ಮೈಸೂರು: ಸಾಮಾಜಿಕ ಜಾಲತಾಣದಲ್ಲಿನ ನಕಲಿ ಷೇರು ಮಾರುಕಟ್ಟೆಯನ್ನು ನಂಬಿ ನಗರದ ಯುವಕ ಬರೋಬ್ಬರಿ 2.96 ಕೋಟಿ ರೂ. ಕಳೆದುಕೊಂಡಿದ್ದಾನೆ. ಇಷ್ಟು ದೊಡ್ಡ ಮೊತ್ತದ ಹಣ ಕಳೆದುಕೊಂಡಿರುವುದು ನಗರದಲ್ಲಿ ಇದೇ ಮೊದಲಾಗಿದೆ.
ನಗರದ ಸರಸ್ವತಿಪುರಂನ 30 ವರ್ಷದ ಯುವಕ, ಷೇರು ಮಾರುಕಟ್ಟೆಯಲ್ಲಿ ಬಂಡವಾಳ ಹೂಡಲು ಆಸಕ್ತಿ ಹೊಂದಿದ್ದ. ಸಾಮಾಜಿಕ ಜಾಲತಾಣದಲ್ಲಿ ಸಿಕ್ಕ ಟ್ರೇ ಆ್ಯಪ್ ಡೌನ್‌ಲೋಡ್ ಮಾಡಿಕೊಂಡಿದ್ದಾರೆ.
ಕಳೆದ ಏಪ್ರಿಲ್‌ನಿಂದ ನಿರಂತವಾಗಿ 2.96 ಕೋಟಿ ರೂ. ಹೂಡಿಕೆ ಮಾಡಿದ ಯುವಕ ಬಳಿಕ ಲಾಭ ಬರುವ ನಿರೀಕ್ಷೆಯಲ್ಲಿ ಇದ್ದರು. ಆದರೆ ಸಾಕಷ್ಟು ದಿನಗಳು ಕಳೆದರೂ ಹಣ ಬಾರದೇ ಇದ್ದ ಮೇಲೆ ವಂಚನೆ ಆಗಿರುವುದು ಗೊತ್ತಾಗಿದೆ. ಬಳಿಕ ಈ ಬಗ್ಗೆ ಸೆಲ್ ಪೊಲೀಸ್ ಠಾಣೆಗೆ ಇತ್ತೀಚೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ಇದೇ ರೀತಿ ಐದು ಜನರು ನಕಲಿ ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿ 20 ಲಕ್ಷ ರೂ. ಕಳೆದುಕೊಂಡಿದ್ದಾರೆ. ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿದರೆ ಆರಾಮವಾಗಿ ಲಾಭ ಗಳಿಸಬಹುದು ಎಂಬ ಉದ್ದೇಶದಿಂದ ಮೊಬೈಲ್ ಮೆಸೇಜ್, ವಾಟ್ಸ್‌ಆ್ಯಪ್ ಬರುವ ನಕಲಿ ಲಿಂಕ್‌ಗಳನ್ನು ಡೌನ್‌ಲೋಡ್ ಮಾಡಿಕೊಂಡು ಸಾಕಷ್ಟು ವಿದ್ಯಾವಂತ ಯುವಕ-ಯುವತಿಯರೇ ವಂಚನೆಗೊಳಗಾಗುತ್ತಿದ್ದಾರೆ. ಆನ್‌ಲೈನ್ ಮೂಲಕ ಬಂಡವಾಳ ಹೂಡಿಕೆಗೂ ಮುನ್ನ ಸಂಬಂಧಪಟ್ಟ ಕ್ಷೇತ್ರ ಪರಿಣಿತರನ್ನು ಸಂಪರ್ಕಿಸಿ ಹೂಡಿಕೆ ಮಾಡಬೇಕು ಎಂದು ಪೊಲೀಸರು ಸಲಹೆ ನೀಡಿದ್ದಾರೆ.