿ ನೀಡಿದ್ದಾರೆ. ಮೈಸೂರು ಮೃಗಾಲಯಕ್ಕೆ ಡಿ.23 ರಂದು 25,860, ಡಿ.24 ರಂದು 40,761, 25ರಂದು 35,344, 26 ರಂದು 14,476, 27 ರಂದು 28,425, 28ರಂದು 29,906, 29 ರಂದು 26,450, 30 ರಂದು 27,092 ಪ್ರವಾಸಿಗರು ಭೇಟಿ ನೀಡಿದರು.

ಆಕರ್ಷಿಸಿದ ಮಾಗಿ ಉತ್ಸವ: ಮೈಸೂರು ಅರಮನೆ ಮಂಡಳಿ ವತಿಯಿಂದ ಹಮ್ಮಿಕೊಂಡಿದ್ದ ಮಾಗಿ ಉತ್ಸವ ಈ ಬಾರಿಯೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಆಕರ್ಷಿಸಲು ಯಶಸ್ವಿಯಾಯಿತು. ಮಾಗಿ ಉತ್ಸವದ ಅಂಗವಾಗಿ ಪ್ರತಿದಿನ ಅರಮನೆ ಆವರಣದಲ್ಲಿ ಸಂಗೀತ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಅರಮನೆ ಆವರಣದಲ್ಲಿ ಹಮ್ಮಿಕೊಂಡಿದ್ದ ಫಲಪುಷ್ಪ ಪ್ರದರ್ಶನ ಲಕ್ಷಾಂತರ ಜನರನ್ನು ಸೆಳೆಯುವಲ್ಲಿ ಯಶಸ್ವಿಯಾಯಿತು.

ಮತ್ತೆರಡು ಆಕರ್ಷಣೆಗೆ ಸಜ್ಜು: ಹೊಸ ವರ್ಷಾಚರಣೆ ಕಳೆದ ನಂತರ ಮೈಸೂರಿನತ್ತ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುವುದಿಲ್ಲ. ಈ ಹಿನ್ನೆಲೆಯಲ್ಲಿ ಜನವರಿ, ಫೆಬ್ರವರಿ ತಿಂಗಳಿನಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಸೆಳೆಯಲು ‘ಮೈಸೂರು ಫೆಸ್ಟ್’ ಹಾಗೂ ‘ಸೋಮನಾಥಪುರ ಉತ್ಸವ’ ನಡೆಸಲು ತೀರ್ಮಾನಿಸಲಾಗಿದೆ. ನಗರದ ಮಾನಸಗಂಗೋತ್ರಿಯ ಬಯಲ ರಂಗಮಂದಿರದಲ್ಲಿ ಜ.26 ರಿಂದ 28ರವರೆಗೆ ಮೈಸೂರು ಫೆಸ್ಟ್ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ. ‘ಮೈಸೂರು ಫೆಸ್ಟ್’ನಲ್ಲಿ ಮೈಸೂರು ಪರಂಪರೆಯನ್ನು ಬಿಂಬಿಸುವ ಅತ್ಯುತ್ತಮ ಕಲಾತಂಡಗಳಿಂದ ನಗಾರಿ, ಡೊಳ್ಳು, ಭರತನಾಟ್ಯ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಮಕ್ಕಳು ಹಾಗೂ ದೊಡ್ಡವರಿಗಾಗಿ ಚಿತ್ರಸಂತೆ, ಜಾಗತಿಕ ಮಟ್ಟದಲ್ಲಿ ಪ್ರಸಿದ್ಧಿ ಪಡೆದಿರುವ ಮೈಸೂರು ಸ್ಥಳೀಯ ಉತ್ಪನ್ನಗಳನ್ನು ಉತ್ತಮ ಗುಣಮಟ್ಟದಲ್ಲಿ ನಿರ್ದಿಷ್ಟ ಬೆಲೆಗೆ ಒಂದೇ ಸೂರಿನಡಿ ಮಾರಾಟ ಮಾಡಲು ಮಾರುಕಟ್ಟೆ ಆಯೋಜನೆ, ಆಹಾರಮೇಳ, ಫ್ಯಾಷನ್ ಶೋ( ವಿವಿಧ ಬ್ರಾೃಂಡೆಂಡ್ ವಸ್ತುಗಳ ಮಾರಾಟಗಾರಿಂದ ಸೇಲ್ಸ್ ಉತ್ತೇಜನಕ್ಕಾಗಿ), ಗಾಳಿಪಟ ಉತ್ಸವ, ರಾಕ್‌ಬ್ಯಾಂಡ್ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು.

ತಿ.ನರಸೀಪುರ ತಾಲೂಕಿನ ಸೋಮನಾಥಪುರದ ಶ್ರೀ ಚನ್ನಕೇಶವ ದೇವಾಲಯ ಯುನೆಸ್ಕೋದ ಮಾನ್ಯತೆ ಪಡೆದುಕೊಂಡಿದ್ದು, ಈ ದೇವಾಲಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಸೆಳೆಯಲು ಫೆಬ್ರವರಿಯಲ್ಲಿ ಸೋಮನಾಥಪುರ ಉತ್ಸವ ಹಮ್ಮಿಕೊಳ್ಳಲು ಉದ್ದೇಶಿಸಲಾಗಿದ್ದು, ದಿನಾಂಕ ಅಂತಿಮಗೊಳ್ಳಬೇಕಾಗಿದೆ. ಉತ್ಸವದಲ್ಲಿ ಹೊಯ್ಸಳರ ಕಾಲದ ಸಂಸ್ಕೃತಿ ಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು.

ನಗರಕ್ಕೆ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡಿದ್ದು, ಉತ್ತಮ ವಹಿವಾಟು ನಡೆದಿದೆ. ಡಿ.24 ರಿಂದ ಜ.1ರ ಅವಧಿಯಲ್ಲಿ ನಗರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡಿದರು. ಕೇರಳದಲ್ಲಿ ಕೋವಿಡ್ ಹೆಚ್ಚಳ ಹಿನ್ನೆಲೆಯಲ್ಲಿ ಕೇರಳಕ್ಕೆ ಪ್ರವಾಸಕ್ಕೆ ತೆರಳಬೇಕಾದ ಅನೇಕರು ಮೈಸೂರಿಗೆ ಆಗಮಿಸಿದ್ದರು. ಈ ಹಿನ್ನೆಲೆಯಲ್ಲಿ ಈ ಬಾರಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿ ಕಂಡುಬಂತು. ಕೇರಳದಿಂದ ನಗರಕ್ಕೆ ಪ್ರತಿ ವರ್ಷ ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಾರೆ. ಕೋವಿಡ್ ಹಿನ್ನೆಲೆಯಲ್ಲಿ ಈ ಬಾರಿ ಕೇರಳ ಪ್ರವಾಸಿಗರ ಸಂಖ್ಯೆಯಲ್ಲಿ ಶೇ.25 ರಷ್ಟು ಇಳಿಮುಖ ಕಂಡಿದೆ.
ನಾರಾಯಣ ಗೌಡ,
ಅಧ್ಯಕ್ಷ, ಹೋಟೆಲ್ ಮಾಲೀಕರ ಸಂಘ