ಜಿಲ್ಲೆ

2.36 ಕೋಟಿ ರೂ. ಗೆ ಕುಸಿದ ಆಸ್ತಿ ತೆರಿಗೆ ಸಂಗ್ರಹ

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಆದಾಯ ಸಂಗ್ರಹದ ಮೇಲೆ ಲಾಕ್​ಡೌನ್ ಪೆಟ್ಟು ಬಲವಾಗಿ ಬಿದ್ದಿದೆ. ಪಾಲಿಕೆಯ ಆದಾಯ ಮೂಲಗಳಲ್ಲಿ ಪ್ರಮುಖವಾದ ಆಸ್ತಿ ತೆರಿಗೆಯ ಸಂಗ್ರಹವು ಮೇ ತಿಂಗಳಲ್ಲಿ ಗಣನೀಯ ಕುಸಿತ ಕಂಡಿದೆ.

ಅವಳಿ ನಗರದ ಸ್ಥಿರಾಸ್ತಿ ಮಾಲೀಕರಿಂದ 2020ರ ಮೇ ತಿಂಗಳಲ್ಲಿ ಪಾಲಿಕೆಗೆ 17,46,46,800 ರೂಪಾಯಿ ಆಸ್ತಿ ತೆರಿಗೆ ಪಾವತಿಯಾಗಿತ್ತು. ಆದರೆ, 2021ರ ಮೇ ತಿಂಗಳಲ್ಲಿ 2,36,30,000 ರೂ. ಮಾತ್ರ ಸಂದಾಯವಾಗಿದೆ. ಕರೊನಾ 2ನೇ ಅಲೆಯ ತೀವ್ರತೆಯನ್ನು ತಗ್ಗಿಸಲು ಜಾರಿಗೊಳಿಸಲಾದ ಜನತಾ ಕರ್ಫ್ಯೂ ಹಾಗೂ ಲಾಕ್​ಡೌನ್ ನಿರ್ಬಂಧವು ಇದಕ್ಕೆ ಪ್ರಮುಖ ಕಾರಣವಾಗಿದೆ.

ಆಸ್ತಿ ತೆರಿಗೆ ಸೇರಿದಂತೆ ಎಲ್ಲ ರೀತಿಯ ಕರ ಪಾವತಿಗೆ ಅನುಕೂಲಕರವಾಗಿರುವ ಹು-ಧಾ ಅವಳಿ ನಗರದಲ್ಲಿನ ಎಚ್​ಡಿ-1 ಕೇಂದ್ರಗಳನ್ನು ಏಪ್ರಿಲ್ 27ರಿಂದ ಬಂದ್ ಮಾಡಲಾಗಿದೆ. ಇದರಿಂದ ಸಾರ್ವಜನಿಕರಿಗೆ ನೇರವಾಗಿ ಆಸ್ತಿ ತೆರಿಗೆ ಪಾವತಿಸಲು ಅವಕಾಶ ತಪ್ಪಿದೆ. ಲಾಕ್​ಡೌನ್ ಹಿನ್ನೆಲೆಯಲ್ಲಿ ಜನರು ಮನೆಯಿಂದ ಹೊರಗೆ ಬರುವ ಹಾಗಿಲ್ಲ. ಹೀಗಿರುವಾಗ, ಪಾಲಿಕೆ ಆನ್​ಲೈನ್ ಮೂಲಕ ಆಸ್ತಿ ತೆರಿಗೆ ಪಾವತಿಗೆ ಮಾತ್ರ ಅವಕಾಶ ಕಲ್ಪಿಸಿದೆ.

‘ಈಗ ಸಂಗ್ರಹವಾಗಿರುವ 2.36 ಕೋಟಿ ರೂಪಾಯಿ (ಮೇ ತಿಂಗಳಲ್ಲಿ) ಮೊತ್ತವು ಆನ್​ಲೈನ್ ಮೂಲಕವೇ ಪಾವತಿಯಾಗಿರುವವು’ ಎಂದು ಪಾಲಿಕೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕಳೆದ ವರ್ಷ ಏಪ್ರಿಲ್​ನಲ್ಲಿ: ಕಳೆದ ವರ್ಷ ಏಪ್ರಿಲ್​ನಲ್ಲೂ ಹೀಗೆಯೇ ಆಗಿತ್ತು. ಕರೊನಾ ಮೊದಲ ಅಲೆ ನಿಯಂತ್ರಣಕ್ಕೆ 2020ರ ಮಾರ್ಚ್-ಏಪ್ರಿಲ್​ನಲ್ಲಿ ದೇಶಾದ್ಯಂತ ಸಂಪೂರ್ಣ ಲಾಕ್​ಡೌನ್ ಜಾರಿಗೊಳಿಸಲಾಗಿತ್ತು. ಆಗ (2020ರ ಏಪ್ರಿಲ್) ಪಾಲಿಕೆಗೆ ಆಸ್ತಿ ತೆರಿಗೆ ಮೂಲಕ ಬರೀ 4.30 ಕೋಟಿ ರೂಪಾಯಿ ಸಂದಾಯವಾಗಿತ್ತು. 2021ರ ಏಪ್ರಿಲ್ ತಿಂಗಳಲ್ಲಿ 22.87 ಕೋಟಿ ರೂಪಾಯಿ ಸಂಗ್ರಹವಾಗಿದ್ದರೆ, ಮೇ ತಿಂಗಳಲ್ಲಿ 2.36 ಕೋಟಿ ರೂಪಾಯಿಗೆ ಕುಸಿದಿದೆ. ಮತ್ತೊಮ್ಮೆ ಲಾಕ್​ಡೌನ್ ಎಫೆಕ್ಟ್.

ಆಸ್ತಿ ತೆರಿಗೆ, ಜಾಹೀರಾತು ಕರ, ಟ್ರೇಡ್ ಲೈಸನ್ಸ್ ಶುಲ್ಕ, ರೋಡ್ ಕಟ್ಟಿಂಗ್ ಶುಲ್ಕ, ಕಟ್ಟಡ ಪರವಾನಗಿ ಶುಲ್ಕ, ಘನತ್ಯಾಜ್ಯ ವಿಲೇವಾರಿ ಸೆಸ್, ವಾಣಿಜ್ಯ ಮಳಿಗೆಗಳ ಸ್ಟಾಲೇಜ್ (ಬಾಡಿಗೆ)-ಇವು ಪಾಲಿಕೆಗೆ ಆದಾಯ ಮೂಲಗಳು. ಇವುಗಳಿಂದ ಪಾಲಿಕೆ 2021-22ನೇ ಸಾಲಿನಲ್ಲಿ 228 ಕೋಟಿ ರೂಪಾಯಿ ಆದಾಯ ನಿರೀಕ್ಷಿಸುತ್ತಿದೆ. ಇದರಲ್ಲಿ ಆಸ್ತಿ ತೆರಿಗೆಯ ಪಾಲೇ 97 ಕೋಟಿ ರೂಪಾಯಿ. ಪ್ರತಿ ವರ್ಷ ಏಪ್ರಿಲ್-ಮೇ ತಿಂಗಳಲ್ಲಿಯೇ ಶೇ. 45-50 ರಷ್ಟು ಆಸ್ತಿ ಮಾಲೀಕರು ತೆರಿಗೆ ಪಾವತಿಸುತ್ತಾರೆ. ಆದರೆ, ಕಳೆದ ವರ್ಷ ಏಪ್ರಿಲ್​ನಲ್ಲಿ, ಈ ವರ್ಷ ಮೇ ತಿಂಗಳಲ್ಲಿ ಲಾಕ್​ಡೌನ್ ಹೊಡೆತ ಬಲವಾಗಿ ಬಿದ್ದಿದೆ.

ಪ್ರಸಕ್ತ ಸಾಲಿನ ಜೂನ್ 30ರವರೆಗೆ ಆಸ್ತಿ ತೆರಿಗೆ ಪಾವತಿ ಮೇಲೆ ಶೇ. 5ರಷ್ಟು ರಿಯಾಯಿತಿ ನೀಡಲಾಗಿದೆ. ಆದರೆ, ರಾಜ್ಯಸರ್ಕಾರ ಲಾಕ್​ಡೌನ್ ಅನ್ನು ಜೂನ್ 14ರವರೆಗೆ ವಿಸ್ತರಿಸಿದೆ. ಅಲ್ಲಿಯವರೆಗೆ ಸಾರ್ವಜನಿಕರು ಆಸ್ತಿ ತೆರಿಗೆ ಪಾವತಿಗೆ ಆನ್​ಲೈನ್ ಮಾರ್ಗವನ್ನೇ ಅವಲಂಬಿಸಬೇಕಿದೆ. ಧಾರವಾಡ ಜಿಲ್ಲೆ ಸೇರಿ ರಾಜ್ಯದಲ್ಲಿ ಕರೊನಾ ಪ್ರಕರಣಗಳು ಇಳಿಮುಖವಾಗಿದೆ. ಹಾಗಾಗಿ, ಜೂನ್ 14ರ ಬಳಿಕ ಲಾಕ್​ಡೌನ್ ನಿಯಮಗಳಲ್ಲಿ ಸಡಿಲಿಕೆ ಸಿಗುವ ನಿರೀಕ್ಷೆ ಇದೆ.

2.83 ಲಕ್ಷ ಆಸ್ತಿಗಳಿವೆ

ಹು-ಧಾ ಅವಳಿ ನಗರದಲ್ಲಿ 1,94,214 ವಾಸದ ಮನೆ, ವಾಣಿಜ್ಯ ಕಟ್ಟಡ ಮತ್ತು 89,102 ಖಾಲಿ ಜಾಗ ಸೇರಿ ಒಟ್ಟು 2,83,316 ಆಸ್ತಿಗಳಿವೆ. ಪ್ರಸಕ್ತ ಸಾಲಿನಲ್ಲಿ ಕರ್ನಾಟಕ ಸರ್ಕಾರ ‘ಕರ್ನಾಟಕ ಪೌರಸಭೆಗಳ ಅಧಿನಿಯಮ 1964’ ಹಾಗೂ ‘ಕರ್ನಾಟಕ ಮಹಾನಗರ ಪಾಲಿಕೆಗಳ ಅಧಿನಿಯಮ 1976’ ಕ್ಕೆ ತಿದ್ದುಪಡಿ ಮಾಡಿ ಆಸ್ತಿಯ ಮಾರುಕಟ್ಟೆ ಮೌಲ್ಯದ ಮಾರ್ಗಸೂಚಿ ಬೆಲೆಯ ಆಧಾರದ ಮೇಲೆ ಆಸ್ತಿ ತೆರಿಗೆ ಆಕರಣೆ ಮಾಡಲಾಗುತ್ತಿದೆ.