ಜಿಲ್ಲೆ

ಶಿಂಗಟಾಲೂರಲ್ಲಿ2 ಎಕರೆ ಕಬ್ಬು ಬೆಳೆ ಬೆಂಕಿಗಾಹುತಿ

ಮುಂಡರಗಿ: ಕಬ್ಬಿನ ಗದ್ದೆಗೆ ಬೆಂಕಿ ಬಿದ್ದು ಕಟಾವಿಗೆ ಬಂದಿದ್ದ ಅಪಾರ ಪ್ರಮಾಣದ ಕಬ್ಬು ಸುಟ್ಟು ಕರಕಲಾದ ಘಟನೆ ತಾಲೂಕಿನ ಶಿಂಗಟಾಲೂರ ಗ್ರಾಮದಲ್ಲಿ ಶನಿವಾರ ಸಂಭವಿಸಿದೆ.

ಗ್ರಾಮದ ರೈತ ಕಾಶೀನಾಥ ಬಿಳಿಮಗ್ಗದ ಅವರಿಗೆ ಸೇರಿದ 2 ಎಕರೆಯಲ್ಲಿ ಬೆಳೆದಿದ್ದ ಕಬ್ಬು ಬೆಳೆ ಅಗ್ನಿ ಆಹುತಿಯಾಗಿದೆ. ಪಕ್ಕದ ಜಮೀನಿನ ರೈತರೊಬ್ಬರು ತಮ್ಮ ಜಮೀನಿನಲ್ಲಿದ್ದ ಭತ್ತದ ತ್ಯಾಜ್ಯಕ್ಕೆ ಬೆಂಕಿ ಹಚ್ಚಿದ್ದರಿಂದ ಬೆಂಕಿಯು ಅಕ್ಕಪಕ್ಕದ ಜಮೀನುಗಳಿಗೆ ವ್ಯಾಪಿಸಿತು. ಇದರಿಂದಾಗಿ ಕಬ್ಬು ಬೆಳೆಗೆ ಬೆಂಕಿ ತಗುಲಿದೆ.

ಸುದ್ದಿ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಜಮೀನಿಗೆ ತೆರಳಿ ಬೆಂಕಿ ನಂದಿಸಲು ಪ್ರಯತ್ನಿಸಿದರು. ನಂತರ ಅಗ್ನಿ ಶಾಮಕ ಸಿಬ್ಬಂದಿ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸಿದರು. ಇದಕ್ಕೂ ಮುನ್ನ ಬೆಂಕಿ ನಂದಿಸಲು ಮುಂದಾದ ಗ್ರಾಮದ ರೈತ ವಿರೂಪಾಕ್ಷಯ್ಯ ಹಿರೇಮಠ ಅವರು ತಮ್ಮ ಟ್ರ್ಯಾಕ್ಟರ್ ನೆರವಿನಿಂದ ಕಬ್ಬಿನ ಗದ್ದೆಯ ನಡುವೆ ಕಲ್ಟಿವೇಟರ್ ಹೊಡೆದು ಬೆಂಕಿ ಹರಡುವುದನ್ನು ತಡೆಗಟ್ಟಲು ಮುಂದಾಗಿದ್ದರು. ಈ ವೇಳೆ ಟ್ರ್ಯಾಕ್ಟರ್​ನ ಎರಡು ಟಯರ್​ಗಳು ಸುಟ್ಟು ಹೋದವು. ಜಮೀನಿನಲ್ಲಿದ್ದ ಹನಿ ನೀರಾವರಿ ಘಟಕದ ಸಾಮಗ್ರಿಗಳು ಕರಕಲಾಗಿವೆ.