ಜಿಲ್ಲೆ

2.50 ಕೋಟಿ ರೂ. ರಸ್ತೆ ಕಾಮಗಾರಿಗೆ ಚಾಲನೆ


ಚನ್ನರಾಯಪಟ್ಟಣ : ವ್ಯಾಪಕ ಮಳೆಯಿಂದ ಹಾನಿಯಾಗಿರುವ ರಸ್ತೆಗಳ ಅಭಿವೃದ್ಧಿಗೆ ಅಗತ್ಯ ಅನುದಾನ ಕಲ್ಪಿಸುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಹೇಳಿದರು.


ತಾಲೂಕಿನ ಶೆಟ್ಟಿಹಳ್ಳಿ ಗ್ರಾಮದಲ್ಲಿ 2.50 ಕೋಟಿ ರೂ. ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಸೋಮವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿ, ಸದ್ಯಕ್ಕೆ ಲೋಕೋಪಯೋಗಿ ಇಲಾಖೆ ಮೂಲಕ 65 ಕೋಟಿ ರೂ. ಅನುದಾನ ತಂದು ಗ್ರಾಮೀಣ ಭಾಗದ ರಸ್ತೆಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದರು.


ಚಾಮಡಿಹಳ್ಳಿ ಗ್ರಾಮದಿಂದ ಶೆಟ್ಟಿಹಳ್ಳಿ ಗೇಟ್ ವರಗೆ ಹಾಗೂ ಶೆಟ್ಟಿಹಳ್ಳಿ ಗ್ರಾಮದ ಪರಿಮಿತಿಯಿಂದ ಅರಳಾಪುರ ಗ್ರಾಮದ ವರಗೆ 2.3 ಕಿಮೀ ರಸ್ತೆಯನ್ನು ಅಭಿವೃದ್ಧಿಪಡಿಸಲಾಗುವುದು. ಚಾಮಡಿಹಳ್ಳಿ ಗೇಟಿನಿಂದ ಬೇಡಿಗನಹಳ್ಳಿ ಗ್ರಾಮದ ವರಗೆ ರಸ್ತೆ ಅಭಿವೃದ್ಧಿಗೆ ಅನುಮತಿ ದೊರೆತಿದ್ದು ಶೀಘ್ರವೇ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.


ಸುವರ್ಣ ಕರ್ನಾಟಕ ಯೋಜನೆಯಡಿ ಗ್ರಾಮದ ಪರಿಮಿತಿಯಲ್ಲಿ ಬಹುತೇಕ ರಸ್ತೆಗಳನ್ನು ಅಭಿವೃದ್ಧಿಪಡಿಸಿದ್ದು 4 ಕಡೆ ಹೈಮಾಸ್ಟ್ ದೀಪಗಳನ್ನು ಅಳವಡಿಸಲಾಗಿದೆ. ಸಮುದಾಯ ಭವನದ ಕಾಮಗಾರಿ ಪೂರ್ಣಗೊಂಡಿದೆ. ಗ್ರಾಮ ವಿಕಾಸ ಯೋಜನೆಯಡಿ ಶೆಟ್ಟಿಹಳ್ಳಿ ಗ್ರಾಮವನ್ನು ಅಭಿವೃದ್ಧಿಪಡಿಸಲಾಗಿದೆ. ಅಗತ್ಯ ಸೌಕರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಭರವಸೆ ನೀಡಿದರು.


ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಇಂಜಿನಿಯರ್ ಕಾಳೇಗೌಡ, ಎಪಿಎಂಸಿ ಮಾಜಿ ಅಧ್ಯಕ್ಷ ಮಂಜೇಗೌಡ, ಗುತ್ತಿಗೆದಾರ ಬರಾಳು ಮಂಜೇಗೌಡ ಹಾಗೂ ಇತರರು ಇದ್ದರು.