ಮಕ್ಕಳು ಆಟವಾಡಲು ಬಳಸಿದ್ದ ಸೀರೆ 
ಜಿಲ್ಲೆ

ಆಟ ಆಡ್ತ ಆಡ್ತ ಸತ್ತು ಹೋದ ಬಾಲಕಿ: ಶಾಲೆ ತೆರೆದಿಲ್ಲ, ಮಕ್ಕಳು ಮನೇಲೇ ಇದ್ದಾರೆ ಅಂತಾದರೆ ಯಾವುದಕ್ಕೂ ಹುಷಾರಾಗಿರಿ..!

ಕೋಲಾರ: ಕರೊನಾ ಹಿನ್ನೆಲೆಯಲ್ಲಿ ಶಾಲೆಗಳು ಇನ್ನೂ ತೆರೆದಿಲ್ಲ. ಮಕ್ಕಳು ಮನೆಯಲ್ಲೇ ಇದ್ದಾರೆ. ಹೊರಗೂ ಹೆಚ್ಚು ಹೋಗುತ್ತಿಲ್ಲ. ಮನೆಯೊಳಗೆ ಏನೋ ಆಟ ಆಡಿಕೊಂಡು ಇರುತ್ತಾರೆ ಎಂದು ನೀವು ಅತ್ತ ಗಮನ ಹರಿಸದೇ ಸುಮ್ಮನಿದ್ದರೆ ಅಪಾಯ ಸಂಭವಿಸುವ ಸಾಧ್ಯತೆಯೂ ಇರುತ್ತದೆ. ಏಕೆಂದರೆ ಇಲ್ಲೊಂದು ಕಡೆ ಹಾಗೆ ಆಟವಾಡುತ್ತಿದ್ದ ಮಕ್ಕಳ ಪೈಕಿ ಒಬ್ಬಳು ಬಾಲಕಿ ಜೀವ ಕಳೆದುಕೊಳ್ಳುವಂತಾಗಿದೆ.

ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ಪೆದ್ದೂರು ಗ್ರಾಮದಲ್ಲಿ ಇಂಥದ್ದೊಂದು ದುರಂತ ಸಂಭವಿಸಿದೆ. ಮಕ್ಕಳಿಬ್ಬರು ಮನೆಯಲ್ಲೇ ಸೀರೆಯಲ್ಲಿ ಉಯ್ಯಾಲೆ ಕಟ್ಟಿಕೊಂಡು ಆಡುತ್ತಿದ್ದರು. ಆ ಸಂದರ್ಭದಲ್ಲಿ ಮಕ್ಕಳಿಬ್ಬರಿಗೆ ಸೀರೆ ಸುತ್ತಿಕೊಂಡು, ಒಬ್ಬಳು ಉಸಿರುಗಟ್ಟಿ ಸತ್ತು ಹೋದರೆ ಮತ್ತೊಬ್ಬಳ ಸ್ಥಿತಿ ಗಂಭೀರವಾಗಿದೆ.

ಪೆದ್ದೂರು ಗ್ರಾಮದ ಮೇಘನಾ (12) ಉಸಿರುಗಟ್ಟಿ ಸಾವಿಗೀಡಾಗಿರುವ ಬಾಲಕಿ. ಜೊತೆಗಿದ್ದ ದೇವಿಶ್ರೀ ಎಂಬಾಕೆಯ ಪರಿಸ್ಥಿತಿ ಗಂಭೀರಗೊಂಡಿದ್ದು, ಆಕೆಯನ್ನು ಬೆಂಗಳೂರಿನ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿದೆ. ಈ ದುರಂತದ ಕುರಿತು ನಂಗಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.