ಜಿಲ್ಲೆ

ಪೋಷಣ್​ ಅಭಿಯಾನ ಪ್ರಚಾರ ಸೀರೆ ನಾ ಒಲ್ಲೆ! 2.50 ಲಕ್ಷ ಸೀರೆ ಗೋದಾಮಲ್ಲೇ ಬಾಕಿ ಇಲಿ, ಹೆಗ್ಗಣಗಳಿಗೆ ಆಹಾರವಾಗ್ತಿದೆ ಬಟ್ಟೆ

| ಹರೀಶ್​ ಮೋಟುಕಾನ ಮಂಗಳೂರು

ಕೇಂದ್ರ ಸರ್ಕಾರದ "ಪೋಷಣ್​' ಅಭಿಯಾನದಡಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ನೀಡಲು ತೀರ್ಮಾನಿಸಲಾಗಿದ್ದ ಸೀರೆಯ ಸಮವಸ್ತ್ರ ಯಾರಿಗೂ ಬೇಡವಾಗಿ ಇಲಿ, ಹೆಗ್ಗಣಗಳಿಗೆ ಆಹಾರವಾಗುತ್ತಿದೆ! ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೂಲಕ ಅನುಷ್ಠಾನವಾಗುತ್ತಿರುವ ಈ ಅಭಿಯಾನದ ಉದ್ದೇಶ ಗರ್ಭಧಾರಣೆಯಿಂದ ಆರಂಭಿಸಿ ಶಿಶು ಮತ್ತು ತಾಯಿಗೆ 1 ಸಾವಿರ ದಿನ ಪೌಷ್ಟಿಕ ಆಹಾರ ಲಭಿಸುವಂತೆ ಮಾಡುವುದಾಗಿದೆ. ಅಂಗನವಾಡಿ ಸಿಬ್ಬಂದಿ ಇದರ ಭಾಗವಾಗಿದ್ದಾರೆ. ಅಭಿಯಾನದ ಅಂಗವಾಗಿ ಎಲ್ಲ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ತಲಾ 2ರಂತೆ ಸಮವಸ ಸೀರೆ ನೀಡಲು ನಿರ್ಧರಿಸಲಾಗಿತ್ತು. ರಾಜ್ಯ ಮಟ್ಟದಲ್ಲಿ ಟೆಂಡರ್​ ಆಗಿ ಬಣ್ಣ, ಗುಣಮಟ್ಟ, ವಿನ್ಯಾಸ ಇತ್ಯಾದಿ ನಿರ್ಧರಿಸಿ ತಲಾ 385.75 ರೂ. ಬೆಲೆಯ ಸೀರೆಗಳನ್ನು ಇಲಾಖೆಗೆ ಸರಬರಾಜು ಮಾಡಲಾಗಿದೆ. ಆದರೆ ಸೀರೆ ಯಾರಿಗೂ ಬೇಡವಾಗಿದೆ.

ಪೋಷಣ್​ ಅಭಿಯಾನದಡಿ ಕೆಲಸ ಮಾಡುವ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ವಿತರಿಸಲು ಬಂದಿದ್ದ ಸೀರೆ ಇಷ್ಟವಾಗಿಲ್ಲ ಎಂದು ರಾಜ್ಯದಲ್ಲೇ ನಿರಾಕರಣೆ ಮಾಡಿದ್ದಾರೆ. ಹಾಗಾಗಿ ಎಲ್ಲ ಸೀರೆಗಳು ಸಿಡಿಪಿಒ ಕಚೇರಿಗಳಲ್ಲೇ ಇವೆ. | ಡಾ.ಕುಮಾರ್​ ದಕ್ಷಿಣ ಕನ್ನಡ ಜಿಪಂ ಸಿಇಒ

ನಿರಾಕರಣೆ ಯಾಕೆ? ಸೀರೆಯಲ್ಲಿ ದೊಡ್ಡದಾಗಿ "ಪೋಷಣ್​ ಅಭಿಯಾನ್​' ಎಂದು ಮುದ್ರಿಸಲಾಗಿದೆ. ಅಭಿಯಾನದ ಮುದ್ರೆ ಹೂಗಳ ವಿನ್ಯಾಸದಲ್ಲಿದ್ದು, ಬ್ಯಾನರ್​ನಂತೆ ಕಾಣುತ್ತದೆ. ಸೌಂದರ್ಯಕ್ಕೆ ಪೂರಕ ಸೀರೆ ಕೊಟ್ಟರೆ ಮಾತ್ರ ಧರಿಸುತ್ತೇವೆ ಎಂದು ಅಂಗನವಾಡಿ ನೌಕರರ ಒಕ್ಕೂಟದವರು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಏಳು ತಿಂಗಳಾದರೂ ಸರ್ಕಾರದಿಂದ ಯಾವುದೇ ಕ್ರಮವಾಗಿಲ್ಲ. ಇತ್ತ ಸೀರೆಗಳು ಗೋದಾಮುಗಳಲ್ಲೇ ಕೊಳೆಯುತ್ತಿವೆ.

2.50 ಲಕ್ಷ ಸೀರೆ

ರಾಜ್ಯದ 204 ವಲಯಗಳಲ್ಲಿ 62,580 ಅಂಗನವಾಡಿ ಕೇಂದ್ರಗಳಿವೆ. ಇಲ್ಲಿನ ಕಾರ್ಯಕರ್ತೆಯರು, ಸಹಾಯಕಿಯರಿಗೆ ತಲಾ 2ರಂತೆ ಮತ್ತು 3,331 ಮಿನಿ ಅಂಗನವಾಡಿಗಳಲ್ಲಿರುವ ಕಾರ್ಯಕರ್ತೆಯರಿಗೆ ತಲಾ 2ರಂತೆ ಒಟ್ಟು 2,56,982 ಸೀರೆ ಸರಬರಾಜು ಮಾಡಲಾಗಿದೆ. 9.91 ಕೋಟಿ ರೂ. ವೆಚ್ಚ ಮಾಡಲಾಗಿದೆ.

ಅನೇಕ ಕಡೆ ಇನ್ನೂ ಬಿಲ್​ ನೀಡಿಲ್ಲ ರಾಜ್ಯದ 204 ಮಹಿಳಾ ಮತ್ತು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿಗಳಿಗೆ 7 ತಿಂಗಳ ಹಿಂದೆ ಸೀರೆಗಳು ಬಂದಿವೆ. ಬಿಲ್​ ಪಾವತಿಗೆ ಸೂಚನೆ ಬಂದಿದ್ದರೂ, ಸೀರೆ ನಿರಾಕರಿಸಲ್ಪಟ್ಟ ಕಾರಣ ಅನೇಕ ಕಡೆ ಪಾವತಿಸಿಲ್ಲ.

ನಮಗೆ ಇಂತಹ ಸೀರೆ ನೀಡುವ ಬದಲು ಗುರುತಿನ ಚೀಟಿ ಅಥವಾ ಓವರ್​ ಕೋಟ್​ ವಿತರಿಸಿದ್ದರೆ ಆಗುತ್ತಿತ್ತು. ಕಡಿಮೆ ವೇತನಕ್ಕೆ ಪ್ರಾಮಾಣಿಕವಾಗಿ ಕೆಲಸ ಮಾಡುವವರಿಗೆ ಉಪಯೋಗಕ್ಕೆ ಬಾರದ ಸೀರೆ ಕೊಡುವುದಕ್ಕಿಂತ ಕೊಡದಿರುವುದೇ ಉತ್ತಮ. ಅದಕ್ಕಾಗಿ ರಾಜ್ಯದ ಎಲ್ಲರೂ ಸಂಟಿತರಾಗಿ ಅದನ್ನು ನಿರಾಕರಣೆ ಮಾಡಿದ್ದೇವೆ. | ಜಯಲಕ್ಷಿ$್ಮ ಬಿ.ಆರ್​. ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಸಂದ ಗೌರವಾಧ್ಯಕ್ಷೆ