ಜಿಲ್ಲೆ

ಹೇಮಾವತಿ ನದಿಯಲ್ಲಿ ಮುಳುಗಿ ಇಬ್ಬರು ನೀರುಪಾಲು

ಎ. ಆರ್. ರಘುರಾಮ

ಸಕಲೇಶಪುರ: ಪಟ್ಟಣದ ಹೆನ್ನಲಿ ಗ್ರಾಮ ಸಮೀಪದ ಹೇಮಾವತಿ ನದಿಯಲ್ಲಿ ಈಜಲು ತೆರಳಿದ್ದ ಇಬ್ಬರು ನೀರು ಪಾಲಾಗಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ಆಲ್ದೂರು ಹೋಬಳಿ ಬಾಳೆಹಳ್ಳ ಗ್ರಾಮದ ಭರತ್(34) ಹಾಗು ತಾಲೂಕಿನ ಕಾಟಿಹಳ್ಳಿ ಗ್ರಾಮದ ಪ್ರಕಾಶ್(29) ಮೃತಪಟ್ಟವರು.

ಪ್ರಕಾಶ್ ಮನೆಗೆ ಬಂದಿದ್ದ ಸಂಬಂಧಿಕರು ಶನಿವಾರ ಮಧ್ಯಾಹ್ನ ಆಟೋ ರಿಕ್ಷಾದಲ್ಲಿ ಹೇಮಾವತಿ ತೀರದಲ್ಲಿ ವಿಹಾರಕ್ಕಾಗಿ ತೆರಳಿದ್ದರು. ಹೆನ್ನಲಿ ಗ್ರಾಮದ ಎತ್ತಿನಹೊಳೆ ಸೇತುವೆ ಸಮೀಪ ಪ್ರಕಾಶ್ ನದಿಗೆ ಇಳಿದು ಈಜಾಡುತ್ತಿದ್ದ ವೇಳೆ ನೀರಿನ ಸೆಳೆತಕ್ಕೆ ಸಿಲುಕಿದರು. ಮುಳುಗುತ್ತಿದ್ದ ಅವರನ್ನು ರಕ್ಷಿಸಲು ತೆರಳಿದ ಭರತ್ ಅವರೂ ನೀರಿನ ಸುಳಿಗೆ ಸಿಲುಕಿ ಮುಳುಗಿದರು. ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಮೃತ ದೇಹಗಳನ್ನು ಹೊರತೆಗೆದು ಕ್ರಾಫರ್ಡ್ ಆಸ್ಪತ್ರೆ ಶವಗಾರಕ್ಕೆ ಸಾಗಿಸಿದರು. ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.