ರಾಮನಗರ: ಜಾರಿ ನಿರ್ದೇಶನಾಲಯದ (ಇಡಿ) ಹೆಸರಲ್ಲಿ ಬೆದರಿಸಿ ವ್ಯಕ್ತಿಯೊಬ್ಬರಿಂದ 2.2 ಲಕ್ಷ ರೂ.ಗಳನ್ನು ವಂಚಿಸಿರುವ ಪ್ರಕರಣ ಕುಂಬಳಗೂಡು ಠಾಣೆಯಲ್ಲಿ ದಾಖಲಾಗಿದೆ.
ಕೆಂಗೇರಿ ಸಮೀಪದ ಹುಣಸೇಮರದ ಪಾಳ್ಯದ ನಿವಾಸಿ ಗಿರೀಶ್ ಹಣ ಕಳೆದುಕೊಂಡವರು. ಮಂಗಳವಾರ ಬೆಳಗ್ಗೆ ಅಪರಿಚಿತ ಮೊಬೈಲ್ ಸಂಖ್ಯೆಯಿಂದ ಕರೆಯೊಂದು ಬಂದಿದ್ದು, ನೀವು ಮುಂಬೈ ಮೂಲಕ ಚೀನಾಗೆ ಕಳುಹಿಸಿರುವ ಪಾರ್ಸಲ್ನಲ್ಲಿ ಅಕ್ರಮ ವಸ್ತುಗಳು ಪತ್ತೆಯಾಗಿದ್ದು, ಇವುಗಳನ್ನು ಮುಂಬೈ ಕಸ್ಟ್ಂ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ನೀವು ಇತ್ತೀಚಿಗೆ ಮುಂಬೈಗೆ ಬಂದಿದ್ರಾ? ಎಂದು ಪ್ರಶ್ನೆ ಮಾಡಿದ್ದಾರೆ.
ಅಪರಿಚಿತನ ಪ್ರಶ್ನೆಗೆ ಗಿರೀಶ್ ಹೌದು ಎಂದು ಉತ್ತರಿಸಿದ್ದಾರೆ. ನಂತರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದು, ಇದನ್ನು ಮುಂಬೈ ಪೊಲೀಸರಿಗೆ ಕರೆಯನ್ನು ವರ್ಗಾವಣೆ ಮಾಡುತ್ತೇನೆ ಎಂದು ಹೇಳಿ ಮತ್ತೊಂದು ಸಂಖ್ಯೆಗೆ ವರ್ಗಾವಣೆ ಮಾಡಿದ್ದಾನೆ. ಆ ಕಡೆಯಿಂದ ಮಾತನಾಡಿದ ವ್ಯಕ್ತಿ, ಇದು ರಾಷ್ಟ್ರೀಯ ಗೌಪ್ಯತೆ ಕಾಪಾಡುವ ಮಾಹಿತಿ. ಆದ್ದರಿಂದ ನಿಮ್ಮನ್ನು ವಿಡಿಯೋ ಮೂಲಕವೇ ವಿಚಾರಣೆ ಮಾಡಲಾಗುತ್ತದೆ. ಇದನ್ನು ನಿಮ್ಮ ಪತ್ನಿಗೂ ತಿಳಿಸಬೇಡಿ ಎನ್ನುವ ನಿರ್ದೇಶನ ನೀಡಿ, ಸ್ಕೈಪೇ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳುವಂತೆ ಹೇಳಿದ್ದಾನೆ.
ನಂತರ ಈ ಆ್ಯಪ್ ಮೂಲಕವೇ ಸುಮಾರು 2 ಗಂಟೆ ವಿಚಾರಣೆ ನಡೆಸಿ ನಿಮ್ಮ ಬಳಿ ಇರುವ ಹಣ ಅಕ್ರಮವಾಗಿದೆ ಎಂದು ಹೇಳಿ ಅವರ ಖಾತೆಗೆ ವರ್ಗಾವಣೆ ಮಾಡಿಸಿಕೊಂಡಿದ್ದಾನೆ.
ಇದಾದ ನಂತರ ಅನುಮಾನಗೊಂಡ ಗಿರೀಶ್, ವಿಡಿಯೋ ಸ್ವಿಚ್ಆನ್ ಮಾಡುವಂತೆ ಹೇಳಿದಾಗ, ಇದು ಗುಪ್ತಚರ ವಿಚಾರ ಹಾಗೆ ಮಾಡಲು ಸಾಧ್ಯವಿಲ್ಲ ಎಂದು ಮಾತನಾಡುತ್ತಿದ್ದವ ಹೇಳಿದ್ದಾನೆ. ಈ ವೇಳೆ ಮೋಸ ಹೋಗಿರುವುದನ್ನು ಅರಿತ ಗಿರೀಶ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.