ಜಿಲ್ಲೆ

ಹೆದ್ದಾರಿಗೆ ಉರುಳಿ ಬಿದ್ದ ಗೂಡ್ಸ್ ವಾಹನ

Mandya

ವಿಜಯವಾಣಿ ಸುದ್ದಿಜಾಲ ಶ್ರೀರಂಗಪಟ್ಟಣ
ಗೊಬ್ಬರ ತುಂಬಿಕೊಂಡು ಹೆದ್ದಾರಿಯಲ್ಲಿ ಶುಕ್ರವಾರ ತೆರಳುತ್ತಿದ್ದ ಗೂಡ್ಸ್ ವಾಹನದ ಹಿಂಬದಿ ಟಯರ್ ಸಿಡಿದು ಪಲ್ಟಿಯಾದ ಪರಿಣಾಮ ಸುಮಾರು 2 ತಾಸು ಸಂಚಾರ ಅಸ್ತವ್ಯಸ್ತವಾಯಿತು.
ಪಟ್ಟಣ ಸಮೀಪದ ಬೆಂಗಳೂರು-ಮೈಸೂರು ಹೆದ್ದಾರಿಯ ಕಾವೇರಿ ಸೇತುವೆ ಬಳಿ ಮಂಡ್ಯ ಕಡೆಯಿಂದ ಮೈಸೂರು ಕಡೆಗೆ ಸಂಚರಿಸುತ್ತಿದ್ದ ಗೂಡ್ಸ್ ವಾಹನದ ಟಯರ್ ಸಿಡಿದು ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿಗೆ ಅಡ್ಡಲಾಗಿ ಪಲ್ಟಿಯಾಗಿದೆ. ಅದೃಷ್ಟವಶಾತ್ ಚಾಲಕ ಹಾಗೂ ಕ್ಲೀನರ್ ಅಪಾಯದಿಂದ ಪಾರಾಗಿದ್ದಾರೆ.
ಗೊಬ್ಬರದ ಮೂಟೆಗಳು ಹೆದ್ದಾರಿಯಲ್ಲಿ ಹರಡಿಕೊಂಡು ಬಿದ್ದ ಪರಿಣಾಮ ಬೆಂಗಳೂರು-ಮೈಸೂರು ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೆ ಅಡ್ಡಿಯಾಯಿತು. ಇದರಿಂದ ಎರಡೂ ಕಡೆಯೂ 3 ಕಿ.ಮೀ. ವಾಹನಗಳು ನಿಂತಿದ್ದವು. ಇದರಿಂದ ಪ್ರಯಾಣಿಕರು ಪರದಾಡುವಂತಾಯಿತು.
ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಶ್ರೀರಂಗಪಟ್ಟಣ ಟೌನ್ ಠಾಣೆ ಪೊಲೀಸರು ಸಂಚಾರ ದಟ್ಟಣೆ ಕಡಿಮೆ ಮಾಡಲು ಅಡ್ಡಾದಿಡ್ಡಿ ನಿಂತಿದ್ದ ವಾಹನ ತೆರವುಗೊಳಿಸುವ ಜತೆಗೆ ಪಲ್ಟಿಯಾಗಿದ್ದ ವಾಹನ ಮತ್ತು ಗೊಬ್ಬರ ಮೂಟೆಗಳನ್ನು ತೆರವು ಮಾಡಿ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು. ಈ ಸಂಬಂಧ ಠಾಣೆಯಲ್ಲಿ ಪ್ರಕರಣ ದಾಖಲಾಗಿಲ್ಲ.