ಜಿಲ್ಲೆ

2 ಲಕ್ಷ ಮಕ್ಕಳು ಇಂದಿನಿಂದ ಮತ್ತೆ ಶಾಲೆಗೆ

Dharwad

ಹುಬ್ಬಳ್ಳಿ: ಕಳೆದೊಂದು ವಾರದಿಂದ ಮನೆ, ಆನ್​ಲೈನ್ ಪಾಠಕ್ಕೆ ಸೀಮಿತರಾಗಿದ್ದ ಧಾರವಾಡ ಮತ್ತು ಹುಬ್ಬಳ್ಳಿ ಶಹರ-ಗ್ರಾಮೀಣ ಸೇರಿ ನಾಲ್ಕು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ(ಬಿಇಒ)ಗಳ ವ್ಯಾಪ್ತಿಯ 2 ಲಕ್ಷಕ್ಕಿಂತ ಹೆಚ್ಚಿನ ಸಂಖ್ಯೆಯ ಮಕ್ಕಳು ಸೋಮವಾರ ಮತ್ತೆ ಶಾಲೆಗೆ ಮರಳಲಿದ್ದಾರೆ.

19 ಶಾಲೆಗಳಲ್ಲಿ ಕರೊನಾ ಪ್ರಕರಣಗಳು ಕಂಡುಬಂದ ಹಿನ್ನೆಲೆಯಲ್ಲಿ ಆತಂಕ ಮೂಡಿತ್ತು. ಮುಂಜಾಗ್ರತಾ ಕ್ರಮವಾಗಿ ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ಜಿಲ್ಲಾಧಿಕಾರಿಯವರು ಜ. 13ರಿಂದ 1ರಿಂದ 8ನೇ ತರಗತಿವರೆಗಿನ ಶಾಲೆಗಳನ್ನು ತೆರೆಯದಂತೆ ಆದೇಶಿಸಿದ್ದರು. ಮಕ್ಕಳಿಗೆ ಆನ್​ಲೈನ್ ಪಾಠ ಪ್ರವಚನ ನಡೆಸುವಂತೆಯೂ ಸೂಚಿಸಲಾಗಿತ್ತು.

ತುರ್ತಾಗಿ ಒಂದು ಲಕ್ಷಕ್ಕಿಂತ ಹೆಚ್ಚಿನ ಮೊಬೈಲ್ ಫೋನ್​ಗಳನ್ನು ಇಂಟರ್​ನೆಟ್ ಸಹಿತ ಸಜ್ಜುಗೊಳಿಸುವ ಅನಿವಾರ್ಯತೆ ಪಾಲಕರಿಗೆ ಎದುರಾಗಿತ್ತು. ಹೇಗೋ ಆ ಕಾರ್ಯವನ್ನು ಪೂರೈಸಿದ್ದರಿಂದಾಗಿ ಕಳೆದ ಸೋಮವಾರದಿಂದ ಮಕ್ಕಳು ಮೊಬೈಲ್ ಫೋನ್ ಹಿಡಿದು ಪಾಠ ಕೇಳಬೇಕಾಗಿ ಬಂದಿತ್ತು. ಈಗ ಸರ್ಕಾರದ ಮಾರ್ಗಸೂಚಿ ಬದಲಾಗಿರುವ ಹಿನ್ನೆಲೆಯಲ್ಲಿ ಪುನಃ ಶಾಲೆಗಳನ್ನು ಆರಂಭಿಸಲು ಜಿಲ್ಲಾಧಿಕಾರಿಯವರು ಆದೇಶ ಹೊರಡಿಸಿರುವುದರಿಂದ ಪಾಲಕರು, ಮಕ್ಕಳು, ಶಿಕ್ಷಕರು ನಿಟ್ಟುಸಿರು ಬಿಟ್ಟಿದ್ದಾರೆ.

ಹುಬ್ಬಳ್ಳಿ ಶಹರ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ವ್ಯಾಪ್ತಿಯಲ್ಲಿ 85 ಸಾವಿರದಷ್ಟು, ಗ್ರಾಮೀಣ ವ್ಯಾಪ್ತಿಯಲ್ಲಿ 20 ಸಾವಿರದಷ್ಟು ಮಕ್ಕಳಿದ್ದಾರೆ. ಧಾರವಾಡ ಶಹರದಲ್ಲಿ 75 ಸಾವಿರದಷ್ಟು ಹಾಗೂ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ವ್ಯಾಪ್ತಿಯಲ್ಲಿ 35 ಸಾವಿರದಷ್ಟು ಮಕ್ಕಳು ಇದ್ದಾರೆ. ಅವರೆಲ್ಲರ ಕಲರವ ಮತ್ತೆ ಶಾಲಾ ಆವರಣದಲ್ಲಿ ಕೇಳಿಬರಲಿದೆ.

ಹಿರಿಯ ಅಧಿಕಾರಿಗಳ ಸೂಚನೆಯಂತೆ ಕ್ರಮ ಕೈಗೊಳ್ಳಲಾಗುತ್ತಿದೆ. ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಈಗಾಗಲೇ ಸೂಚನೆ ನೀಡಲಾಗಿದೆ ಎಂದು ಹುಬ್ಬಳ್ಳಿ ಗ್ರಾಮೀಣ ಬಿಇಒ ಅಶೋಕ ಸಿಂದಗಿ, ಧಾರವಾಡ ಗ್ರಾಮೀಣ ಬಿಇಒ ಉಮೇಶ ಬೊಮ್ಮಕ್ಕನವರ ಪತ್ರಿಕೆಗೆ ಪ್ರತಿಕ್ರಿಯಿಸಿದರು.

ಜಿಲ್ಲಾಧಿಕಾರಿಯವರು ಮತ್ತು ನಮ್ಮ ಮೇಲಧಿಕಾರಿಗಳ ಆದೇಶವನ್ನು ಈಗಾಗಲೇ ಎಲ್ಲ ಶಾಲೆಗಳಿಗೆ ಯಥಾವತ್ತಾಗಿ ತಲುಪಿಸಲಾಗಿದೆ. ಸೋಮವಾರ ತರಗತಿಗಳು ಪುನಃ ಪ್ರಾರಂಭವಾಗಲಿವೆ. ಸರ್ಕಾರದಿಂದ ಕಾಲಕಾಲಕ್ಕೆ ಬರುವ ಸೂಚನೆಗಳನ್ನು ಪಾಲಿಸಲು ಅಗತ್ಯ ವ್ಯವಸ್ಥೆ ಮಾಡಲಾಗಿದೆ.|ಶ್ರೀಶೈಲ ಕರಿಕಟ್ಟಿ, ಹುಬ್ಬಳ್ಳಿ ಶಹರ ಬಿಇಒ